ನವದೆಹಲಿ(ಅ. 03): ನಿತೀಶ್ ಕಟಾರಾ ಹತ್ಯೆ ಪ್ರಕರಣದಲ್ಲಿ ವಿಕಾಸ್ ಯಾದವ್(39) ಮತ್ತು ವಿಶಾಲ್ ಯಾದವ್(37) ಅವರಿಗೆ ದಿಲ್ಲಿ ಹೈಕೋರ್ಟ್ ನೀಡಿದ್ದ 25 ವರ್ಷ ಜೈಲು ಶಿಕ್ಷೆಯನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ. ಇದೇ ವೇಳೆ, ಪ್ರಕರಣದ ಮೂರನೇ ದೋಷಿ ಸುಖದೇವ್ ಪೆಹಲ್ವಾನ್(40)ನಿಗೆ ವಿಧಿಸಲಾಗಿದ್ದ 25 ವರ್ಷದ ಜೈಲುಶಿಕ್ಷೆಯಲ್ಲಿ 5 ವರ್ಷ ಕಡಿಮೆ ಮಾಡಲಾಗಿದೆ. ಆದರೆ, ಈ ಮೂವರು ಅಪರಾಧಿಗಳ ಒಟ್ಟು ಶಿಕ್ಷೆಯ ಪ್ರಮಾಣದಲ್ಲಿ 5 ವರ್ಷ ಕಡಿಮೆಯಾಗಿದೆ.
ಸಹೋದರರಾದ ವಿಕಾಶ್ ಮತ್ತು ವಿಶಾಲ್ ಯಾದವ್ ಅವರು ದಿಲ್ಲಿ ಹೈಕೋರ್ಟ್'ನ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಅಪರಾಧಿಗಳಿಗೆ ಯಾವುದೇ ವಿನಾಯಿತಿ ನೀಡಲು ಸರ್ವೋಚ್ಚ ನ್ಯಾಯಾಲಯ ನಿರಾಕರಿಸಿದೆ. ಸುಪ್ರೀಂಕೋರ್ಟ್'ನ ಈ ತೀರ್ಪನ್ನು ನಿತೀಶ್ ಕಟಾರಾರವರ ತಾಯಿ ನೀಲಂ ಕಟಾರಾ ಸ್ವಾಗತಿಸಿದ್ದಾರೆ.
ಏನಿದು ಪ್ರಕರಣ?
2002ರ ಫೆಬ್ರವರಿ 16ರಂದು ನಿತೀಶ್ ಕಟಾರಾ ಅವರನ್ನು ಹತ್ಯೆಗೈಯಲಾಗಿತ್ತು. ರೈಲ್ವೆ ಅಧಿಕಾರಿಯೊಬ್ಬರ ಪುತ್ರರಾಗಿದ್ದ ನಿತೀಶ್ ಕಟಾರಾ ಅವರು ಉತ್ತರಪ್ರದೇಶದ ಪ್ರತಿಷ್ಠಿತ ರಾಜಕಾರಣಿ ಡಿ.ಪಿ.ಯಾದವ್ ಅವರ ಪುತ್ರ ಭಾರ್ತಿಯವರೊಂದಿಗೆ ಪ್ರೇಮ ವ್ಯವಹಾರ ಇಟ್ಟುಕೊಂಡಿದ್ದರೆನ್ನಲಾಗಿದೆ. ಇದರಿಂದ ಕ್ರುದ್ಧಗೊಂಡ ಯಾದವ್ ಕುಟುಂಬವು ನಿತೀಶ್ ಕಟಾರಾ ಅವರನ್ನು ಕಿಡ್ನಾಪ್ ಮಾಡಿ ಕೊಲೆ ಮಾಡಿತ್ತು. ಇದರಲ್ಲಿ ಡಿ.ಪಿ.ಯಾದವ್ ಅವರು ಪತ್ರರಾದ ವಿಕಾಶ್ ಮತ್ತು ವಿಶಾಲ್ ಅವರು ನೇರವಾಗಿ ಶಾಮೀಲಾಗಿದ್ದರು.
2008ರ ಮೇ ತಿಂಗಳಲ್ಲಿ ಕೆಳ ಹಂತದ ನ್ಯಾಯಾಲಯವು ಈ ಪ್ರಕರಣದಲ್ಲಿ ಮೇಲೆ ತಿಳಿಸಿದ ಮೂವರನ್ನು ತಪ್ಪಿತಸ್ಥರೆಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿತ್ತು. 2014ರಲ್ಲಿ ದಿಲ್ಲಿ ಹೈಕೋರ್ಟ್ ಈ ತೀರ್ಪನ್ನು ಎತ್ತಿಹಿಡಿದಿತ್ತಲ್ಲೇ ಶಿಕ್ಷೆ ಪ್ರಮಾಣವನ್ನು 25 ವರ್ಷಕ್ಕೆ ಹೆಚ್ಚಿಸಿತ್ತು. ಜೊತೆಗೆ, ಸಾಕ್ಷ್ಯ ನಾಶ ಮಾಡಲು ಯತ್ನಿಸಿದ ಅವರಿಗೆ ಇನ್ನೂ 5 ವರ್ಷ ಹೆಚ್ಚುವರಿ ಶಿಕ್ಷೆ ವಿಧಿಸಿತ್ತು. ಅಂದರೆ, 25 ವರ್ಷ ಶಿಕ್ಷೆ ಅನುಭವಿಸಿದ ನಂತರ ಹೆಚ್ಚುವರಿ 5 ವರ್ಷ ಹೀಗೆ ಒಟ್ಟಾರೆ 30 ವರ್ಷ ಜೈಲುಶಿಕ್ಷೆ ಅನುಭವಿಸಲು ಆದೇಶಿಸಿತ್ತು. ಇದೀಗ ಸುಪ್ರೀಂಕೋರ್ಟ್ ಪೀಠವು ಸಾಕ್ಷ್ಯನಾಶದ ಶಿಕ್ಷೆ ಹಾಗೂ ಹತ್ಯೆ ಶಿಕ್ಷೆ ಎರಡನ್ನೂ ಒಟ್ಟಿಗೆ ಅನುಭವಿಸಲು ಅವಕಾಶ ನೀಡಿದೆ. ಈ ಹಿನ್ನೆಲೆಯಲ್ಲಿ ಅಪರಾಧಿಗಳು 30 ವರ್ಷದ ಬದಲು 25 ವರ್ಷ ಜೈಲು ಶಿಕ್ಷೆ ಅನುಭವಿಸಿದರೆ ಸಾಕಾಗುತ್ತದೆ.
