ಬೆಂಗಳೂರು-ಮೈಸೂರು ಮಾರ್ಗದ ಜೋಡಿ ಹಳಿ ನಿರ್ಮಾಣ ಹಾಗೂ ವಿದ್ಯುದೀಕರಣ ಕಾಮಗಾರಿ ಪೂರ್ಣಗೊಂಡು ತಿಂಗಳು ಕಳೆದರೂ ಈ ಮಾರ್ಗದಲ್ಲಿ ವಿದ್ಯುತ್ ಚಾಲಿತ (ಎಲೆಕ್ಟ್ರಿಕ್ ಲೋಕೋ) ರೈಲು ಸಂಚಾರಕ್ಕೆ ಇನ್ನೂ ಚಾಲನೆ ಭಾಗ್ಯ ಸಿಕ್ಕಿಲ್ಲ.

ಬೆಂಗಳೂರು : ಬೆಂಗಳೂರು-ಮೈಸೂರು ಮಾರ್ಗದ ಜೋಡಿ ಹಳಿ ನಿರ್ಮಾಣ ಹಾಗೂ ವಿದ್ಯುದೀಕರಣ ಕಾಮಗಾರಿ ಪೂರ್ಣಗೊಂಡು ತಿಂಗಳು ಕಳೆದರೂ ಈ ಮಾರ್ಗದಲ್ಲಿ ವಿದ್ಯುತ್ ಚಾಲಿತ (ಎಲೆಕ್ಟ್ರಿಕ್ ಲೋಕೋ) ರೈಲು ಸಂಚಾರಕ್ಕೆ ಇನ್ನೂ ಚಾಲನೆ ಭಾಗ್ಯ ಸಿಕ್ಕಿಲ್ಲ.

ರೈಲ್ವೆ ಸುರಕ್ಷತಾ ಆಯುಕ್ತ (ಸಿಆರ್‌ಎಸ್) ಕೆ.ಎಸ್. ಮನೋಹರನ್ ನೇತೃತ್ವದ ತಂಡ ಕಳೆದ ಡಿಸೆಂಬರ್ 5ರಂದು ಎಲಿಯೂರಿನಿಂದ ಮೈಸೂರುವರೆಗಿನ ಮಾರ್ಗದ ವಿದ್ಯುದ್ದೀಕರಣ ಕಾಮಗಾರಿ ಪರಿಶೀಲನೆ ನಡೆಸಿ ವಿದ್ಯುತ್ ಚಾಲಿತ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿತ್ತು. ಆದರೆ, ತಿಂಗಳು ಉರುಳಿದರೂ ವಿದ್ಯುತ್ ಚಾಲಿತ ರೈಲು ಸಂಚಾರ ಉದ್ಘಾಟನೆ ಸಾಧ್ಯವಾಗಿಲ್ಲ.

ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ (ಕೆಎಸ್‌ಆರ್) ಮೈಸೂರಿಗೆ 22 ಬೋಗಿಯ ಒಂದು ರೈಲು ಸಂಚರಿಸಲು 650 ಲೀಟರ್ ಹೈಸ್ಪೀಡ್ ಡೀಸೆಲ್ ಬೇಕಾಗುತ್ತದೆ. ಇದರ ಪ್ರಕಾರ ರೈಲು ಮೈಸೂರಿಗೆ ಹೋಗಿ ಬರಲು 1,300 ಲೀಟರ್ ಡೀಸೆಲ್ ವ್ಯಯವಾಗುತ್ತಿದೆ.

ವಿದ್ಯುತ್ ಚಾಲಿತ ರೈಲು ಸಂಚಾರಕ್ಕೆ ಸಿಆರ್‌ಎಸ್ ಒಪ್ಪಿಗೆ ಸೂಚಿಸಿದ ಬಳಿಕ ನೈಋತ್ಯ ರೈಲ್ವೆ ಡಿಸೆಂಬರ್ ಅಂತ್ಯದಲ್ಲೇ ಮೈಸೂರು-ಚೆನ್ನೈ ನಡುವೆ ಸಂಚರಿಸುವ ಶತಾಬ್ದಿ ರೈಲಿಗೆ ಎಲೆಕ್ಟ್ರಿಕ್ ಲೋಕೋ ಅಳವಡಿಸಲು ನಿರ್ಧರಿಸಿತ್ತು.