ಬೆಂಗಳೂರು (ಸೆ.05): ಕರ್ನಾಟಕ ರಾಜ್ಯ ಏಡ್ಸ್‌ ನಿಯಂತ್ರಣ ಸೊಸೈಟಿಯಲ್ಲಿ 600 ಕೋಟಿ ರು.ಗಳ ಅವ್ಯವಹಾರವಾಗಿದೆ ಎಂದು ಬಿಜೆಪಿ ಮಾಜಿ ಕಾರ್ಪೊರೇಟರ್‌ ಎನ್‌.ಆರ್‌.ರಮೇಶ್‌ ಆರೋಪ ತಳ್ಳಿಹಾಕಿರುವ ಸಚಿವ ಯು.ಟಿ.ಖಾದರ್‌, ಯಾವ ಅವ್ಯವಹಾರಗಳೂ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಆರೋಗ್ಯ ಖಾತೆ ಸಚಿವರಾಗಿದ್ದಾಗ ಸುಮಾರು 250 ಕೋಟಿ ರು.ಗಳ ಅನುದಾನದಲ್ಲಿ ಶೇ.80ರಷ್ಟುಅನುದಾನವನ್ನು ಸಿಬ್ಬಂದಿ ವೇತನ ಹಾಗೂ ಶೇ.20ರಷ್ಟುಅನುದಾನವನ್ನು ಎಚ್‌ಐವಿ ಹಾಗೂ ಏಡ್ಸ್‌ ನಿಯಂತ್ರಣ ಕಾರ್ಯಕ್ರಮಗಳಿಗೆ ವಿನಿಯೋಗಿಸಲಾಗಿದೆ. ಈ ಸಂಬಂಧ ಸೂಕ್ತ ತನಿಖೆ ನಡೆಸಿ ವರದಿ ತರಿಸಿಕೊಂಡು ಒಂದು ವೇಳೆ ತಪ್ಪು ಮಾಡಿದ್ದರೆ ಕ್ರಮ ಕೈಗೊಳ್ಳುವಂತೆ ಆರೋಗ್ಯ ಸಚಿವ ರಮೇಶ್‌ ಕುಮಾರ್‌ ಅವರಿಗೆ ಪತ್ರ ಬರೆಯಲಾಗುವುದು ಎಂದರು.

ಕಾಂಡೋಮ್‌ ಸಾಮಾಜಿಕ ಮಾರ್ಕೆಟಿಂಗ್‌ ಯೋಜನೆ ಮತ್ತು ಲೈಂಗಿಕ ಕಾರ್ಯಕರ್ತರಿಗೆ ಸರ್ಕಾರಿ ಸಂಸ್ಥೆಯ ನಿರೋಧ್‌ ವಿತರಣೆ ಯೋಜನೆಯನ್ನು ಕೇಂದ್ರ ಸರ್ಕಾರದ ನ್ಯಾಕೋ ಮಾಡಿದೆ. ಏಡ್ಸ್‌ ಸೋಂಕಿತರಿಗೆ ಚಿಕಿತ್ಸೆ ನೀಡುವ ವೇಳೆ ನ್ಯಾಕೋ ಸರಬರಾಜು ಮಾಡಿದ ಔಷಧಗಳನ್ನು ಉಪಯೋಗಿಸಲಾಗಿದೆ. ಸೊಸೈಟಿ ನೇಮಕಾತಿಯಲ್ಲಿ ನ್ಯಾಕೋ ನಿಯಮ ಅನುಸರಿಸಲಾಗಿದೆ. ಅಲ್ಲದೇ ಸೊಸೈಟಿ ಜಂಟಿ ನಿರ್ದೇಶಕಿ ಡಾ.ಲೀಲಾ ಸಂಪಿಗೆ ಅವರು ಹಿಂದೆ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸಿದ್ದು, ಸದ್ಯ ಅವರು ಸೊಸೈಟಿಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಎನ್‌.ಆರ್‌.ರಮೇಶ್‌ ಹೇಳಿಕೆ ದುರುದ್ದೇಶಪೂರಿತ ಎಂದು ದೂರಿದರು.