Asianet Suvarna News Asianet Suvarna News

ವಾರದಿಂದ ಪೆಟ್ರೋಲ್, ಡಿಸೇಲ್ ದರ ಏರಿಕೆ ಇಲ್ಲ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೆಲೆಗೆ ಅನುಗುಣವಾಗಿ ನಿತ್ಯವೂ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಪರಿಷ್ಕೃರಿಸುತ್ತಿದ್ದ ತೈಲ ಕಂಪನಿಗಳು ಕಳೆದೊಂದು ವಾರದಿಂದ, ಬೆಲೆಯಲ್ಲಿ ಯಾವುದೇ ಏರಿಳಿಕೆ ಮಾಡಿಲ್ಲ. ಇದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ.

No Petrol diesel Price Hike

ನವದೆಹಲಿ (ಮೇ. 01): ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೆಲೆಗೆ ಅನುಗುಣವಾಗಿ ನಿತ್ಯವೂ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಪರಿಷ್ಕೃರಿಸುತ್ತಿದ್ದ ತೈಲ ಕಂಪನಿಗಳು ಕಳೆದೊಂದು ವಾರದಿಂದ, ಬೆಲೆಯಲ್ಲಿ ಯಾವುದೇ ಏರಿಳಿಕೆ ಮಾಡಿಲ್ಲ. ಇದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ.

ಹಿಂದಿನ ವಾರ ಪೆಟ್ರೋಲ್ ಬೆಲೆ 4 ವರ್ಷದ ಗರಿಷ್ಠಕ್ಕೆ ಮತ್ತು ಡೀಸೆಲ್ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದಾಗ ವಿಪಕ್ಷಗಳು ಇದರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು. ಕರ್ನಾಟಕ ಚುನಾವಣೆಯ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿರುವಾಗಲೇ ತೈಲೋತ್ಪನ್ನಗಳ ಬೆಲೆ ಏರುಮುಖದಲ್ಲಿ ಸಾಗಿದ್ದು ಕೇಂದ್ರ ಸರ್ಕಾರವನ್ನು ಚಿಂತೆಗೀಡು ಮಾಡಿತ್ತು. ಈ ಹಿನ್ನೆಲೆಯಲ್ಲಿ ಅಬಕಾರಿ ಸುಂಕ ಕಡಿತ ಮಾಡುವ ಮೂಲಕ ಸರ್ಕಾರ, ಜನಸಾಮಾನ್ಯರಿಗೆ ನೆರವಾಗಬಹುದೆಂದು ವರದಿಗಳು ಹೇಳಿದ್ದವು. ಆದರೆ ಇಂಥ ಯಾವುದೇ ಸಾಧ್ಯತೆ ಇಲ್ಲ ಎಂದು ಬಳಿಕ ಕೇಂದ್ರ ಹಣಕಾಸು ಸಚಿವಾಲಯದ ಮೂಲಗಳು ಖಚಿತಪಡಿಸಿದ್ದವು.

ಮತ್ತೊಂದೆಡೆ ಏರುಗತಿಯಲ್ಲಿದ್ದ  ಪೆಟ್ರೋಲ್, ಡೀಸೆಲ್ ದರಗಳನ್ನು ದಿನನಿತ್ಯ ಪರಿಷ್ಕರಿಸ ಬಾರದು ಎಂದು ಕೇಂದ್ರ ಸರ್ಕಾರ ಸೂಚಿಸಿದೆ ಎಂದೂ ವರದಿಯಾಗಿತ್ತು. ಆದರೂ ನಂತರ ಕೆಲ ದಿನಗಳ ಕಾಲ ದರ ಏರಿಕೆಯಾಗಿತ್ತು. ಆದರೆ ಇದೀಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಕೆಯಾಗಿದ್ದರೂ, ಕಳೆದೊಂದು ವಾರದಿಂದ ದರ ಏರಿಕೆ-ಇಳಿಕೆ ಮಾಡದೇ ಸುಮ್ಮನಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ದಿಲ್ಲಿಯಲ್ಲಿ ಪೆಟ್ರೋಲ್ ದರ ಕಳೆದ ಒಂದು ವಾರದಿಂದ ಲೀಟರ್‌ಗೆ 74.63 ರು. ಇದೆ. ಅಲ್ಲದೆ, ಡೀಸೆಲ್ 65.93 ರು. ಇದೆ. ಯಾವುದೇ ಏರಿಳಿತ ಕಂಡಿಲ್ಲ. ಇದರಿಂದಾಗಿ ಸರ್ಕಾರವು  ಪರೋಕ್ಷವಾಗಿ ತೈಲ ಕಂಪನಿಗಳ ಮೇಲೆ ಒತ್ತಡ ಹೇರಿ ದರ ಏರಿಳಿಕೆ ನಿಲ್ಲಿಸಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಈ ಹಿಂದೆ ಏಪ್ರಿಲ್ 16 ರಿಂದ 19 ರ ವರೆಗೂ ದರ ಪರಿಷ್ಕರಿಸದೇ ತೈಲ ಕಂಪನಿಗಳು ಸುಮ್ಮನಿದ್ದವು. ದರ ಏರಿಳಿಸುವ ಬಗ್ಗೆ ತೈಲ ಕಂಪನಿಗಳಿಗೆ ನೀಡಿದ  ಸ್ವಾತಂತ್ರ್ಯಕ್ಕೆ ಈಗ ಧಕ್ಕೆ ಬಂದಂತಾಗಿದ್ದು, ಅವುಗಳ ಷೇರು ಮೌಲ್ಯ ಏಪ್ರಿಲ್ 11 ರಿಂದ ಶೇ.6ರಿಂದ 16 ರಷ್ಟು ಇಳಿಕೆಯಾಗಿದೆ.

Follow Us:
Download App:
  • android
  • ios