ಕುರುಬಗಲ್ಲಿ ಓಣಿಯ ಕರಿಯಮ್ಮದೇವಿ ಕಟ್ಟೆ ಸಮೀಪದಲ್ಲಿ 77ರ ವಯೋವೃದ್ಧ ಸೋಮಪ್ಪ ಟಪಾಲಿ (ಕೆಳಗಡೆ) ನೆಲಸಮವಾದ ಮುರುಕಲು ಜೋಪಡಿಯಲ್ಲಿ ವಯೋ ಸಹಜ ಕಾಯಿಲೆಯ ಜೊತೆಗೆ ಮಾನಸಿಕವಾಗಿ ಕುಗ್ಗಿ ಯಾತನೆ ಅನುಭವಿಸುತ್ತಿದ್ದಾರೆ.

ರೋಣ (ನ.24): ಇಪ್ಪತ್ತು ವರ್ಷದ ಹಿಂದೆ ಹೆಂಡತಿ, 15 ವರ್ಷದ ಹಿಂದೆ ಹಿರಿಯ ಮಗ, 5 ವರ್ಷದ ಹಿಂದೆ ಮಗಳು, 8 ತಿಂಗಳ ಹಿಂದೆ ತಮ್ಮನ (ಸಹೋದರ)ನ್ನು ಕಳೆದುಕೊಂಡು, ಉಳಿದೊಬ್ಬ ಮಗ ಹುಚ್ಚನಾಗಿ ಬೀದಿ ಬೀದಿ ಅಲೆಯುತ್ತಿದ್ದು, ಈ ನೋವುಗಳ ಮಧ್ಯೆ 77ರ ವೃದ್ಧರೊಬ್ಬರು ಮುರುಕಲು ಜೋಪಡಿಯಲ್ಲಿ 10 ವರ್ಷಗಳಿಂದ ಆಸರೆ, ಸೂರಿಗಾಗಿ ಹೋರಾಟ ನಡೆಸುತ್ತಿದ್ದಾರೆ.

ಪಟ್ಟಣದ 17ನೇ ವಾರ್ಡಿನ ಕುರುಬಗಲ್ಲಿ ಓಣಿಯ ಕರಿಯಮ್ಮದೇವಿ ಕಟ್ಟೆ ಸಮೀಪದಲ್ಲಿ 77ರ ವಯೋವೃದ್ಧ ಸೋಮಪ್ಪ ಟಪಾಲಿ (ಕೆಳಗಡೆ) ನೆಲಸಮವಾದ ಮುರುಕಲು ಜೋಪಡಿಯಲ್ಲಿ ವಯೋ ಸಹಜ ಕಾಯಿಲೆಯ ಜೊತೆಗೆ ಮಾನಸಿಕವಾಗಿ ಕುಗ್ಗಿ ಯಾತನೆ ಅನುಭವಿಸುತ್ತಿದ್ದಾರೆ.

ಸದ್ಯ ಇವರಿಗೆ ಯಾರೂ ಆಸರೆ ಇಲ್ಲದಂತಾಗಿದೆ. ಅತ್ಯಂತ ಕಡು ಬಡತನದಿಂದ ಕೂಡಿದ ಇವರ ಕುಟುಂಬವು ದಿನಗೂಲಿ ಮಾಡಿ ಬದುಕು ಸಾಗಿಸುತ್ತಿದ್ದು, 20 ವರ್ಷಗಳ ಹಿಂದೆ ಹೆಂಡತಿ ಬಸಮ್ಮನನ್ನು ಕಳೆದುಕೊಂಡ ವೃದ್ಧನ ಕುಟುಂಬಕ್ಕೆ ಹಿರಿಯ ಮಗ ಬಸವರಾಜ ಕೆಳಗಡೆ ಆಧಾರಸ್ಥಂಭವಾಗಿದ್ದ. ಅಲ್ಲಲ್ಲಿ ಹಮಾಲಿ ಮಾಡಿ ತಂದೆ, ಚಿಕ್ಕಪ್ಪ ಮತ್ತು ತಮ್ಮನನ್ನು ಸಾಕುತ್ತಿದ್ದ. ವಿಧಿಯಾಟ ಬಸವರಾಜನನ್ನು ಬಿಡಲಿಲ್ಲ. 15 ವರ್ಷದ ಹಿಂದೆ ಅನಾರೋಗಕ್ಕೆ ತುತ್ತಾಗಿ ಬಸವರಾಜ ಮೃತನಾದ. ಬಳಿಕ ಆತನ ತಮ್ಮ ಅರುಣ ಕೆಳಗಡೆ ಪೇಂಟಿಂಗ್ ಕೆಲಸ ಮಾಡುತ್ತಾ ಬದುಕಿನ ಬಂಡಿ ಎಳೆಯುತ್ತಿದ್ದ. ತಾಯಿ ಮತ್ತು ಅಣ್ಣನ ಸಾವು ಜತೆಗೆ ವಯೋವೃದ್ಧ ತಂದೆಯ ಸ್ಥಿತಿ ನೋಡಲಾಗದೇ ಮನನೊಂದು ಪೆಂಟರ್ ಅರುಣ 10 ವರ್ಷಗಳಿಂದ ಮನೆಗೂ ಹೋಗದೇ ಹುಚ್ಚನಂತಾಗಿ ಬೀದಿ ಬೀದಿ ಅಲೆಯುತ್ತಿದ್ದಾನೆ.

