ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ದಂಪತಿ ಆರಂಭಿಸಿರುವ ‘ಗಿವಿಂಗ್ ಪ್ಲೆಡ್ಜ್’ ಅಭಿಯಾನಕ್ಕೆ ಓಗೊಟ್ಟು ಇನ್ಫೋಸಿಸ್ ಸಹ ಸಂಸ್ಥಾಪಕ ನಂದನ್ ನಿಲೇಕಣಿ ಹಾಗೂ ಅವರ ಪತ್ನಿ ರೋಹಿಣಿ ನಿಲೇಕಣಿ ಅವರು ತಮ್ಮ ಸಂಪತ್ತಿನ ಶೇ. 50 ರಷ್ಟನ್ನು ದಾನವಾಗಿ ನೀಡುವ ವಾಗ್ದಾನ ಮಾಡಿದ್ದಾರೆ.

ನವದೆಹಲಿ (ನ.21): ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ದಂಪತಿ ಆರಂಭಿಸಿರುವ ‘ಗಿವಿಂಗ್ ಪ್ಲೆಡ್ಜ್’ ಅಭಿಯಾನಕ್ಕೆ ಓಗೊಟ್ಟು ಇನ್ಫೋಸಿಸ್ ಸಹ ಸಂಸ್ಥಾಪಕ ನಂದನ್ ನಿಲೇಕಣಿ ಹಾಗೂ ಅವರ ಪತ್ನಿ ರೋಹಿಣಿ ನಿಲೇಕಣಿ ಅವರು ತಮ್ಮ ಸಂಪತ್ತಿನ ಶೇ.50 ರಷ್ಟನ್ನು ದಾನವಾಗಿ ನೀಡುವ ವಾಗ್ದಾನ ಮಾಡಿದ್ದಾರೆ.

ನಿಲೇಕಣಿ ಅವರ ಆಸ್ತಿ 1.7 ಶತಕೋಟಿ ಡಾಲರ್ (ಅಂದಾಜು 11,000 ಕೋಟಿ ರು.) ಇದೆ. ಇದರ ಅರ್ಧದಷ್ಟನ್ನು ದಾನ ಮಾಡುವ ವಾಗ್ದಾನಗೈಯುವ ಮೂಲಕ ನಿಲೇಕಣಿ ಅವರು ವಿಪ್ರೋ ಅಧ್ಯಕ್ಷ ಅಜೀಂ ಪ್ರೇಮ್‌ಜಿ, ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಹಾಗೂ ಶೋಭಾ ಲಿ. ಚೇರ್ಮನ್ ಪಿಎನ್‌ಸಿ ಮೆನನ್ ಅವರ ಸಾಲಿಗೆ ಸೇರಿದಂತಾಗಿದೆ. ಈ ಮೂರೂ ಉದ್ಯಮ ದಿಗ್ಗಜರು ತಮ್ಮ ಅರ್ಧದಷ್ಟು ಸಂಪತ್ತನ್ನು ಈಗಾಗಲೇ ದಾನರೂಪದಲ್ಲಿ ನೀಡುವ ಶಪಥ ಮಾಡಿದ್ದಾರೆ. ವಿಶೇಷವೆಂದರೆ ಇದುವರೆಗೆ ಈ ಆಸ್ತಿ ದಾನ ಯೋಜನೆಗೆ ಭಾರತದಿಂದ ನಾಲ್ವರು ಸಹಿ ಹಾಕಿದ್ದಾರೆ. ನಾಲ್ಕೂ ಜನ ಬೆಂಗಳೂರಿನವರು ಎಂಬುದು ಗಮನಾರ್ಹ.

ಅಸಮಾನತೆ ಅನೇಕ ದೇಶಗಳಲ್ಲಿದೆ. ಹೀಗಾಗಿ ನಮ್ಮ ಅಗತ್ಯಕ್ಕೆ ಬೇಕಾದ ಸಂಪತ್ತನ್ನು ಇಟ್ಟುಕೊಂಡು ಅಗತ್ಯಕ್ಕಿಂತ ಹೆಚ್ಚಿನ ಸಂಪತ್ತನ್ನು ಅಗತ್ಯ ಇರುವವರಿಗೆ ನೀಡುವುದು ಅವಶ್ಯವಾಗಿದೆ. ಸಂಪತ್ತೆನ್ನುವುದು ಬಹುದೊಡ್ಡ ಜವಾಬ್ದಾರಿಯಿಂದ ಬರುವಂತದ್ದು. ಅದನ್ನು ಜನಹಿತಕ್ಕೆ ಬಳಸಬೇಕು ಎಂದಿದ್ದಾರೆ. ಈಗಾಗಲೇ 21 ದೇಶಗಳ 171 ಜನರು ಈ ಅಭಿಯಾನಕ್ಕೆ ಓಗೊಟ್ಟು ಸಂಪತ್ತು ದಾನ ಮಾಡುವ ಪ್ರಮಾಣ ಮಾಡಿದ್ದಾರೆ.