ಈತನ ಬಂಧನದ ಬೆನ್ನಲ್ಲೇ ತನಿಖಾ ತಂಡ ಶಿವಮೊಗ್ಗ ಜಿಲ್ಲೆಯ ಸಾಗರಕ್ಕೆ ತೆರಳಿದ್ದು ಆರೋಪಿ ಸಂಜಯ್‌ನನ್ನೂ ಸುತ್ತುವರಿದಿದ್ದಾರೆ ಎಂದು ತಿಳಿದು ಬಂದಿದೆ. ಈ ಮೂಲಕ ಡಿಸಿಪಿ ಅನುಚೇತ್‌ ಮತ್ತು ಇನ್ಸ್‌ಪೆಕ್ಟರ್‌ ಗಿರಿರಾಜ್‌ ತಂಡ ಈ ಪ್ರಕರಣದ ಸಿಕ್ಕುಗಳನ್ನು ಬಿಡಿಸುವಲ್ಲಿ ಬಹುತೇಕ ಯಶಸ್ವಿ ಆಗಿದ್ದು ಭಾನುವಾರ ಸಂಜೆಯ ಹೊತ್ತಿಗೆ ಇಡೀ ಪ್ರಕರಣದ ತನಿಖೆಯ ಮೊದಲ ಹಂತ ಮುಕ್ತಾಯವಾಗಿ ಆರೋಪಿಗಳೆಲ್ಲರೂ ಸಿಕ್ಕಿ ಬೀಳುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಬೆಂಗಳೂರು(ಮೇ.14): ಕೆಂಗೇರಿ ಸ್ಯಾಟಲೈಟ್‌ ಬಡಾವಣೆಯಲ್ಲಿ ನಡೆದಿದ್ದ ಶಾಂತಮ್ಮ ಎನ್ನುವವರ ಕೊಲೆ ನಿಗೂಢವನ್ನು ಭೇದಿಸುವಲ್ಲಿ ಕೆಂಗೇರಿ ಠಾಣೆ ಪೊಲೀಸರು ಆರಂಭಿಕ ಯಶಸ್ವು ಕಂಡಿದ್ದು ಗೋಬಿ ಮಂಚೂರಿಯ ಕಾರಣಕ್ಕೆ ಮೊಮ್ಮಗನಿಂದ ಅಜ್ಜಿಯ ಕೊಲೆ ನಡೆದಿದೆ ಎನ್ನುವ ಮಾಹಿತಿಯನ್ನು ಆಧರಿಸಿ ಮೃತದೇಹವನ್ನು ಬಚ್ಚಿಡಲು ಯತ್ನಿಸಿದ ನಂದೀಶ್‌ ಎಂಬುವವನನ್ನು ಬಂಧಿಸಿದ್ದಾರೆ.

ಈತನ ಬಂಧನದ ಬೆನ್ನಲ್ಲೇ ತನಿಖಾ ತಂಡ ಶಿವಮೊಗ್ಗ ಜಿಲ್ಲೆಯ ಸಾಗರಕ್ಕೆ ತೆರಳಿದ್ದು ಆರೋಪಿ ಸಂಜಯ್‌ನನ್ನೂ ಸುತ್ತುವರಿದಿದ್ದಾರೆ ಎಂದು ತಿಳಿದು ಬಂದಿದೆ. ಈ ಮೂಲಕ ಡಿಸಿಪಿ ಅನುಚೇತ್‌ ಮತ್ತು ಇನ್ಸ್‌ಪೆಕ್ಟರ್‌ ಗಿರಿರಾಜ್‌ ತಂಡ ಈ ಪ್ರಕರಣದ ಸಿಕ್ಕುಗಳನ್ನು ಬಿಡಿಸುವಲ್ಲಿ ಬಹುತೇಕ ಯಶಸ್ವಿ ಆಗಿದ್ದು ಭಾನುವಾರ ಸಂಜೆಯ ಹೊತ್ತಿಗೆ ಇಡೀ ಪ್ರಕರಣದ ತನಿಖೆಯ ಮೊದಲ ಹಂತ ಮುಕ್ತಾಯವಾಗಿ ಆರೋಪಿಗಳೆಲ್ಲರೂ ಸಿಕ್ಕಿ ಬೀಳುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಗೋಬಿಮಂಚೂರಿಗಾಗಿಕೊಲೆ