ಎಲ್ಲರಿಗೂ ಪರಿಚಿತ ಪೇಂಟರ್ ಅರುಣ: 15 ವರ್ಷಗಳ ಹಿಂದೆ ಡಿಜಿಟಲ್, ಫ್ಲೆಕ್ಸ್ ಇದ್ದಿಲ್ಲ. ಆ ವೇಳೆ ಯಾವುದೇ ಅಂಗಡಿ ಬೋರ್ಡಾಗಲಿ, ನೂತನ ಮನೆಗೆ ಹೆಸರು, ವಾಹನಗಳಿಗೆ ನಂಬರ್ ಪ್ಲೇಟ್, ಶಾಲಾ-ಕಾಲೇಜು, ಸರ್ಕಾರಿ ಕಚೇರಿಗಳಿಗೆ ನಾಮಫಲಕ ಸೇರಿದಂತೆ ಏನೇ ಬರೆಸುವುದಿದ್ದಲ್ಲಿ ತಟ್ಟನೆ ಪೇಂಟರ್ ಅರುಣ ನೆನಪಾಗುತ್ತಿದ್ದ. ಅಷ್ಟೊಂದು ಹೆಸರುವಾಸಿಯಾಗಿದ್ದ ಪೇಂಟರ್ ಅರುಣ 10 ವರ್ಷದಿಂದ ಹುಚ್ಚನಾಗಿ ಎಲ್ಲೆಂದರಲ್ಲಿ ಬೀದಿ ಬೀದಿ ಅಲೆಯುತ್ತಿದ್ದಾನೆ. ಎಲ್ಲರನ್ನು, ಎಲ್ಲವನ್ನು ಕಳೆದುಕೊಂಡು ಅನಾಥವಾಗಿ ನರಕ ಕೂಪದಲ್ಲಿ ನರಳುತ್ತಾ, ದಿನ ದೂಡುತ್ತಿರುವ ವೃದ್ಧ ಸೋಮನಾಥ ಕೆಳಗಡೆ (ಟಪಾಲಿ)ಗೆ ಭೂಮಿಯೆ ಹಾಸಿಗೆ, ಆಕಾಶವೇ ಹೊದಿಕೆಯಾಗಿದ್ದು, ದುರಂತಮಯ ಬದುಕು ಸಾಗಿಸುತ್ತಿದ್ದಾನೆ.

ಕಣ್ಮುಚ್ಚಿ ಕುಳಿತ ಪುರಸಭೆ, ತಾಲೂಕು ಆಡಳಿತ: 10 ವರ್ಷದಿಂದ ನೆಲಸಮವಾದ ತಗಡಿನ ಶೆಡ್‌ನ ಅವಶೇಷದಡಿ ಜೀವನ ಕಳೆಯುತ್ತಿರುವ ವೃದ್ಧನ ಶೆಡ್ ಹಂದಿ, ನಾಯಿಗಳ ಗೂಡಾಗಿದ್ದು, ಇದರ ಮಧ್ಯೆಯೇ ಸೋಮಪ್ಪ ಕಾಲ ಕಳೆಯುತ್ತಿದ್ದಾನೆ. ಅದೆಷ್ಟೋ ಬಾರಿ ಹಂದಿ, ನಾಯಿಗಳು ಈತನಿಗೆ ಕಚ್ಚಿ ಗಾಯಗೊಳಿಸಿವೆ. ಕಣ್ಣುಗಳು ದೃಷ್ಟಿ ಹೀನವಾಗಿದ್ದು, ಮೇಲೇಳಲು ಶಕ್ತಿ ಇಲ್ಲದೇ ನಿಶಕ್ತನಾದ ವೃದ್ಧ ಸೋಮಪ್ಪನಿಗೆ ನಿತ್ಯ ಓಣಿಯವರೆ ಚಾ, ಊಟ ನೀಡುತ್ತಿದ್ದಾರೆ. ವಸತಿ ಸೌಲಭ್ಯಕ್ಕಾಗಿ ಸ್ಥಳೀಯ ಪುರಸಭೆಗೆ 10 ವರ್ಷಗಳಿಂದ ಅರ್ಜಿ ಸಲ್ಲಿಸುತ್ತಾ ಬಂದಿದ್ದಾನೆ. ವಿಪರ್ಯಾಸವೆಂದರೆ ಈವರೆಗೂ ಪುರಸಭೆ ಸೂರು ಕಲ್ಪಿಸುವುದಿರಲಿ, ಇತ್ತ ಗಮನ ಹರಿಸಿಲ್ಲ. 2 ತಿಂಗಳ ಹಿಂದೆ ತಹಸೀಲ್ದಾರ್ ಶಿವಲಿಂಗಪ್ರಭು ವಾಲಿ ಅವರು ವೃದ್ಧನು ವಾಸಿಸುವ ಸ್ಥಳಕ್ಕೆ ಭೇಟಿ ನೀಡಿದ್ದು, ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ವೃದ್ಧ ವಾಸಿಸುವ ಕುರುಬಗಲ್ಲಿ ಓಣಿಯು ವಾರ್ಡ್ 17, 18 ಮತ್ತು 19 ರ ವ್ಯಾಪ್ತಿಗೆ ಬರುತ್ತಿದ್ದು, ಈ ಸದಸ್ಯರೂ ಸೋಮಪ್ಪನ ನೆರವಿಗೆ ಈವರೆಗೂ ಬಂದಿಲ್ಲ.

ವರದಿ: ಪಿ.ಎಸ್. ಪಾಟೀಲ್ ರೋಣ - ಕನ್ನಡಪ್ರಭ