ಬೆಂಗಳೂರು(ಸೆ. 28): ತಮಿಳುನಾಡಿಗೆ ಮತ್ತೆ ಕಾವೇರಿ ನೀರು ಬಿಡುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿರುವುದು ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಯಾಕಂದ್ರೆ ನಿನ್ನೆ ನಡೆದ ವಿಚಾರಣೆಯಲ್ಲಿ ರಾಜ್ಯದ ವಿಧಾನಮಂಡಲದ ನಿರ್ಣಯ ಏನೇ ಆಗಿರಲಿ. ಮೊದ್ಲು ತಮಿಳುನಾಡಿಗೆ ನೀರು ಬಿಡಿ ಅಂತಾ ಸುಪ್ರೀಂಕೋರ್ಟ್ ಖಡಕ್ ಆಗಿ ಆದೇಶಿಸಿದೆ. ಹೀಗಾಗಿ ರಾಜ್ಯದ ಸರ್ಕಾರದ ನಡೆ ಕುತೂಹಲ ಕೆರಳಿಸಿದೆ. .

ಸುಪ್ರೀಂಕೋರ್ಟ್ ಆದೇಶ ಪಾಲಿಸದೇ ಹೋದ್ರೆ ಮುಂದೆ ಎದುರಿಸಬೇಕಾದ ಕಾನೂನಿನ ಸಂಕೋಲೆಯ ಭಯ ಸರ್ಕಾರಕ್ಕೆ ಕಾಡುತ್ತಿದೆ. ಮತ್ತೊಂದು ಕಡೆ ತಮಿಳುನಾಡಿಗೆ ನೀರು ಬಿಟ್ಟರೆ ಸದನ ಸರ್ವಾನುಮತದಿಂದ ಅಂಗೀಕರಿಸಿದ ನಿರ್ಣಯ ಉಲ್ಲಂಘಿಸಿದ ಆಪಾದನೆಗೆ ತುತ್ತಾಗಲಿದೆ. ಇದ್ರಿಂದ ಇಕ್ಕಟ್ಟಿಗೆ ಸಿಲುಕಿರುವ ಸಿದ್ರಾಮಯ್ಯ ಇವತ್ತು ಸರ್ವಪಕ್ಷ ಸಭೆ ಕರೆದಿದ್ದಾರೆ.

ಇಂದು ಮತ್ತೊಮ್ಮೆ ಸರ್ವಪಕ್ಷ ಸಭೆ
- ಇಂದು ಬೆಳಗ್ಗೆ 9.30ಕ್ಕೆ ಸರ್ವಪಕ್ಷ ಸಭೆ
- ಸದನ ಸದಸ್ಯರ ಅಭಿಪ್ರಾಯ ಸಂಗ್ರಹ
- ಮಧ್ಯಾಹ್ನ 3 ಗಂಟೆಗೆ ಸಚಿವ ಸಂಪುಟ ಸಭೆ
- ಸರ್ಕಾರದ ಮುಂದಿನ ನಡೆ ಕುರಿತು ಸಮಾಲೋಚನೆ
- ರಾಜ್ಯದ ಪರ ವಕೀಲರಿಂದ ಸಿಎಂ ಮಾಹಿತಿ ಸಂಗ್ರಹ
- ನಂತರ ಸರ್ಕಾರದ ನಿರ್ಧಾರ ಅಧಿಕೃತ ಘೋಷಣೆ ಸಾಧ್ಯತೆ

ಇಂದು ಬುಧವಾರ ಬೆಳಗ್ಗೆ 9:30ಕ್ಕೆ ಸರ್ವಪಕ್ಷ ಸಭೆ ನಡೆಯಲಿದೆ. ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಸದನ ಸದಸ್ಯರ ಅಭಿಪ್ರಾಯ ಪಡೆಯಲಿದ್ದಾರೆ.. ಕಳೆದ ಬಾರಿ ಸಭೆ ಉಲ್ಲಂಘಿಸಿದ್ದ ಬಿಜೆಪಿ ನಾಯಕರೂ ಭಾಗವಹಿಸಲಿದ್ದಾರೆ. ಬಳಿಕ ಮಧ್ಯಾಹ್ನ 3 ಗಂಟೆಗೆ ಸಚಿವ ಸಂಪುಟ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಪ್ರಮುಖವಾಗಿ ಸುಪ್ರೀಕೋರ್ಟ್​ನ ತೀರ್ಪಿನ ಹಿನ್ನಲೆಯಲ್ಲಿ ಸರ್ಕಾರದ ಮುಂದಿನ ನಡೆಯ ಬಗ್ಗೆ ಚರ್ಚೆ ನಡೆಯಲಿದೆ. ಇದೇ ವೇಳೆ ಅಡ್ವೋಕೇಟ್​ ಜನರಲ್​ ಮಧುಸೂಧನ್​ ನಾಯ್ಕ್​ ಹಾಗೂ ಸುಪ್ರೀಂಕೋರ್ಟ್​ನ ರಾಜ್ಯದ ಪರ ವಕೀಲರಿಂದ ಮಾಹಿತಿ ಸಂಗ್ರಹಿಸಲಿರುವ ಸಿಎಂ ಸಿದ್ರಾಮಯ್ಯ, ನಂತರವೇ ಅಂತಿಮ ನಿರ್ಣಯ ಕೈಗೊಳ್ಳಲಿದ್ದಾರೆ.

ಒಟ್ಟಿನಲ್ಲಿ ಸುಪ್ರೀಂಕೋರ್ಟ್ ಆದೇಶ ಪಾಲಿಸುತ್ತಾರಾ ಅಥವಾ ಸದನದಲ್ಲಿ ತೆಗೆದುಕೊಂಡ ನಿರ್ಣಯಕ್ಕೆ ಸಿಎಂ ಸಿದ್ರಾಮಯ್ಯ ಬದ್ಧರಾಗಿರ್ತಾರಾ ಎಂಬುದನ್ನ ಕಾದು ನೋಡಬೇಕಾಗಿದೆ.

ಬ್ಯೂರೋ ರಿಪೋರ್ಟ್, ಸುವರ್ಣ ನ್ಯೂಸ್