ಬೆಂಗಳೂರಿನ ಜಯನಗರದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ನಿರ್ಮಿಸಿರುವ ತಾಯಿ ಮತ್ತು ಮಕ್ಕಳ ವಿಭಾಗದ ನೂತನ ಕಟ್ಟಡವನ್ನು ಆರೋಗ್ಯ ಸಚಿವ ರಮೇಶ್‌ಕುಮಾರ್‌ ಮತ್ತು ಕೇಂದ್ರ ಸಚಿವ ಅನಂತಕುಮಾರ್‌ ಜಂಟಿಯಾಗಿ ಶನಿವಾರ ಉದ್ಘಾಟಿಸಿದರು.

ಬೆಂಗಳೂರು (ಫೆ/06): ಬಿಪಿಎಲ್‌ ಹಾಗೂ ಎಪಿಎಲ್‌ ಕಾರ್ಡುದಾರರಿಗಾಗಿ ಜಾರಿಗೆ ತರಲಾಗಿರುವ 11 ಆರೋಗ್ಯ ಸಂಬಂಧಿ ಯೋಜನೆಗಳನ್ನು ಒಂದೇ ಸೂರಿನಡಿ ತಂದು ಅರ್ಹರಿಗೆ ‘ಯೂನಿವರ್ಸಲ್‌ ಹೆಲ್ತ್‌ ಕಾರ್ಡ್‌' ನೀಡಲು ನಿರ್ಧರಿಸಲಾಗಿದೆ ಎಂದು ಆರೋಗ್ಯ ಸಚಿವ ಕೆ.ಆರ್‌.ರಮೇಶ್‌ಕುಮಾರ್‌ ತಿಳಿಸಿದ್ದಾರೆ.

ಆಸ್ಪತ್ರೆಯ ಆವರಣದಲ್ಲಿ ಶನಿವಾರ ತಾಯಿ ಮತ್ತು ಮಕ್ಕಳ ವಿಭಾಗದ (ಎಂಸಿಎಚ್‌) ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಆರೋಗ್ಯ ಸಂಬಂಧಿ ಯೋಜನೆಗಳ ಸೇವೆ ಪಡೆದು​ಕೊಳ್ಳಲು ಎಪಿಎಲ್‌ ಮತ್ತು ಬಿಪಿಎಲ್‌ ಕುಟುಂಬ ಎಂದು ವರ್ಗೀಕರಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ವರ್ಗೀಕರಣ ಇರುವುದಿಲ್ಲ. ಇಷ್ಟೂಯೋ​ಜನೆ​ಗಳನ್ನು ಒಂದೇ ಸೂರಿನಡಿ ತಂದು ‘ಯೂನಿವ​ರ್ಸೆಲ್‌ ಹೆಲ್ತ್‌ ಕಾರ್ಡ್‌' ನೀಡಲಾಗುವುದು. ಇದ​ರಿಂದ ರಾಜ್ಯದಲ್ಲಿರುವ ಯಾವ ಸರ್ಕಾರಿ ಆಸ್ಪ​​ತ್ರೆ​​​ಯಲ್ಲಾದರೂ ಚಿಕಿತ್ಸೆ ಪಡೆಯಬಹುದು. ಒಂದು ವೇಳೆ ಸರ್ಕಾರಿ ಆಸ್ಪತ್ರೆಯಲ್ಲಿ ಅಗತ್ಯ ಚಿಕಿತ್ಸಾ ಸೌಲಭ್ಯ ಇಲ್ಲದಿದ್ದರೆ, ಖಾಸಗಿ ಆಸ್ಪತ್ರೆಯಲ್ಲಿ ಅದನ್ನು ಪಡೆಯಬಹುದು. ಇದಕ್ಕೆ ತಗಲುವ ಸಂ​ಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಹೇಳಿದರು.

ಜಯನಗರ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ: ಸರ್ಕಾರಿ ಆಸ್ಪತ್ರೆ ಹಾಗೂ ಜನರ ಆರೋಗ್ಯ ಎರ​ಡನ್ನೂ ಕಾಪಾಡುವುದು ಸರ್ಕಾರದ ಹೊಣೆಯಾಗಿ​ರುತ್ತದೆ. ಈ ಹಿನ್ನೆಲೆಯಲ್ಲಿ ಜಯನಗರದ ಸಾರ್ವ​ಜನಿಕ ಆಸ್ಪತ್ರೆಯನ್ನು ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ​​ಯಾಗಿ ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಅಂತೆ​ಯೇ ಜನರಲ್‌ ಮೆಡಿಸಿನ್‌, ಜನರಲ್‌ ಸರ್ಜರಿ, ಅನಸ್ತೇಶಿಯಾ, ಓಬಿಜಿ, ಆರ್ಥೋಪೆಡಿಕ್ಸ್‌ ವಿಷಯ​ಗಳ​ಲ್ಲಿ ಡಿಎನ್‌ಬಿ ಕೋರ್ಸ್‌ಗಳನ್ನು ಆರಂಭಿ​ಸಲು ಸರ್ಕಾ​ರ ಚಿಂತಿಸಿದೆ. ಸರ್ವತೋಮುಖ ಅಭಿ​ವೃದ್ಧಿ ಉದ್ದೇಶ​ದಿಂದ ಆಸ್ಪತ್ರೆಯ ಆವರಣದಲ್ಲಿರುವ ರಾಜೀವ್‌ ಗಾಂಧಿ ಆಸ್ಪತ್ರೆಯನ್ನು ಬೇರೆಡೆಗೆ ಸ್ಥಳಾಂ​ತರಿಸಲು ತೀರ್ಮಾನಿಸಲಾಗಿದೆ ಎಂದರು.

