Asianet Suvarna News Asianet Suvarna News

ಇನ್ಯಾವ ಬಿಜೆಪಿ ಎಂಪಿಗೂ ಇಲ್ಲ ಬಿಜೆಪಿ ಟಿಕೆಟ್?

ಯಡಿಯೂರಪ್ಪ ಮತ್ತು ಶ್ರೀರಾಮುಲು ಹೊರತು ಪಡಿಸಿ ಬೇರೆ ಯಾರಿಗೂ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವುದಿಲ್ಲವೆಂದು ಬಿಜೆಪಿ ಹೈ ಕಮಾಂಡ್ ಸ್ಪಷ್ಟಪಡಿಸಿದೆ.

No other BJP MPs to get ticket for Karnataka Election

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಈಗ ಘೋಷಿತವಾಗಿರುವ ಬಿ.ಎಸ್‌.ಯಡಿಯೂರಪ್ಪ ಮತ್ತು ಬಿ.ಶ್ರೀರಾಮುಲು ಅವರಿಬ್ಬರನ್ನು ಹೊರತುಪಡಿಸಿ ಇನ್ನುಳಿದ ಯಾವುದೇ ಸಂಸದರಿಗೆ ಟಿಕೆಟ್‌ ಸಿಗುವ ಸಾಧ್ಯತೆ ಕ್ಷೀಣಿಸಿದೆ.

ಇನ್ನುಳಿದ ಯಾವುದೇ ಸಂಸದರನ್ನು ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಸುವುದು ಬೇಡ ಎಂಬ ಸೂಚನೆ ರೂಪದ ಅಭಿಪ್ರಾಯವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ರಾಜ್ಯ ನಾಯಕರಿಗೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಹೀಗಾಗಿ, ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಯುವ ಮೂಲಕ ರಾಜ್ಯ ರಾಜಕಾರಣಕ್ಕೆ ಆಗಮಿಸುವ ಆಶಯ ಹೊಂದಿದ್ದ ಸಂಸದರಾದ ಕರಡಿ ಸಂಗಣ್ಣ, ಶೋಭಾ ಕರಂದ್ಲಾಜೆ ಮತ್ತಿತರರಿಗೆ ನಿರಾಸೆ ಉಂಟಾದಂತಾಗಿದೆ.

ಕೊಪ್ಪಳದ ಕರಡಿ ಸಂಗಣ್ಣ ಅವರ ಬೇಡಿಕೆ ಹಿನ್ನೆಲೆಯಲ್ಲಿ ಗುರುವಾರ ಖುದ್ದು ಕರಡಿ ಸಂಗಣ್ಣ ಅವರೊಂದಿಗೆ ಮಾತುಕತೆ ನಡೆಸುವ ಮೊದಲು ಅಮಿತ್‌ ಶಾ ಅವರು ಪಕ್ಷದ ಚುನಾವಣಾ ಉಸ್ತುವಾರಿ ಪ್ರಕಾಶ್‌ ಜಾವಡೇಕರ್‌, ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ಪಕ್ಷದ ಇತರ ರಾಜ್ಯ ನಾಯಕರೊಂದಿಗೆ ಅಮಿತ್‌ ಶಾ ಅವರು ಸುದೀರ್ಘ ಸಮಾಲೋಚನೆ ನಡೆಸಿದರು.

ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್‌ ನೀಡಬೇಕು ಎಂಬ ಪಕ್ಷದ ಕೆಲವು ನಾಯಕರ ಒತ್ತಾಸೆ ಹಿನ್ನೆಲೆಯಲ್ಲಿ ಅವರಿಗೆ ನೀಡಿದಲ್ಲಿ ತಮಗೂ ನೀಡಬೇಕು ಎಂಬ ಬೇಡಿಕೆಯನ್ನು ಕರಡಿ ಸಂಗಣ್ಣ ಬಹಿರಂಗವಾಗಿಯೇ ಪ್ರಸ್ತಾಪಿಸಿದ್ದರು. ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ತಾವು ಸಂಸದ ಸ್ಥಾನ ತ್ಯಜಿಸಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಬಗ್ಗೆ ನಿರ್ಧಾರ ಕೈಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಅಮಿತ್‌ ಶಾ ಅವರು ಈ ಬೇಡಿಕೆಗೆ ಬ್ರೇಕ್‌ ಹಾಕುವ ಪ್ರಯತ್ನ ಮಾಡಿದರು ಎನ್ನಲಾಗಿದೆ.

ಯಡಿಯೂರಪ್ಪ ಅವರು ರಾಜ್ಯಾಧ್ಯಕ್ಷರಾಗಿದ್ದರಿಂದ ಮತ್ತು ಪರಿಶಿಷ್ಟಪಂಗಡದ ಮತಗಳ ಮೇಲೆ ಕಣ್ಣಿಟ್ಟು ಶ್ರೀರಾಮುಲು ಅವರಿಗೆ ಸಂಸದರಾಗಿದ್ದರೂ ವಿಧಾನಸಭಾ ಚುನಾವಣೆಯ ಟಿಕೆಟ್‌ ನೀಡಲಾಗಿದೆ. ಹಾಗಂತ ಇನ್ನುಳಿದ ಸಂಸದರಿಗೆ ಟಿಕೆಟ್‌ ನೀಡುವುದರಿಂದ ಮುಂದೆ ಹಲವು ಕ್ಷೇತ್ರಗಳ ಲೋಕಸಭೆಯ ಉಪಚುನಾವಣೆಗಳು ಎದುರಾಗಬಹುದು. ಅದು ಪಕ್ಷಕ್ಕೆ ಹಿನ್ನೆಡೆಯಾದಲ್ಲಿ ರಾಷ್ಟಾ್ರದ್ಯಂತ ಕೆಟ್ಟಸಂದೇಶ ರವಾನೆಯಾಗಬಹುದು ಎಂಬ ಕಾರಣಕ್ಕಾಗಿ ಇನ್ನುಳಿದ ಸಂಸದರಿಗೆ ಟಿಕೆಟ್‌ ನೀಡುವುದು ಬೇಡ ಎಂಬ ಅಭಿಪ್ರಾಯವನ್ನು ಅಮಿತ್‌ ಶಾ ಅವರು ನೀಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಕರಡಿ ಸಂಗಣ್ಣ ಅವರೊಂದಿಗೆ ಯಡಿಯೂರಪ್ಪ ಸೇರಿದಂತೆ ಇತರ ನಾಯಕರು ಪ್ರತ್ಯೇಕವಾಗಿ ಮಾತನಾಡಿದ್ದು, ಮುಂದಿನ ಲೋಕಸಭಾ ಚುನಾವಣೆಯ ನಂತರ ರಚನೆಯಾಗುವ ಕೇಂದ್ರದ ಹೊಸ ಸರ್ಕಾರದಲ್ಲಿ ಮಂತ್ರಿ ಸ್ಥಾನ ನೀಡುವ ಬಗ್ಗೆ ಗಂಭೀರವಾಗಿ ಪರಿಶೀಲಿಸಲಾಗುವುದು ಎಂಬ ಭರವಸೆಯನ್ನೂ ನೀಡಿದ್ದಾರೆ ಎಂದು ತಿಳಿದು ಬಂದಿದೆ.

Follow Us:
Download App:
  • android
  • ios