ಬೆಂಗಳೂರು: ಬಿಜೆಪಿ ಜೊತೆ ಸಮ್ಮಿಶ್ರ ಸರ್ಕಾರ ರಚಿಸುವ ಯಾವುದೇ ಪ್ರಸ್ತಾಪವನ್ನು ಪ್ರಧಾನಿ ಮೋದಿ ಅವರ ಮುಂದೆ ಇಟ್ಟಿಲ್ಲ, ಈ ಕುರಿತು ಬರುತ್ತಿರುವ ವರದಿ ಆಧಾರ ರಹಿತ ಎಂದು ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಪ್ರತಿಕ್ರಿಯಿಸಿದ್ದಾರೆ. 

ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈ ಹಿಂದೆ ಪ್ರಧಾನಿ ಮೋದಿ ಅವರನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭೇಟಿ ಮಾಡಿದ ಸಂದರ್ಭದಲ್ಲಿ ತಾವು ಸಹ ಜೊತೆಗಿದ್ದು, ಕೇವಲ ಬರ ಪರಿಹಾರದ ಬಗ್ಗೆ ಮಾತನಾಡ ಲಾಗಿತ್ತು ಎಂದರು. 

ಲೋಕಸಭಾ ಚುನಾವಣೆ ಫಲಿತಾಂಶ ಹೊರಬಂದ ನಂತರ ಮೈತ್ರಿ ಸರ್ಕಾರ ಪತನ ಆಗುತ್ತದೆ ಎಂದು ಬಿಜೆಪಿ ಹೇಳುತ್ತಿದ್ದಾರೆ. ಸರ್ಕಾರ ಬೀಳಲಿದೆ ಎಂದು ಯಡಿಯೂರಪ್ಪ 9 ತಿಂಗಳಿಂದ ಹೇಳಿಕೊಂಡು ಬರುತ್ತಿದ್ದಾರೆ. ಯಡಿಯೂರಪ್ಪ ಜ್ಯೋತಿಷ್ಯ ಸುಳ್ಳಾಗಲಿದೆ. ಅವರು ಸಂಖ್ಯಾಶಾಸ್ತ್ರ ಹೇಳುತ್ತಾರೆಂದು ಕಾಣುತ್ತದೆ. ನಾನು ಕೂಡ ಫೋನ್ ಮಾಡಿ ಶಾಸ್ತ್ರ ತಿಳಿದುಕೊಳ್ಳುತ್ತೇನೆ ಎಂದು ವ್ಯಂಗ್ಯವಾಡಿದರು.