ಜನರಲ್ಲಿ ಸರ್ಕಾರಿ ಆಸ್ಪತ್ರೆಗಳ ಬಗ್ಗೆ ನಕಾರಾತ್ಮಕ ಮನೊಭಾವವಿದೆ. ಆಸ್ಪತ್ರೆ ಸರಿ ಇಲ್ಲ. ಗುಣಮಟ್ಟದ ಚಿಕಿತ್ಸೆ ದೊರೆಯುವುದಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತವೆ. ಈ ಮೂಲಕ ಬಡವರ ನೈತಿಕ ಬೆಂ​ಬಲ ಕುಗ್ಗಿಸಲಾಗುತ್ತಿದೆ. ಸರ್ಕಾರಿ ಆಸ್ಪತ್ರೆಗಳು ದೇವಾ​ಲಯಗಳಾಗಬೇಕು. ಈ ಆಸ್ಪತ್ರೆ ನಮ್ಮದು ಎಂದು ಅಪ್ಪಿಕೊಳ್ಳುವವರೆಗೂ ಈ ದೇಶ ಉದ್ಧಾರ​ವಾಗುವುದಿಲ್ಲ. ಪ್ರಸ್ತುತ ಸಂದರ್ಭದಲ್ಲಿ ಬ್ರಾಂಡೆಡ್‌ ಮೆಡಿಸಿನ್‌ ಹೆಸರಿನಲ್ಲಿ ಔಷಧಿ ತಯಾರಿಕಾ ಕಂಪ​ನಿಗಳು ಕೋಟಿ ಕೋಟಿ ಲೂಟಿ ಮಾಡುತ್ತಿವೆ. ವಿಪ ರ್ಯಾಸ ಎಂದರೆ, ಇಂತಹ ಲೂಟಿ​ಕೋರರಿಗೆ ಪದ್ಮಶ್ರೀ ನೀಡಲಾಗುತ್ತಿದೆ ಎಂದು ವ್ಯಂಗ್ಯವಾಡಿದರು.

ಮನೆಮನೆಗೆ ತೆರಳಿ ಕ್ಯಾನ್ಸರ್ ಚಿಕಿತ್ಸೆ:

ಕೇಂದ್ರ ಸಂಸದೀಯ ವ್ಯವಹಾರಗಳು ಹಾಗೂ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಅನಂತಕುಮಾರ್‌ ಮಾತನಾಡಿ, ಅಂತಾರಾಷ್ಟ್ರೀಯ ಕ್ಯಾನ್ಸರ್‌ ನಿಯಂತ್ರಣ ದಿನವನ್ನು ಇಂದು ಆಚರಿಸಲಾಗುತ್ತಿದೆ. ಕಳೆದ ವರ್ಷ ಜಗತ್ತಿನಲ್ಲಿ 87 ಲಕ್ಷ ಮಂದಿ ಕ್ಯಾನ್ಸರ್‌ಗೆ ಬಲಿಯಾಗಿದ್ದಾರೆ. ಈ ಮಾರಕ ರೋಗವನ್ನು ನಿಯಂತ್ರಿಸದಿದ್ದರೆ ಮುಂದಿನ ವರ್ಷ ಸಾವಿನ ಸಂಖ್ಯೆ 1.25 ಕೋಟಿಗೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಜ್ಞರು ವರದಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದಿನಿಂದ ಹೊಸ ಅಭಿಯಾನವೊಂದಕ್ಕೆ ಚಾಲನೆ ನೀಡಿದ್ದಾರೆ. ಕ್ಯಾನ್ಸರ್‌, ಸಕ್ಕರೆ ಕಾಯಿಲೆ, ಹೃದಯ ಸಂಬಂಧಿ ಕಾಯಿಲೆ ಸೇರಿದಂತೆ ಮಾರಣಾಂತಿಕ ರೋಗಗಳ ನಿವಾರಣೆಗೆ ತಜ್ಞ ವೈದ್ಯರು ದೇಶಾದ್ಯಂತ ಮನೆಗಳಿಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ನಡೆಸಿ ಅಗತ್ಯ ಚಿಕಿತ್ಸೆ ನೀಡುವುದು ಈ ಅಭಿಯಾನದ ಉದ್ದೇಶವಾಗಿದೆ ಎಂದು ತಿಳಿಸಿದರು. ಅದೇ ರೀತಿ ರೋಗಿಗಳಿಗೆ ಕಡಿಮೆ ಬೆಲೆಗೆ ಗುಣಮಟ್ಟದ ಔಷಧಿ ಹಾಗೂ ಆರೋಗ್ಯ ಪರಿಕರಗಳನ್ನು ಒದಗಿಸುವ ಉದ್ದೇಶದಿಂದ ಪ್ರಧಾನಿ ಮೋದಿ ಅವರು, ‘ಜನೌಷಧಿ ಯೋಜನೆ' ಜಾರಿ ಮಾಡಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಅಂಗೀಕರಿಸಿದ 600 ಔಷಧಿ ಹಾಗೂ ಪರಿಕರಗಳು ಈ ಯೋಜನೆಯಡಿ ಅಗ್ಗದ ಬೆಲೆಗೆ ಲಭ್ಯವಾಗಲಿವೆ. ಈ ಪೈಕಿ ಕರ್ನಾಟಕದಲ್ಲಿ 250 ಕೇಂದ್ರಗಳು ಲಭ್ಯವಾಗಿವೆ ಎಂದರು.