ಬೆಂಗಳೂರು [ಆ.09]:  ಪ್ರವಾಹ ಉಂಟಾಗಿರುವ ಜಿಲ್ಲೆಗಳಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಆಗಸ್ಟ್‌ 9, 10, 11, 12 ಹಾಗೂ 15ರಂದು ಇರುವ ನಿರ್ಬಂಧಿತ ಹಾಗೂ ಸಾರ್ವತ್ರಿಕ ರಜೆಗಳನ್ನು ರದ್ದುಪಡಿಸಿದ್ದು ರಜೆಯ ದಿನವೂ ಕೆಲಸ ಮಾಡುವಂತೆ ಆರೋಗ್ಯ ಇಲಾಖೆ ಆದೇಶ ಮಾಡಿದೆ.

ತೀವ್ರ ನೆರೆ ಹಾವಳಿಗೆ ತುತ್ತಾಗಿರುವ ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು, ಗದಗ, ಚಿಕ್ಕಮಗಳೂರು, ಹಾವೇರಿ, ಶಿವಮೊಗ್ಗ, ಬೀದರ್‌, ಬೆಳಗಾವಿ, ಚಿಕ್ಕೋಡಿ, ರಾಯಚೂರು, ಬಾಗಲಕೋಟೆ, ಯಾದಗಿರಿ, ವಿಜಯಪುರ, ಕೊಪ್ಪಳ, ಧಾರವಾಡ, ಬಳ್ಳಾರಿ, ಹಾಸನ, ಉಡುಪಿ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ನೆರೆ ಹಾವಳಿ ತೀವ್ರವಾಗಿದೆ.

ಕರ್ನಾಟಕ ರಾಜ್ಯದ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಹಂತದಲ್ಲಿ ತುರ್ತು ಆರೋಗ್ಯ ಸೇವೆಗಳು ಸಾರ್ವಜನಿಕರಿಗೆ ಅತ್ಯವಶ್ಯಕವಾಗಿ ಬೇಕಾಗುತ್ತಿದೆ. ಹೀಗಾಗಿ ಪರಿಸ್ಥಿತಿ ಸುಧಾರಿಸುವವರೆಗೆ ಹಾಗೂ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಸೂಕ್ತ ನಿರ್ಣಯ ಕೈಗೊಳ್ಳುವವರೆಗೆ ಯಾವುದೇ ಅಧಿಕಾರಿ, ಸಿಬ್ಬಂದಿಗಳಿಗೆ ನಿರ್ಬಂಧಿತ ಹಾಗೂ ಸಾರ್ವತ್ರಿಕ ರಜೆಗಳನ್ನು ಒಳಗೊಂಡಂತೆ ಯಾವುದೇ ರೀತಿಯ ರಜೆ ಮಂಜೂರು ಮಾಡಬಾರದು ಎಂದು ಸಂಬಂಧಪಟ್ಟಅಧಿಕಾರಿಗಳಿಗೆ ಆರೋಗ್ಯ ಇಲಾಖೆ ಆಯುಕ್ತ ಪಂಕಜ್‌ ಕುಮಾರ್‌ ಪಾಂಡೆ ಸುತ್ತೋಲೆ ಹೊರಡಿಸಿದ್ದಾರೆ.

ದೋಣಿ ಆ್ಯಂಬುಲೆನ್ಸ್‌ ಮೂಲಕ ಔಷಧ ವಿತರಣೆ

ನೆರೆ ಹಾವಳಿಯಿಂದ ತತ್ತರಿಸಿರುವ ಬೆಳಗಾವಿ, ಬಾಗಲಕೋಟೆ, ವಿಜಯಪುರ, ರಾಯಚೂರು, ಉಡುಪಿ, ಮಂಗಳೂರು ಹಾಗೂ ಕೊಡಗು ಜಿಲ್ಲೆಗಳ ಎಚ್‌.ಐ.ವಿ. ಸೋಂಕಿತರಿಗೆ ಔಷಧ ಪೂರೈಕೆ ಮಾಡಲು ತೀವ್ರ ಸಮಸ್ಯೆ ಉಂಟಾಗಿದೆ. ಹೀಗಾಗಿ ಕೂಡಲೇ 108 ದೋಣಿ ಆ್ಯಂಬುಲೆನ್ಸ್‌ ಮೂಲಕ ಎಆರ್‌ಟಿ ಕೇಂದ್ರದ ಸಿಬ್ಬಂದಿಗಳು ಸೋಂಕಿತರಿಗೆ ಔಷಧ ಪೂರೈಕೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ಏಡ್ಸ್‌ ಪ್ರಿವೆನ್ಷನ್‌ ಸೊಸೈಟಿ ಆದೇಶ ನೀಡಿದೆ.