ಸಮಾಜ ಘಾತುಕ, ಕಳ್ಳತನ ದರೋಡೆ ಇನ್ನಿತರ ಅಪರಾಧ ಚಟುವಟಿಕೆಗಳ ವಿರುದ್ಧ ಈ ಹಳ್ಳಿಯ ಜನರು ಪೊಲೀಸ್ ಠಾಣೆಗೆ ದೂರು ಕೊಡಬೇಕಾದರೆ 12ರಿಂದ 22ಕಿಮೀ ದೂರ ಪ್ರಯಾಣಿಸಬೇಕಾದ ಅನಿವಾರ್ಯತೆ ಇದೆ. ಇಲ್ಲವಾದಲ್ಲಿ ದೂರು ನೀಡುವ ವಿಚಾರದಿಂದಲೇ ದೂರ ಉಳಿಯಬೇಕಿದೆ.

ಬೆಳಗಾವಿ (ನ.23): ಪೊಲೀಸ್ ಇಲಾಖೆ ಜನಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು ಎಂಬುದು ಸರ್ಕಾರ ಹಾಗೂ ಹಿರಿಯ ಅಧಿಕಾರಿಗಳ ಆಶಯ. ಈ ಬಗ್ಗೆ ಅಧಿಕಾರಿಗಳು ಪದೆ ಪದೇ ತಮ್ಮ ಭಾಷಣಗಳಲ್ಲಿ ಹೇಳೇ ಹೇಳುತ್ತಿರುತ್ತಾರೆ. ಜತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಪೊಲೀಸರು ಜನಸ್ನೇಹಿ ಯಾಗಬೇಕು ಎಂದು ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ಆದರೆ ಜಿಲ್ಲೆಯಲ್ಲಿ ಕೆಲ ಗ್ರಾಮಗಳ ಜನತೆ ಠಾಣೆಗೆ ದೂರು ನೀಡಬೇಕೆಂದರೂ 20ರಿಂದ 22 ಕಿ.ಮೀ.ವರೆಗೂ ಪ್ರಯಣಿಸಬೇಕು. ಹೀಗಾಗಿ ಜನಸ್ನೇಹಿ ಯಾಗಬೇಕಾದ ಪೊಲೀಸ್ ಇಲಾಖೆ ಜನರಿಂದ ದೂರ ಬಲುದೂರ ಎಂಬಂತಾಗಿದೆ.

ಸಮಾಜ ಘಾತುಕ, ಕಳ್ಳತನ ದರೋಡೆ ಇನ್ನಿತರ ಅಪರಾಧ ಚಟುವಟಿಕೆಗಳ ವಿರುದ್ಧ ಈ ಹಳ್ಳಿಯ ಜನರು ಪೊಲೀಸ್ ಠಾಣೆಗೆ ದೂರು ಕೊಡಬೇಕಾದರೆ 12ರಿಂದ 22ಕಿಮೀ ದೂರ ಪ್ರಯಾಣಿಸಬೇಕಾದ ಅನಿವಾರ್ಯತೆ ಇದೆ. ಇಲ್ಲವಾದಲ್ಲಿ ದೂರು ನೀಡುವ ವಿಚಾರದಿಂದಲೇ ದೂರ ಉಳಿಯಬೇಕಿದೆ. ನಗರ ಮತ್ತು ಗ್ರಾಮೀಣ ಪ್ರದೇಶದ ಜನರಿಗೆ ಸೂಕ್ತ ರಕ್ಷಣೆ, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಗೃಹ ಇಲಾಖೆ ಸತತ ಪ್ರಯತ್ನಿಸುತ್ತಿದೆ. ಆದರೆ, ಜಿಲ್ಲೆಯ 1191 ಹಳ್ಳಿಯ 48.5 ಲಕ್ಷ ಜನಸಂಖ್ಯೆ ರಕ್ಷಣೆಗಾಗಿ ಜಿಲ್ಲೆಯಲ್ಲಿ 33 ಪೊಲೀಸ್ ಠಾಣೆ, 17 ಉಪ ಪೊಲೀಸ್ ಠಾಣೆಗಳು ಕಾರ್ಯನಿರ್ವಹಿಸುತ್ತಿವೆ.

ಯಾವ ಠಾಣೆಗಳವು: ಜಿಲ್ಲೆಯ ಕುಲಗೋಡ, ಮುರಗೋಡ, ಕಟಕೋಳ, ರಾಮದುರ್ಗ, ರಾಯಬಾಗ, ಕುಡಚಿ, ಅಥಣಿ, ಚಿಕ್ಕೋಡಿ ಪೊಲೀಸ್ ಠಾಣೆಗಳ ವ್ಯಾಪ್ತಿಯ 240 ಅಧಿಕ ಹಳ್ಳಿಯ ಜನರು ಈ ರೀತಿ ಸಮಸ್ಯೆ ಎದುರಿಸುತ್ತಿರುವಂತಾಗಿದೆ. ಜಿಲ್ಲೆಯಲ್ಲಿ ಅತೀ ಹೆಚ್ಚು ಹಳ್ಳಿಗಳನ್ನು ಕುಲಗೋಡ- 40, ಕಟಕೋಳ - 63, ರಾಮದುರ್ಗ -59, ಮುರಗೋಡ -61 (ಯರಗಟ್ಟಿ ಉಪ ಠಾಣೆ -26), ರಾಯಬಾಗ- 41, ಕುಡಚಿ - 48, ಚಿಕ್ಕೋಡಿ - 47, ಅಥಣಿ- 52 ಹಳ್ಳಿಗಳನ್ನು ಹೊಂದಿರುವ ಠಾಣೆಗಳಾಗಿವೆ. ಈ ಠಾಣೆಗಳ ವ್ಯಾಪ್ತಿಯಲ್ಲಿ 437ಕ್ಕೂ ಅಧಿಕ ಹಳ್ಳಿಗಳು ಬರುತ್ತವೆ. ಇದರಲ್ಲಿ 240ಕ್ಕೂ ಹಳ್ಳಿಗಳ ಜನರು ಠಾಣೆಗಳಿಗೆ ದೂರು ಕೊಡಬೇಕಾದರೆ ಕನಿಷ್ಠ 12 ರಿಂದ 22ಕಿಮೀ ಪ್ರಯಾಣಿಸಬೇಕು. ಈ ಹಳ್ಳಿಯ ಜನರು ಮನೆ ಕಳ್ಳತನ, ದರೋಡೆ ಇನ್ನಿತರ ಅಪರಾಧ ಚಟುವಟಿಕೆಗಳ ಕುರಿತು ದೂರು ಕೊಡಬೇಕಾದರೆ ನೂರಾರು ರೂಪಾಯಿ ವೆಚ್ಚ ಮಾಡಿಕೊಂಡು ಪೊಲೀಸ್ ಠಾಣೆಗೆ ಹೋಗುವ ಪರಿಸ್ಥಿತಿ ಇದೆ.

