ಪಾಟ್ನಾ[ಸೆ.06]: ಹಸಿವಿನಿಂದ ಕಂಗಾಲಾಗಿ ಆಹಾರ ಹುಡುಕುತ್ತಾ ನಾಡಿಗೆ ಬಂದಿದ್ದ ನೀಲಿ ಜಿಂಕೆಯೊಂದನ್ನು ಜೀವಂತ ಸಮಾಧಿಗೈದಿರುವ ಅಮಾನವೀಯ ಘಟನೆ ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ನಡೆದಿದೆ. 

ಹೌದು ಕಾಡಿನಲ್ಲಿ ತಿನ್ನಲು ಏನೂ ಸಿಗದೆ ನಾಡಿನೆಡೆ ಹೆಜ್ಜೆ ಹಾಕಿದ್ದ ನೀಲಿ ಜಿಂಕೆ ಹಸಿವು ನೀಗಿಸಲು ಬೆಳೆಯನ್ನು ತಿನ್ನಲಾರಂಭಿಸಿದೆ. ಆದರೆ ನೀಲಿ ಜಿಂಕೆಗಳ ಹಾವಳಿಗೆ ಕಷ್ಟಪಟ್ಟು ಬೆಳೆದಿದ್ದ ಬೆಳೆ ನಾಶವಾಗುತ್ತಿದ್ದುದರಿಂದ ಬೇಸತ್ತ ರೈತರು, ಆ ಜಿಂಕೆಯನ್ನು ಗುಂಡಿಗೆ ಹಾಕಿ ಮಣ್ಣು ಮುಚ್ಚಿದ್ದಾಋಎ. ಈ ಮೂಲಕ ಹಸಿವು ನೀಗಿಸಲು ಬಂದ ಅಮಾಯಕ ಮೂಕ ಜೀವಿ ಜೀವಂತ ಸಮಾಧಿಯಾಗಿದೆ.

ಇನ್ನು ತಾವು ಕಷ್ಟಪಟ್ಟು ಬೆಳೆದಿದ್ದ ಬೆಳೆ ನೀಲ್ ಗಾಯ್ ಗಳು ನಾಶಪಡಿಸುತ್ತಿರುವುದರಿಂದ ಬೇಸತ್ತಿದ್ದ ರೈತರು ಈ ಕಷ್ಟದಿಂದ ಪಾರು ಮಾಡುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯ ಪ್ರವೃತ್ತರಾಗಿದ್ದ ಅಧಿಕಾರಿಗಳು ಕಳೆದ ಕೆಲ ದಿನಗಳಿಂದ ಸುಮಾರು 300ಕ್ಕೂ ಅಧಿಕ ನೀಲಿ ಜಿಂಕೆಗಳನ್ನು ಗುಂಡಿಟ್ಟು ಕೊಂದಿದ್ದರು. ಹೀಗಿದ್ದರೂ ನೀಲಿ ಜಿಂಕೆಗಳ ಹಾವಳಿ ಮುಂದುವರೆದಿತ್ತು. 

ಆದರೀಗ ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ನೀಲಿ ಜಿಂಕೆಯನ್ನು ಜೀವಂತ ಸಮಾಧಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನೆಟ್ಟಿಗರು ರೈತರ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದು, 'ನೀಲಿ ಜಿಂಕೆ ಮಾಡಿದ ತಪ್ಪೇನು? ಅದು ರೈತರು ಬೆಳೆದಿದ್ದ ಬೆಳೆ ತಿಂದಿದ್ದು ತೊಪ್ಪೇ? ಅವುಗಳು ಆಹಾರಕ್ಕಾಗಿ ಏನು ಮಾಡಬೇಕು? ಎಲ್ಲಿ ಹೋಗಬೇಕು? ಮನುಷ್ಯರಂತೆ ಅವುಗಳಿಗೂ ಹಸಿವಾಗುತ್ತದೆ. ಹಸಿದವರನ್ನು ಸಾಯಿಸುವುದು ಎಷ್ಟು ಸರಿ?' ಎಂದು ಕಮೆಂಟ್ ಮಾಡಿದ್ದಾರೆ.