ಆ ದಿನ ಕಾಲೇಜಿನಿಂದ ಮರಳಿದ ಸಂಜಯ್‌, ಅಜ್ಜಿ ಶಾಂತಮ್ಮಗೆ ಗೋಬಿ ಮಂಚೂರಿ ತಂದುಕೊಟ್ಟಿದ್ದ. ಶಾಂತಮ್ಮ ಅದನ್ನು ಅವನ ಮುಖಕ್ಕೆ ಎಸೆದಿದ್ದರು. ಇದರಿಂದ ರೊಚ್ಚಿಗೆದ್ದ ಆತ ಲಟ್ಟಣಿಗೆಯಿಂದ ತಲೆಗೆ ಹೊಡೆದಿದ್ದರ ಪರಿಣಾಮ ಒಂದೇ ಕ್ಷಣಕ್ಕೆ ಕುಸಿದು ಬಿದ್ದ ಆಕೆ ಮೃತಪಟ್ಟಿದ್ದರು. ಹೊರಗೆ ಹೋಗಿದ್ದ ತಾಯಿ ಮನೆಗೆ ಬಂದಾಗ ಕೊಲೆ ವಿಷಯ ಗೊತ್ತಾಗಿ ರಂಪಾಟ ಮಾಡಿ ಪೊಲೀಸರಿಗೆ ತಿಳಿಸಲು ಮುಂದಾಗಿದ್ದರು. ಆದರೆ ನಿನ್ನ ಮಗನನ್ನು ನೀನೇ ಜೈಲಿಗೆ ತಳ್ಳಬೇಡ ಎಂದು ಗೋಗರೆದು ತಾಯಿಯನ್ನು ತಡೆದಿದ್ದ. ನಂತರ ತನ್ನ ಸ್ನೇಹಿತ ನಂದೀಶ್‌ ಜತೆ ಮೃತದೇಹವನ್ನು ಏನು ಮಾಡುವುದು ಎನ್ನುವ ಬಗ್ಗೆ ಚರ್ಚಿಸಿದ್ದ. ಹಲವಾರು ಪ್ಲಾನ್‌ಗಳ ನಂತರ ಇಬ್ಬರೂ ಸೇರಿ ಮೃತದೇಹವನ್ನು ಕಬರ್ಡ್‌ನಲ್ಲಿಟ್ಟು ಕೆಮಿಕಲ್‌ ಹಾಕಿ ಮುಚ್ಚಿಟ್ಟಿದ್ದರು. ಪ್ರಕರಣ ಬೆಳಕಿಗೆ ಬಂದ ನಂತರ ಇದೇ ನಂದೀಶ ಸ್ನೇಹಿತರ ಬಳಿ ವಿಷಯ ಬಾಯಿಬಿಟ್ಟು ಅದು ಪೊಲೀಸರ ಕಿವಿಗೂ ಬಿದ್ದು ಆತನ ಸುತ್ತ ಬಲೆ ಹೆಣೆದು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ.

