ಪ್ರತಿಷ್ಠಿತ ಕೆಆರ್ ಆಸ್ಪತ್ರೆಯ ಗುತ್ತಿಗೆ ನೌಕರ ಮೋಹನ್ ಎಂಬಾತ ಈ ಜಾಲದಲ್ಲಿರುವುದು ಪತ್ತೆಯಾಗಿದೆ.
ಮೈಸೂರು(ನ. 04): ಮಕ್ಕಳ ಮಾರಾಟ ಜಾಲ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಪ್ರಕರಣದ ಕಿಂಗ್’ಪಿನ್ ಎನ್ನಲಾದ ವೈದ್ಯ ಉಷಾ ಎಂಬಾಕೆ ನಕಲಿ ಡಾಕ್ಟರ್ ಎಂಬುದು ಪತ್ತೆಯಾಗಿದೆ. ಇನ್ನೂ ಆಘಾತಕಾರಿ ವಿಷಯವೆಂದರೆ ಪ್ರತಿಷ್ಠಿತ ಕೆಆರ್ ಆಸ್ಪತ್ರೆಯ ಗುತ್ತಿಗೆ ನೌಕರ ಮೋಹನ್ ಎಂಬಾತ ಈ ಜಾಲದಲ್ಲಿರುವುದು ಪತ್ತೆಯಾಗಿದೆ. ಈ ನಕಲಿ ವೈದ್ಯೆ ಉಷಾ ಮತ್ತು ಮೋಹನ್ ಸೇರಿದಂತೆ ಐದು ಮಂದಿಯನ್ನು ಮಂಡಿಮೊಹಲ್ಲಾ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ನರ್ಸ್’ಗಳಾದ ಉಷಾ, ಶ್ರೀಮತಿ ಹಾಗೂ ಮಹೇಶ್ ಅವರು ಬಂಧಿತರಾದ ಇತರ ವ್ಯಕ್ತಿಗಳಾಗಿದ್ದಾರೆ. ಕೇರಳ ಮೂಲದ ಉಷಾ ವೃತ್ತಿಯಲ್ಲಿ ನರ್ಸ್ ಆದರೂ ವೈದ್ಯೆ ಎಂದು ಗುರುತಿಸಿಕೊಂಡು ಜನರನ್ನು ವಂಚಿಸುತ್ತಿರುವುದು ತಿಳಿದುಬಂದಿದೆ.
ಮಂಡಿ ಮೊಹಲ್ಲಾ ಠಾಣೆ ವ್ಯಾಪ್ತಿಯಲ್ಲಿ ಜಾಗವೊಂದನ್ನು ಬಾಡಿಗೆಗೆ ಪಡೆದು ನಸೀಂ ಮೆಡಿಕಲ್ ಸೆಂಟರ್ ಅನ್ನು ನಡೆಸಲಾಗುತ್ತಿದೆ. ಇಲ್ಲಿ ಹಲವು ವರ್ಷಗಳಿಂದ ಬಹಳ ರಹಸ್ಯವಾಗಿ ಮಕ್ಕಳ ಸಾಗಾಣಿಕೆ ಕಾರ್ಯ ನಡೆಯುತ್ತಿದೆ ಎಂದು ಅಬ್ದುಲ್ ಸುಬಾನ್ ಆರೋಪಿಸಿದ್ದಾರೆ. ಪರವಾನಿಗೆ ಇಲ್ಲದೇ ನಡೆಯುತ್ತಿರುವ ಈ ಆಸ್ಪತ್ರೆಯಲ್ಲಿ ಭ್ರೂಣಲಿಂಗ ಪತ್ತೆ ಪರೀಕ್ಷೆ ಇತ್ಯಾದಿ ಅಕ್ರಮ ಚಟುವಟಿಕೆಗಳೂ ನಡೆಯುತ್ತಿವೆ ಎಂದು ತಿಳಿಸಿದ್ದಾರೆ.
ಕಾರ್ ಡ್ರೈವರ್ ಮಹದೇವ್ ಮತ್ತು ವೆಂಕಟೇಶ್ ಎಂಬುವವರು ಬಡ ಮಕ್ಕಳನ್ನು ಕದ್ದು ತಂದು ನಕಲಿ ವೈದ್ಯೆ ಉಷಾಗೆ ನೀಡುತ್ತಿದ್ದರು. ಕೆಆರ್ ಆಸ್ಪತ್ರೆಯಲ್ಲಿ ಗುತ್ತಿಗೆ ನೌಕರನಾಗಿರುವ ಮೋಹನ್ ಬಡವರಿಗೆ ಹಣದ ಆಸೆ ಹುಟ್ಟಿಸಿ ಮಗುವನ್ನು ಕಡಿಮೆ ಬೆಲೆಗೆ ಕೊಂಡು ಉಷಾಗೆ ನೀಡುತ್ತಿದ್ದ. ಅಷ್ಟೇ ಅಲ್ಲ, ಅನೈತಿಕ ಸಂಬಂಧಕ್ಕೆ ಹುಟ್ಟಿದ ಮಕ್ಕಳನ್ನು ಈತ ಸುಲಭವಾಗಿ ಪಡೆದುಕೊಳ್ಳುತ್ತಿದ್ದ. ಮಗು ಸಣ್ಣ ವಯಸ್ಸಿನದ್ದಾದರೆ ಅದು ಸ್ವಲ್ಪ ದೊಡ್ಡದಾಗುವವರೆಗೂ ಸಾಕುತ್ತಿದ್ದ ಉಷಾ, ಆ ನಂತರ ಶ್ರೀಮಂತರಿಗೆ ಅದನ್ನು ಮಾರುತ್ತಿದ್ದಳು. ಈ ಬಗ್ಗೆ ಎಕ್ಸ್’ಕ್ಲೂಸಿವ್ ಮಾಹಿತಿ ಸುವರ್ಣನ್ಯೂಸ್’ಗೆ ಲಭ್ಯವಾಗಿದೆ.
ಮತಾಂತರದ ವಾಸನೆ?
ಸುವರ್ಣನ್ಯೂಸ್ ಜೊತೆ ಮಾತನಾಡಿದ ದೂರುದಾರ ಅಬ್ದುಲ್ ಸುಬಾನ್ ಅವರು ಈ ಆಸ್ಪತ್ರೆಯು ಮತಾಂತರದ ಅಡ್ಡೆಯಾಗಿದೆ ಎಂದು ಆಪಾದಿಸಿದ್ದಾರೆ. ಮೂಲತಃ ಕ್ರೈಸ್ತರಿಗೆ ಸೇರಿದ ಈ ಆಸ್ಪತ್ರೆಯಲ್ಲಿ ಹಿಂದೂ ಮಕ್ಕಳನ್ನು ಕದ್ದು ಕ್ರೈಸ್ತ ಧರ್ಮೀಯರಿಗೆ ಮಾರುವ ಮೂಲಕ ಪರೋಕ್ಷವಾಗಿ ಮತಾಂತರ ಮಾಡಲಾಗುತ್ತಿದೆ ಎಂದು ಸುಬಾನ್ ಹೇಳುತ್ತಾರೆ.
