ಈಗ ಅಧಿಕೃತ: ಬ್ರಿಟನ್‌ನಲ್ಲಿ ಇದ್ದಾನೆ ನೀರವ್‌ ಮೋದಿ ಬ್ರಿಟನ್‌ನಿಂದ ಮೊದಲ ಬಾರಿಗೆ ಒಪ್ಪಿಗೆ ಗಡೀಪಾರು, ವಶಕ್ಕೆ ಸಿಬಿಐ ಮನವಿ

ನವದೆಹಲಿ (ಆ. 21): ಸರ್ಕಾರಿ ಸ್ವಾಮ್ಯದ ಪಂಜಾಬ್‌ ನ್ಯಾಷನಲ್‌ ಬ್ಯಾಂಕಿಗೆ 13 ಸಾವಿರ ಕೋಟಿ ರು. ವಂಚಿಸಿ ಪರಾರಿಯಾಗಿರುವ ವಜ್ರೋದ್ಯಮಿ ನೀರವ್‌ ಮೋದಿ ತನ್ನ ದೇಶದಲ್ಲೇ ಇದ್ದಾನೆ ಎಂದು ಬ್ರಿಟನ್‌ ಇದೇ ಮೊದಲ ಬಾರಿಗೆ ಒಪ್ಪಿಕೊಂಡಿದೆ.

ಇದರ ಬೆನ್ನಲ್ಲೇ, ಆತನನ್ನು ಭಾರತಕ್ಕೆ ಗಡೀಪಾರು ಮಾಡಿ ಎಂದು ಹಗರಣದ ತನಿಖೆ ನಡೆಸುತ್ತಿರುವ ಸಿಬಿಐ ವಿದೇಶಾಂಗ ಸಚಿವಾಲಯದ ಮೂಲಕ ಬ್ರಿಟನ್‌ ಸರ್ಕಾರಕ್ಕೆ ಕೋರಿಕೆ ಇಟ್ಟಿದೆ. ಈಗಾಗಲೇ ನೀರವ್‌ ಮೋದಿ ವಿರುದ್ಧ ಜಾಗತಿಕ ಪೊಲೀಸ್‌ ಸಂಘಟನೆ ಇಂಟರ್‌ಪೋಲ್‌ ಮೂಲಕ ರೆಡ್‌ಕಾರ್ನರ್‌ ನೋಟಿಸ್‌ ಹೊರಡಿಸಿರುವ ಹಿನ್ನೆಲೆಯಲ್ಲಿ ಆತನನ್ನು ವಶಕ್ಕೆ ಪಡೆಯುವಂತೆಯೂ ಮನವಿ ಮಾಡಿದೆ.

ಸಿಬಿಐ ಮನವಿ ಮೇರೆಗೆ ಕಳೆದ ಜೂನ್‌ನಲ್ಲಿ ಇಂಟರ್‌ಪೋಲ್‌ ನೀರವ್‌ ವಿರುದ್ಧ ರೆಡ್‌ಕಾರ್ನರ್‌ ನೋಟಿಸ್‌ ಹೊರಡಿಸಿದೆ. ಪಂಜಾಬ್‌ ನ್ಯಾಷನಲ್‌ ಬ್ಯಾಂಕಿನ ಹಗರಣ ಬೆಳಕಿಗೆ ಬರುವ ಕೆಲವೇ ದಿನಗಳ ಮುನ್ನ ನೀರವ್‌ ಕುಟುಂಬದ ಜತೆ ವಿದೇಶಕ್ಕೆ ಪರಾರಿಯಾಗಿದ್ದ. ಭಾರತ ಸರ್ಕಾರ ಪಾಸ್‌ಪೋರ್ಟ್‌ ರದ್ದುಗೊಳಿಸಿದ ತರುವಾಯವೂ ದೇಶದಿಂದ ದೇಶಕ್ಕೆ ಸುತ್ತಾಡುತ್ತಿದ್ದ. ಆತ ಬ್ರಿಟನ್‌ನಲ್ಲಿದ್ದಾನೆ ಎಂಬ ವರದಿಗಳು ಬಂದಿದ್ದವಾದರೂ ಅಲ್ಲಿನ ಸರ್ಕಾರ ಮಾತ್ರ ದೃಢೀಕರಿಸಿರಲಿಲ್ಲ.