ಬೆಂಗಳೂರು [ಆ.1]: ಮುಂಬರುವ ಸ್ಥಳೀಯ ಚುನಾವಣೆಯಲ್ಲಿ ಯಾವುದೇ ಹೊಂದಾಣಿಕೆ ಬೇಡ ಎನ್ನುವ ಅಭಿಪ್ರಾಯವನ್ನು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ವ್ಯಕ್ತಪಡಿಸಿದ್ದಾರೆ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ತಿಳಿಸಿದ್ದಾರೆ.

ಬುಧವಾರ ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ಪರಾಜಿತ ಅಭ್ಯರ್ಥಿಗಳ ಸಭೆ ನಡೆಸಿದ ಅವರು, ಕಾರ್ಯಕರ್ತರು ಸಭೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ರಾಜ್ಯ ಮಟ್ಟದಲ್ಲಿ ಒಂದಾಗಿ ಅಧಿಕಾರ ಅನುಭವಿಸಲಾಗಿದೆ. ಆದರೆ, ಸ್ಥಳೀಯ ಮಟ್ಟದಲ್ಲಿ ಪರಿಸ್ಥಿತಿ ಆ ರೀತಿ ಇಲ್ಲ. ಹೊಂದಾಣಿಕೆ ಬೇಡ ಎಂಬುದು ಎಲ್ಲರ ಒಮ್ಮತ ಅಭಿಪ್ರಾಯವಾಗಿದೆ. ಈ ಬಗ್ಗೆ ವರಿಷ್ಠರೇ ಅಂತಿಮ ತೀರ್ಮಾನ ಕೈಗೊಳ್ಳಬೇಕು ಎಂದಿದ್ದಾರೆ ಎಂದರು.

ಹಿಂದಿನ ಸ್ಪೀಕರ್‌ ಅನರ್ಹ ಮಾಡಿರುವ ಶಾಸಕರ ಬಗ್ಗೆ ಸುಪ್ರೀಂಕೋರ್ಟ್‌ ತೀರ್ಮಾನ ನೋಡಿಕೊಂಡು ಮುಂದಿನ ಹೆಜ್ಜೆ ಇಡಲಾಗುವುದು. ಚುನಾವಣೆ ಮೂರು ತಿಂಗಳಿಗೆ ಬರಲಿದೆಯೋ ಅಥವಾ ಆರು ತಿಂಗಳಿಗೆ ಬರಲಿದೆಯೋ ಗೊತ್ತಿಲ್ಲ. ಚುನಾವಣೆಗೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ರಾಜ್ಯ ಪ್ರವಾಸ ಕೈಗೊಳ್ಳಲು ಮುಖಂಡರಿಗೆ ಸೂಚನೆ ನೀಡಲಾಗಿದೆ. ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ 14 ತಿಂಗಳ ಸಾಧನೆಯನ್ನು ಮನೆಮನೆಗೆ ಮುಟ್ಟಿಸಲು ಸೂಚಿಸಲಾಗಿದೆ ಎಂದು ಹೇಳಿದರು.

ಆ.7ರಂದು ಬೆಂಗಳೂರಿನಲ್ಲಿ ಜೆಡಿಎಸ್‌ ಸಮಾವೇಶ ನಡೆಸಲಾಗುವುದು. ಅಲ್ಲಿ ನೂತನ ಜಿಲ್ಲಾಧ್ಯಕ್ಷರುಗಳನ್ನು ನೇಮಕ ಮಾಡಲಾಗುತ್ತದೆ. ನಿಷ್ಕಿ್ರಯಗೊಂಡಿರುವ ಇತರ ಘಟಕಗಳನ್ನೂ ಪುನಶ್ಚೇತನ ಮಾಡುತ್ತೇವೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಜೆಡಿಎಸ್‌ ಸಕ್ರಿಯಗೊಳ್ಳಲಿದೆ. ಪಕ್ಷ ಬಿಟ್ಟು ಹೊರಹೋಗಿರುವ ಮೂರು ಜನರನ್ನು ಉಚ್ಚಾಟನೆ ಮಾಡಲಾಗಿದೆ ಎಂದು ತಿಳಿಸಿದರು.