ಬೆಂಗಳೂರು [ಆ.12]:  ರಾಜ್ಯದಲ್ಲಿ ಸಂಕಷ್ಟದಲ್ಲಿರುವ ಜನರ ಪರವಾಗಿ ಜೆಡಿಎಸ್‌ ಪಕ್ಷ ನಿಲ್ಲುತ್ತದೆ. ಇದೇ ಕಾರಣದಿಂದ ನಾನು ಉತ್ತರ ಕರ್ನಾಟಕಕ್ಕೆ ತೆರಳುತ್ತಿದ್ದು, ಹುಬ್ಬಳ್ಳಿಯಿಂದ ಯಾದಗಿರಿಯವರೆಗೂ ಪ್ರವಾಸ ಕೈಗೊಳ್ಳುತ್ತೇನೆ ಎಂದು ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ತಿಳಿಸಿದ್ದಾರೆ.

ಭಾನುವಾರ ನೆರೆ ಸಂತ್ರಸ್ತರಿಗಾಗಿ ಜೆಡಿಎಸ್‌ ಪಕ್ಷದಿಂದ ನಾಲ್ಕು ಕಂಟೇನರ್‌ ಸಾಮಗ್ರಿಗಳೊಂದಿಗೆ ಬೆಳಗಾವಿಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್‌ ಪಕ್ಷದ ವರಿಷ್ಠರು ಪ್ರವಾಹ ಪೀಡಿತ ಉತ್ತರ ಕರ್ನಾಟಕಕ್ಕೆ ತೆರಳುವುದಕ್ಕೆ ಸೂಚನೆ ನೀಡಿದ್ದಾರೆ. ಪಕ್ಷದ ವತಿಯಿಂದ ಸಂಗ್ರಹಿಸಿರುವ ನಾಲ್ಕು ಲಾರಿಗಳ ಸಾಮಗ್ರಿ ಜೊತೆ ಅಲ್ಲಿಗೆ ತೆರಳುತ್ತಿದ್ದೇನೆ ಎಂದು ಹೇಳಿದರು.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅಲ್ಲದೆ, ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ನೆರೆ ಪೀಡಿತ ಪ್ರದೇಶಗಳಿಗೆ ಸಾರ್ವಜನಿಕರು ಕಳುಹಿಸುತ್ತಿರುವ ಸಾಮಗ್ರಿಗಳು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಂಗ್ರಹವಾಗುತ್ತಿದ್ದು, ಸಂತ್ರಸ್ತರಿಗೆ ಸರಿಯಾಗಿ ತಲುಪುತ್ತಿಲ್ಲ. ಹೀಗಾಗಿ ಅವುಗಳನ್ನು ಸಂತ್ರಸ್ತರಿಗೆ ತಲುಪಿಸುವುದಕ್ಕಾಗಿ ನೆರೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡುತ್ತಿದ್ದೇನೆ. ರಾಜ್ಯದಲ್ಲಿ ನೆರೆ ಆವರಿಸಿರುವ ಪರಿಸ್ಥಿತಿಯನ್ನು ಮಾಧ್ಯಮದವರು ತಮ್ಮ ಜೀವ ಅಪಾಯದಲ್ಲಿದೆ ಎಂಬುದನ್ನು ಮರೆತು ತೋರಿಸುತ್ತಿದ್ದಾರೆ. ಅವರೂ ನೆರೆ ಸಂತ್ರಸ್ತರ ನೆರವಿಗೆ ಧಾವಿಸಿದ್ದಾರೆ. ಈ ಕಾರ್ಯದಿಂದ ಮಾಧ್ಯಮದವರು ಅಭಿನಂದನಾರ್ಹರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಂಟೇನರ್‌ಗಳಲ್ಲಿ ಸಾಮಗ್ರಿಗಳ ರವಾನೆ:  ಜೆಡಿಎಸ್‌ ಯುವ ಘಟಕದಿಂದ ನಗರದಲ್ಲಿ ಸಂಗ್ರಹಿಸಿರುವ ವಿವಿಧ ಸಾಮಗ್ರಿಗಳುಳ್ಳ ಕಂಟೇನರ್‌ಗಳನ್ನು ನಗರದ ಜೆ.ಪಿ. ಭವನದಿಂದ ಹುಬ್ಬಳ್ಳಿ, ನರಗುಂದ, ನವಲಗುಂದ, ಬೆಳಗಾವಿ, ಬಾಗಲಕೋಟೆ, ಕೂಡಲ ಸಂಗಮ, ಯಾದಗಿರಿಗೆ ರವಾನಿಸಲಾಯಿತು. ಐವತ್ತು ಸಾವಿರ ಬ್ಲಾಂಕೆಟ್ಸ್‌, 15 ಸಾವಿರ ಬೆಡ್‌ಶೀಟ್‌, ಅಕ್ಕಿ, ಬಿಸ್ಕೆಟ್‌, ಟೂತ್‌ ಪೇಸ್ಟ್‌-ಬ್ರಶ್‌, 5 ಸಾವಿರ ಸೀರೆ, 5 ಸಾವಿರ ಪಂಚೆ, ಸೇರಿದಂತೆ ಅಗತ್ಯ ವಸ್ತುಗಳುಳ್ಳ ಕಂಟೇನರ್‌ಗಳಿಗೆ ಜೆಡಿಎಸ್‌ ವರಿಷ್ಠ ದೇವೇಗೌಡ ಹಸಿರು ನಿಶಾನೆ ತೋರಿದರು.