ಐಎಂಇಐಕೊಟ್ಟಸುಳಿವು

ಸಂಜಯ್‌ ಮನೆ ಖಾಲಿ ಮಾಡುವಾಗ ತನ್ನ ಮೊಬೈಲನ್ನೂ ಮನೆಯಲ್ಲೇ ಬಿಟ್ಟು ಹೋಗಿದ್ದ. ಈ ಮೊಬೈಲ್‌ನಿಂದ ತನ್ನದೇ ಮತ್ತೊಂದು ನಂಬರಿಗೆ ಕರೆ ಮಾಡಿದ್ದರ ಸುಳಿವು ಪೊಲೀಸರಿಗೆ ಸಿಕ್ಕಿತ್ತು. ಆ ಮತ್ತೊಂದು ನಂಬರ್‌ ಚಾಲ್ತಿಯಲ್ಲಿದ್ದ ಹ್ಯಾಂಡ್‌ಸೆಟ್‌ನ ಐಎಂಇಐ ನಂಬರ್‌ ಪಡೆದುಕೊಂಡ ಪೊಲೀಸರು ಅದು ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ಕಾರ್ಯನಿರತವಾಗಿರುವುದನ್ನು ಪತ್ತೆಹಚ್ಚಿದರು. ಈ ಸುಳಿವನ್ನು ಬೆನ್ನತ್ತಿ ಇನ್ಸ್‌ಪೆಕ್ಟರ್‌ ಗಿರಿರಾಜ್‌ ತಂಡ ಗುರುವಾರವೇ ಸಾಗರ ತಲುಪಿದೆ. ಈ ತಂಡಕ್ಕೆ ಆರೋಪಿ ಸಂಜಯ್‌ ಸಿಕ್ಕಿ ಬಿದ್ದಿದ್ದಾನೆ ಎನ್ನುವ ಮಾಹಿತಿ ಇದೆಯಾದರೂ ಹಿರಿಯ ಅಧಿಕಾರಿಗಳು ಇನ್ನೂ ದೃಢಪಡಿಸಿಲ್ಲ.

ಸಿಡಿಯಲ್ಲಿಏನಿದೆ?

ಏರೋನಾಟಿಕ್ಸ್‌ ಎಂಜಿನಿಯರಿಂಗ್‌ನಲ್ಲಿ ಪ್ರತಿಭಾವಂತ ಎನ್ನಿಸಿಕೊಂಡಿರುವ ಮೃತ ಶಾಂತಮ್ಮರ ಮೊಮ್ಮಗ ಆರೋಪಿ ಸಂಜಯ್‌ ಎಸ್‌ಎಸ್‌ಎಲ್‌ಸಿ, ಪಿಯುಸಿ ಎರಡರಲ್ಲೂ ಶೇ 90 ರಷ್ಟು ಅಂಕಗಳಿಸಿದ್ದ. ದ್ವಿವ್ಯಕ್ತಿತ್ವ ಹೊಂದಿದವನಂತೆ ಕಾಣುರುವ ಈತ ಮನೆ ಸಮೀಪ ಯಾರನ್ನೂ ಮಾತಾಡಿಸದೇ, ಮನೆಗೂ ಯಾರನ್ನೂ ಸೇರಿಸದೆ ಅಂತರ್ಮುಖಿ ಆಗಿರುತ್ತಿದ್ದರೆ, ಕಾಲೇಜಿನಲ್ಲಿ ಬಹಳ ಚಟುವಟಿಕೆಯ, ಚುರುಕಿನ ಹುಡುಗ ಆಗಿದ್ದ. ಈತ ಕೆಲವೇ ತಿಂಗಳುಗಳ ಮೊದಲು ಆನ್‌ಲೈನ್‌ ಮೂಲಕ ಸಿ ಡಿಯೊಂದನ್ನು ತರಿಸಿಕೊಂಡಿದ್ದ. ಸೈಬರ್‌ ಮತ್ತು ಕೆಮಿಕಲ್‌ ತಂತ್ರಜ್ಞಾನದ ಬಗ್ಗೆ ಆತ ಅಧ್ಯಯನ ನಡೆಸಿದ್ದ. ಮನೆ ತಪಾಸಣೆ ಸಂದರ್ಭದಲ್ಲಿ ಅಧಿಕಾರಿಗಳಿಗೆ ಆ ಸಿ ಡಿ ಸಿಕ್ಕಿದ್ದು ಅದನ್ನು ಪರಿಶೀಲನೆ ನಡೆಸಿದ್ದಾರೆ. ಕೆಮಿಕಲ್‌ ಬಳಕೆ ಬಗ್ಗೆಯೂ ಸಂಜಯ್‌ ತಿಳಿವಳಿಕೆ ಹೊಂದಿದ್ದ ಎನ್ನುವ ಸಂಗತಿ ಅಧಿಕಾರಿಗಳಿಗೆ ದೃಢಪಟಿದೆ.

