ಚುನಾವಣೆಗೆ ಮತ ಪತ್ರ ಬಳಸಲ್ಲ: ಚುನಾವಣಾ ಆಯೋಗ

First Published 10, Jan 2018, 10:55 AM IST
No Ballot Paper for Karnataka State Assembly Election Says Election Commissions
Highlights

ಇವಿಎಂನಲ್ಲಿ ದೋಷ ಇದೆ ಎಂದು ನೆದರ್‌'ಲ್ಯಾಂಡ್, ಅಮೆರಿಕ ದೇಶದಲ್ಲಿ ಪತ್ತೆ ಹಚ್ಚಲಾಗಿದೆ. ಈ ಹಿನ್ನೆಲೆಯಲ್ಲಿ ಹಲವು ದೇಶಗಳು ಇವಿಎಂ ಬಳಕೆ ಕೈಬಿಟ್ಟಿವೆ. ಸಂಶಯಗಳಿಗೆ ಅವಕಾಶ ನೀಡದಂತೆ ಚುನಾವಣೆ ನಡೆಸಬೇಕಾದರೆ ಇವಿಎಂ ದೋಷ ನಿವಾರಿಸಬೇಕು. ಇಲ್ಲವೇ ಬ್ಯಾಲೆಟ್ ಪೇಪರ್ ಬಳಸಬೇಕು ಎಂದು ಒತ್ತಾಯಿಸಲಾಯಿತು.

ಬೆಂಗಳೂರು(ಜ.10): ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ ಮಾಡಲು ಕೇಂದ್ರ ಚುನಾವಣಾ ಆಯೋಗವು ನಿರಾಕರಿಸಿದ್ದು, ಇವಿಎಂ ಯಂತ್ರಗಳ ಮೂಲಕವೇ ಚುನಾವಣೆ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದೆ.

ವಿಕಾಸಸೌಧದಲ್ಲಿ ರಾಜಕೀಯಪಕ್ಷಗಳ ಜತೆ ನಡೆಸಿದ ಸಭೆಯಲ್ಲಿ ಬಿಜೆಪಿ ಹೊರತುಪಡಿಸಿ ಕಾಂಗ್ರೆಸ್, ಜೆಡಿಎಸ್, ಬಿಎಸ್‌ಪಿ ಸೇರಿದಂತೆ ಮತ್ತಿತರ ಪಕ್ಷಗಳು ಇವಿಎಂ ಯಂತ್ರಗಳ ಬದಲು ಬ್ಯಾಲೆಟ್ ಪೇಪರ್ ಬಳಕೆ ಮಾಡಬೇಕು ಎಂದು ಮನವಿ ಮಾಡಿದವು. ಆದರೆ, ಈ ಮನವಿಯನ್ನು ತಿರಸ್ಕರಿಸಿದ ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಗಳು, ಸುಪ್ರಿಂಕೋರ್ಟ್ ಇವಿಎಂ ದಕ್ಷತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ಹೀಗಾಗಿ ಅದನ್ನು ಬದಲಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ರಾಜ್ಯ ಚುನಾವಣೆ ಸಂದರ್ಭದಲ್ಲಿ ಇವಿಎಂ ನಿಷೇಧ ಮಾಡಬೇಕು. ಇವಿಎಂ ದುರ್ಬಳಕೆ ಕುರಿತು ಆರೋಪ ಕೇಳಿ ಬಂದಿರುವುದರಿಂದ ತಂತ್ರಜ್ಞರು, ವಿಜ್ಞಾನಿಗಳಿಗೆ ಅದರಲ್ಲಿನ ದೋಷ ಪತ್ತೆ ಹಚ್ಚಲು ಅವಕಾಶ ನೀಡಬೇಕು ಎಂದು ಸಭೆಯಲ್ಲಿ ಕಾಂಗ್ರೆಸ್‌'ನ ನಾಯಕರು ಮನವಿ ಮಾಡಿದರು. ಇದಕ್ಕೆ ಇತರೆ ಪಕ್ಷಗಳ ನಾಯಕರು ಧ್ವನಿಗೂಡಿಸಿದರು. ಇವಿಎಂನಲ್ಲಿ ದೋಷ ಇದೆ ಎಂದು ನೆದರ್‌'ಲ್ಯಾಂಡ್, ಅಮೆರಿಕ ದೇಶದಲ್ಲಿ ಪತ್ತೆ ಹಚ್ಚಲಾಗಿದೆ. ಈ ಹಿನ್ನೆಲೆಯಲ್ಲಿ ಹಲವು ದೇಶಗಳು ಇವಿಎಂ ಬಳಕೆ ಕೈಬಿಟ್ಟಿವೆ. ಸಂಶಯಗಳಿಗೆ ಅವಕಾಶ ನೀಡದಂತೆ ಚುನಾವಣೆ ನಡೆಸಬೇಕಾದರೆ ಇವಿಎಂ ದೋಷ ನಿವಾರಿಸಬೇಕು. ಇಲ್ಲವೇ ಬ್ಯಾಲೆಟ್ ಪೇಪರ್ ಬಳಸಬೇಕು ಎಂದು ಒತ್ತಾಯಿಸಲಾಯಿತು.

ಇದಕ್ಕೆ ಸೊಪ್ಪು ಹಾಕದ ಕೇಂದ್ರ ಚುನಾವಣಾ ಅಧಿಕಾರಿಗಳು ಚುನಾವಣೆಯಲ್ಲಿ ಸೋಲುವ ಪಕ್ಷಗಳು ಇಂತಹ ಆರೋಪ ಮಾಡುವುದು ಸಹಜ. ಇವಿಎಂ ಯಂತ್ರಗಳ ಮೂಲಕವೇ ಚುನಾವಣೆ ನಡೆಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

 

loader