ಜಿಪಿಎಸ್, ವೈಟ್ ವಿಷನ್ ಸಾಧನಗಳು, ಕಂಪಾಸ್, ಗ್ರೆನೇಡ್ ಲಾಂಚರ್’ಗಳು, ರಬ್ಬರ್ ಮ್ಯಾಪ್ಸ್ ಇತ್ಯಾದಿ ಅನೇಕ ಸಾಮಗ್ರಿಗಳು, ಶಸ್ತ್ರಾಸ್ತ್ರಗಳು ವಗೈರೆಗಳನ್ನು ಎಲ್’ಇಟಿಯ ಹಿರಿಯ ಸದಸ್ಯರೊಬ್ಬರು ತಮಗೆ ಪೂರೈಸುತ್ತಿದ್ದುದಾಗಿ ಬಹದೂರ್ ಅಲಿ ಸತ್ಯ ಬಾಯಿಬಿಟ್ಟಿದ್ದಾನೆಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ನವದೆಹಲಿ(ಜ. 06): ಕಳೆದ ವರ್ಷ ಕಾಶ್ಮೀರ ಕಣಿವೆಯಲ್ಲಿ ಬಂಧಿತನಾಗಿದ್ದ ಶಂಕಿತ ಲಷ್ಕರೆ ಉಗ್ರ ಬಹದೂರ್ ಅಲಿ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್’ಐಎ) ಶುಕ್ರವಾರ ಆರೋಪ ಪಟ್ಟಿ ದಾಖಲಿಸಿದೆ. ಬಹದೂರ್ ಅಲಿ ಪಾಕಿಸ್ತಾನೀಯನಾಗಿದ್ದು, ಭಾರತದಲ್ಲಿ ಭಯೋತ್ಪಾದನೆ ದಾಳಿ ನಡೆಸಲೆಂದು ಲಷ್ಕರೆ ತೆಯ್ಯಬಾ ಸಂಘಟನೆ ಆತನನ್ನು ಕಳುಹಿಸಿತ್ತು ಎಂದು ಪಾಟಿಯಾಲ ಹೌಸ್’ನ ವಿಶೇಷ ಕೋರ್ಟ್’ನಲ್ಲಿ ಎನ್’ಐಎ ಸಲ್ಲಿಸಿದ ಚಾರ್ಜ್’ಶೀಟ್’ನಲ್ಲಿ ಆರೋಪಿಸಲಾಗಿದೆ.
ಬಹದೂರ್ ಅಲಿ 2016ರ ಜುಲೈ 25ರಂದು ಜಮ್ಮು-ಕಾಶ್ಮೀರದಲ್ಲಿ ಭಾರತೀಯ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ. ವಿಚಾರಣೆ ವೇಳೆ ಈತ ತಾನು ಲಷ್ಕರೆ ಸಂಘಟನೆಯ ಉಗ್ರ ಎಂದು ಒಪ್ಪಿಕೊಂಡನೆಂದು ತನಿಖಾಧಿಕಾರಿಗಳು ಹೇಳಿಕೊಂಡಿದ್ದಾರೆ. ಜುಲೈ 8ರಂದು ಎನ್’ಕೌಂಟರ್’ನಲ್ಲಿ ಶಂಕಿತ ಹಿಜ್ಬುಲ್ ಉಗ್ರ ಬುರ್ಹನ್ ವಾನಿ ಹತ್ಯೆಯಾದ ಘಟನೆ ಹಿನ್ನೆಲೆಯಲ್ಲಿ ಸೇಡು ತೀರಿಸಿಕೊಳ್ಳಲು ಪಾಕಿಸ್ತಾನವು ಉಗ್ರರ ತಂಡಗಳನ್ನು ಭಾರತದತ್ತ ಕಳುಹಿಸಿಕೊಟ್ಟಿತ್ತೆನ್ನಲಾಗಿದೆ. ಅದರಲ್ಲಿನ ಒಂದು ತಂಡದಲ್ಲಿ ಬಹದೂರ್ ಅಲಿ ಕೂಡ ಇದ್ದ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ “ಆಲ್ಫಾ-3” ಎಂಬ ಗುಪ್ತ ಹೆಸರಿನ ಕಂಟ್ರೋಲ್ ರೂಮ್’ನಿಂದ ಬಹದೂರ್ ಅಲಿಗೆ ಎಲ್ಲಾ ಮಾಹಿತಿಗಳೂ ರವಾನೆಯಾಗುತ್ತಿದ್ದವು. ಕಾಶ್ಮೀರದಲ್ಲಿ ನಡೆಯುತ್ತಿದ್ದ ಹಿಂಸಾಚಾರದ ಬೆಂಕಿಗೆ ತುಪ್ಪ ಸುರಿಯಲು ಪಾಕಿಸ್ತಾನದಿಂದ ಜನರನ್ನು ಕಳುಹಿಸಿಕೊಟ್ಟಿರುವುದಾಗಿಯೂ, ತಾನು ಭದ್ರತಾ ಪಡೆಗಳ ಮೇಲೆ ಗ್ರೆನೇಡ್ ದಾಳಿ ಎಸಗಬೇಕೆಂದೂ ಬಹದೂರ್ ಅಲಿಗೆ ಕಂಟ್ರೋಲ್ ರೂಮ್’ನಿಂದ ಆದೇಶಗಳು ಬಂದಿದ್ದವಂತೆ. ಅಷ್ಟೇ ಅಲ್ಲ, ಜಿಪಿಎಸ್, ವೈಟ್ ವಿಷನ್ ಸಾಧನಗಳು, ಕಂಪಾಸ್, ಗ್ರೆನೇಡ್ ಲಾಂಚರ್’ಗಳು, ರಬ್ಬರ್ ಮ್ಯಾಪ್ಸ್ ಇತ್ಯಾದಿ ಅನೇಕ ಸಾಮಗ್ರಿಗಳು, ಶಸ್ತ್ರಾಸ್ತ್ರಗಳು ವಗೈರೆಗಳನ್ನು ಎಲ್’ಇಟಿಯ ಹಿರಿಯ ಸದಸ್ಯರೊಬ್ಬರು ತಮಗೆ ಪೂರೈಸುತ್ತಿದ್ದುದಾಗಿ ಬಹದೂರ್ ಅಲಿ ಸತ್ಯ ಬಾಯಿಬಿಟ್ಟಿದ್ದಾನೆಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ತನಿಖಾಧಿಕಾರಿಗಳ ಪ್ರಕಾರ ಪಾಕಿಸ್ತಾನದ ಲಾಹೋರ್ ಜಿಲ್ಲೆಯ ಜಿಯಾ-ಬಾಘಾ ಎಂಬ ಗ್ರಾಮದ ಬಹದೂರ್ ಅಲಿ 13ನೇ ವಯಸ್ಸಿನಲ್ಲಿ(2008-09) ಜಮಾತ್-ಉದ್-ದಾವಾ ಸಂಘಟನೆಯ ತೆಕ್ಕೆಗೆ ಬೀಳುತ್ತಾನೆ. ಆ ನಂತರ ಲಷ್ಕರೆ ತೆಯ್ಯಬಾ ಸಂಘಟನೆ ಈತನನ್ನು ಸುಪರ್ದಿಗೆ ಪಡೆಯುತ್ತದೆ. ಎಲ್’ಇಟಿಯ ಮೂರು ಹಂತದ ತರಬೇತಿಗಳನ್ನು ಅಲಿಗೆ ನೀಡಲಾಗುತ್ತದೆ. ಆ ಬಳಿಕವಷ್ಟೇ ಆತನನ್ನು ಭಾರತದಲ್ಲಿ ದಾಳಿ ನಡೆಸಲು ಕಳುಹಿಸಲಾಗುತ್ತದೆ ಎನ್ನಲಾಗಿದೆ.