ಕೊಲೆನಡೆದದ್ದುಇನ್ನೂಮೊದಲಾ?

ಶಾಂತಮ್ಮ ಕೊಲೆ ಆಗಿದ್ದು 2016ರ ಆಗಸ್ಟ್‌ನಲ್ಲಿ. ಆಗಲೇ ಮೃತದೇಹವನ್ನು ಕಬರ್ಡ್‌ನಲ್ಲಿ ಇಟ್ಟಿದ್ದ. ಆನಂತರ ವಾಸನೆ ಬರಲು ಆರಂಭಿಸಿದ್ದರಿಂದ ಮನೆ ಖಾಲಿ ಮಾಡಿದ ಎನ್ನುವ ವದಂತಿ ಕೂಡ ಹರಡಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಅಧಿಕಾರಿಗಳು,''ಮೊದಲು ವಾಸನೆ ಬಂದಿದ್ದು ಕಬರ್ಡ್‌ನೊಳಗಿದ್ದ ಮೃತದೇಹದಿಂದಲ್ಲ. ಅದರ ಪಕ್ಕದಲ್ಲೇ ಇದ್ದ ರಕ್ತಸಿಕ್ತ ಬಟ್ಟೆಗಳಿಂದ. ಮೃತದೇಹವನ್ನು ಕಬರ್ಡ್‌ನೊಳಗಿಟ್ಟು ಕೆಮಿಕಲ್‌ ಹಾಕಿದ ಆರೋಪಿ ನೆಲದ ಮೇಲೇ ಇದ್ದ ರಕ್ತಸಿಕ್ತ ಬಟ್ಟೆಗಳನ್ನು ಜತೆಯಲ್ಲೇ ಏಕೆ ಇಟ್ಟುಕೊಂಡಿದ್ದ ಎಂಬುದು ಗೊತ್ತಾಗಿಲ್ಲ'' ಎಂದರು.

ಭಾನುವಾರದವೇಳೆಗೆಸ್ಪಷ್ಟಚಿತ್ರಣಸಾಧ್ಯತೆ

ಇಡೀ ಪ್ರಕರಣದಲ್ಲಿ ಸಾಕಷ್ಟು ನಿಗೂಢಗಳಿವೆ. ಭಾನುವಾರದ ಹೊತ್ತಿಗೆ ತನಿಖೆಯಲ್ಲಿ ಪ್ರಮುಖ ಘಟ್ಟ ಎನ್ನಬಹುದಾದ ಮೊದಲ ಹಂತದ ಯಶಸ್ಸು ಗಳಿಸುವ ವಿಶ್ವಾಸ ಅಧಿಕಾರಿಗಳಿಂದ ವ್ಯಕ್ತವಾಗಿದೆ. ಇನ್ನೂ ಆರೋಪಿಗಳ ನೆರಳೂ ಕೂಡ ಸಿಕ್ಕಿಲ್ಲ ಎನ್ನುತ್ತಿರುವ ಪೊಲೀಸರು ಭೇದಿಸಿರುವ ಆ ನಿಗೂಢವಾದರೂ ಏನು ? ಪೊಲೀಸರ ಕಣ್ಣಳತೆಯಲ್ಲೇ ಇದ್ದು, ಬಲೆಗೆ ಬೀಳದಂತೆ ತಪ್ಪಿಸಿಕೊಳ್ಳಲು ಶ್ರಮಿಸುತ್ತಿದ್ದ ಆರೋಪಿ ನಂದೀಶ್‌ ಮಾಡಿದ್ದಾದರೂ ಏನು ? ಎನ್ನುವ ಬಗ್ಗೆ ಭಾನುವಾರದ ಹೊತ್ತಿಗೆ ಸ್ಪಷ್ಟ ಚಿತ್ರಣ ಸಿಗುವ ವಿಶ್ವಾಸವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.