ನವದೆಹಲಿ(ಆ.25): ಎರಡನೇ ಅವಧಿಗೆ ಪ್ರಧಾನಿಯಾದ ಬಳಿಕ, ಮೋದಿ ಮೂರನೇ ಮನ್ ಕಿ ಬಾತ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ್ದಾರೆ. 

ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ 150ನೇ ಜನ್ಮ ವಾರ್ಷಿಕೋತ್ಸವಕ್ಕಾಗಿ ರಾಷ್ಟ್ರ ಸಜ್ಜಾಗುತ್ತಿದ್ದು, ಸತ್ಯ, ಅಹಿಂಸೆಗಳ ಸಂದೇಶ ಸಾರಿದ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಬಡವರು, ದೀನ ದಲಿತರಿಗೆ ಭರವಸೆಯ ಬೆಳಕಾದವರು ಎಂದು ಮೋದಿ ಹೇಳಿದರು. 

130 ಕೋಟಿ ಭಾರತೀಯರು 130 ಕೋಟಿ ವಿಧಗಳಲ್ಲಿ ಗಾಂಧೀಜಿಯವರನ್ನು ಸ್ಮರಿಸಬಹುದು ಎಂದ ಮೋದಿ, ಮಹಾತ್ಮಾ ಗಾಂಧಿಯವರ ಸ್ಮರಣೆಗೆ ದೇಶ ಸೇವೆಗಿಂತ ಉತ್ತಮ ಮಾರ್ಗ ಇನ್ನೊಂದಿಲ್ಲ ಎಂದು ಅಭಿಪ್ರಾಯಪಟ್ಟರು.. 

ಬಾಪು ಅವರ 150ನೇ ಜನ್ಮ ವಾರ್ಷಿಕೋತ್ಸವದಂದು ಪ್ಲಾಸ್ಟಿಕ್ ಮುಕ್ತ ಭಾರತಕ್ಕಾಗಿ ಪಣ ತೊಡೋಣ ಎಂದು ಕರೆ ನೀಡಿದ ಪ್ರಧಾನಿ, ದೇಶದಲ್ಲಿ 'ಪೋಷಣಾ ಅಭಿಯಾನ' ದೊಡ್ಡ ಮಟ್ಟದಲ್ಲಿ ನಡೆಯುತ್ತಿದ್ದು, ಅತ್ಯಾಧುನಿಕ ವೈಜ್ಞಾನಿಕ ವಿಧಾನಗಳಿಂದ ಸರ್ವರಿಗೂ ಪೋಷಕಾಂಶಗಳ ಲಭ್ಯತೆಗೆ ಪಣ ತೊಡೋಣ ಎಂದು ಮನವಿ ಮಾಡಿದರು. 

ಮ್ಯಾನ್ ವರ್ಸಸ್ ವೈಲ್ಡ್ ಕಾರ್ಯಕ್ರಮದದಿಂದಾಗಿ ನಾನು ವಿಶ್ವದ ಯುವ ಜನತೆ ಜೊತೆ ಸಂಪರ್ಕ ಸಾಧಿಸಿದೆ. ನನ್ನೊಂದಿಗೆ ಎಲ್ಲರೂ ಯೋಗದ ಬಗ್ಗೆ ಪ್ರಶ್ನೆ ಕೇಳುತ್ತಿದ್ದರು. ಇದೀಗ ವನ್ಯಜೀವಿ ಹಾಗೂ ಜಾಗತಿಕ ತಾಪಮಾನ ಬದಲಾವಣೆ ಬಗ್ಗೆ ಪ್ರಶ್ನಿಸುತ್ತಿದ್ದಾರೆ ಎಂದು ಮೋದಿ ಸಂತಸ ವ್ಯಕ್ತಪಡಿಸಿದರು. 

ಬೇರ್ ಗ್ರಿಲ್ಸ್ ಜೊತೆ ನೀವು ಹೇಗೆ ಮಾತುಕತೆ ನಡೆಸಿದಿರಿ ಎಂದು ಹಲವರು ನನ್ನನ್ನು ಪ್ರಶ್ನಿಸಿದ್ದು, ನಾನು ಅವರೊಂದಿಗೆ ಮಾತನಾಡಲು ತಂತ್ರಜ್ಞಾನ ನೆರವಿಗೆ ಬಂತು ಎಂದು ಮೋದಿ ಹೇಳಿದ್ದಾರೆ. 

ಬೇರ್ ಅವರ ಕಿವಿಯಲ್ಲಿದ್ದ ಉಪಕರಣ ನಾನು ಆಡಿದ ಮಾತುಗಳನ್ನು ಅವರಿಗೆ ಅವರ ಭಾಷೆಯಲ್ಲೇ ಕೇಳುವಂತೆ ಮಾಡಿತು. ನಾನು ಹಿಂದಿಯಲ್ಲಿ ಮಾತನಾಡಿದೆ, ಆದರೆ ಅದು ಅವರಿಗೆ ಇಂಗ್ಲೀಷ್’ನಲ್ಲಿ ಕೇಳಿಸಿತು ಎಂದು ಮೋದಿ ಸ್ಪಷ್ಟಪಡಿಸಿದರು.

ಪ್ರತಿವರ್ಷ ಆಗಸ್ಟ್ 29ರಂದು ರಾಷ್ಟ್ರೀಯ ಕ್ರೀಡಾ ದಿನಾಚರಣೆ ನಿಮಿತ್ತ 'ಫಿಟ್ ಇಂಡಿಯಾ ಮೂವ್’ಮೆಂಟ್' ಆರಂಭಿಸುತ್ತಿರುವುದಾಗಿ ಇದೇ ವೇಳೆ ಮೋದಿ ಸ್ಪಷ್ಟಪಡಿಸಿದರು.