ನಿಯಮವೇನಿದೆ?:ಕಾನೂನು ಸುವ್ಯವಸ್ಥೆ ಹಾಗೂ ಜನರ ರಕ್ಷಣೆಗಾಗಿ ಕನಿಷ್ಠ 1000 ರಿಂದ 2000 ಜನಸಂಖ್ಯೆಗೆ ಒಂದು ಪೊಲೀಸ್ ಠಾಣೆ ಇರಬೇಕು. 8ರಿಂದ 12 ಕಿಮೀ ಒಳಗೆ ಒಂದು ಪೊಲೀಸ್ ಠಾಣೆ ಇರಬೇಕು ಎಂಬುದು ನಿಯಮ. ಆದರೆ, ಗೋಕಾಕ ತಾಲೂಕಿನ ಕುಲಗೋಡ ಪೊಲೀಸ್ ಠಾಣೆ ವ್ಯಾಪ್ತಿಯ 40 ಹಳ್ಳಿಯ ಜನರು ದೂರು ಕೊಡಲು 10 ರಿಂದ 20 ಕಿಮೀ ಬರಬೇಕು. ಮತ್ತೊಂದಡೆ ಮುರಗೋಡೆ, ಕಟಕೋಳ ಪೊಲೀಸ್ ಠಾಣೆ ವ್ಯಾಪ್ತಿಯ 85 ಹಳ್ಳಿಯ ಜನರು 14 ರಿಂದ 22 ಕಿಮೀ ದೂರ ಪ್ರಯಾಣಿಸಬೇಕು. ಇದಕ್ಕಾಗಿ ಒಂದು ದಿನ ಕೂಲಿ ಕೆಲಸ ಬಿಟ್ಟು 100 ರು. ರಿಂದ 150ರು. ವರೆಗೆ ಖರ್ಚು ಮಾಡಬೇಕು. ಒಂದೊಂದು ಬಾರಿ ಠಾಣೆಯಲ್ಲಿ ಅಧಿಕಾರಿಗಳು ಇರುವುದಿಲ್ಲ. ಮತ್ತೆ ಮರುದಿನ ಬರಬೇಕು. ಹೀಗಾದರೆ ಪೊಲೀಸ್ ಇಲಾಖೆ ಅದ್ಹ್ಯಾಗೆ ಜನಸ್ನೇಹಿಯಾದಂತಾಗುತ್ತದೆ ಎಂಬುದು ಗ್ರಾಮಸ್ಥರ ಪ್ರಶ್ನೆಯಾಗಿದೆ.

ಸ್ಥಳಕ್ಕೆ ಬಾರದ ಪೊಲೀಸರು: ಠಾಣೆಗಳಿಂದ ಹಳ್ಳಿಗಳು 20ಕಿಮೀರವರೆಗೆ ದೂರು ಇರುವ ಹಿನ್ನೆಲೆ ಜಾತ್ರೆ, ಮೆರವಣಿಗೆ, ಸಮಾರಂಭ ಇನ್ನಿತರ ಸಾರ್ಜನಿಕ ಕಾರ್ಯಕ್ರಮಗಳಿಗೆ ಸಮಯಕ್ಕೆ ಸರಿಯಾಗಿ ಬರುವುದಿಲ್ಲ. ಎಲ್ಲವೂ ಮುಗಿದ ಅರ್ಧ ಗಂಟೆ ಬಳಿಕ ಬರುತ್ತಾರೆ. ಇಲ್ಲವೇ ಬೇರೆ ಕೆಲಸ ಇದೆ ಎಂದು ಹೇಳಿ ಬರುವುದಿಲ್ಲ. ಕೆಲವು ಸಂದರ್ಭಗಳಲ್ಲಿ ಜನರನ್ನೇ ಪೊಲೀಸ್ ಠಾಣೆಗೆ ಕರೆಯಿಸಿ ವಿಚಾರಣೆ ಮಾಡುತ್ತಿದ್ದಾರೆ ಎಂಬುದು ಸಾರ್ವಜನಿಕರ ದೂರುತ್ತಿದ್ದಾರೆ.

ವರದಿ: ಜಗದೀಶ ವಿರಕ್ತಮಠ - ಕನ್ನಡಪ್ರಭ