ಈ ನಾಯಕರ ನಡುವಿನ ಸಂಘರ್ಷ ತಾರಕಕ್ಕೆ ಏರಿಕೆ. ಈ ಸಂಘರ್ಷವನ್ನು ಶಮನ ಮಾಡುವ ನಿಟ್ಟಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ನೂತನ ಜವಾಬ್ದಾರಿಯೊಂದನ್ನು ನೀಡಲಾಗಿದೆ. ಜಾರಕಿಹೊಳಿ ಸಹೋದರರು ಹಾಗೂ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ನಡುವಿನ ಭಿನ್ನಮತ ಪರಿಹರಿಸುವ ಹೊಣೆ ಯನ್ನು  ವಹಿಸಲಾಗಿದೆ. 

ಬೆಂಗಳೂರು: ಬೆಳಗಾವಿ ಜಿಲ್ಲಾ ನಾಯಕರ ನಡುವಿನ ಸಂಘರ್ಷವು ತಾರಕ ಕ್ಕೇರಿರುವ ಹಿನ್ನೆಲೆಯಲ್ಲಿ ಜಾರಕಿಹೊಳಿ ಸಹೋದರರು ಹಾಗೂ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ನಡುವಿನ ಭಿನ್ನಮತ ಪರಿಹರಿಸುವ ಹೊಣೆ ಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಹಿಸಲಾಗಿದೆ. ಸಿದ್ದರಾಮಯ್ಯ ಯುರೋಪ್ ಪ್ರವಾಸದಿಂದ ವಾಪಸಾದ ಬಳಿಕ ತಿಕ್ಕಾಟ ಶಮನಗೊಳಿಸುವ ಪ್ರಯತ್ನ ನಡೆಯಲಿದೆ.

ರಮೇಶ್ ಜಾರಕಿಹೊಳಿ, ಸತೀಶ್ ಜಾರಕಿಹೊಳಿ ಸಹೋದರರು ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ತಿಕ್ಕಾಟ ತೀವ್ರಗೊಂಡ ಹಿನ್ನೆಲೆಯಲ್ಲಿ ಲಕ್ಷ್ಮೀ ಹೆಬ್ಬಾ ಳ್ಕರ್ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಡಿ.ಕೆ.ಶಿವಕುಮಾರ್ ಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಜಾರಕಿಹೊಳಿ ಸಹೋದರರು ಮತ್ತಷ್ಟು ರೊಚ್ಚಿಗೆದ್ದಿದ್ದರು. 

ನಂತರ ರಮೇಶ್ ಜಾರಕಿಹೊಳಿ ಅವರನ್ನು ಭಾನುವಾರ ಕರೆಸಿ ಮಾತನಾಡಿದ ಸಿದ್ದರಾಮಯ್ಯ, ನಾನು ಯುರೋಪ್‌ನಿಂದ ವಾಪಸಾಗುವವರೆಗೆ ಯಾವುದೇ ವಿವಾದ ಮಾಡಿಕೊಳ್ಳಬಾರದೆಂದು ತಾಕೀತು ಮಾಡಿದ್ದಾರೆ. ಕಾವೇರಿ ನಿವಾಸದಲ್ಲಿ ಮಾತುಕತೆ ನಡೆಸಿದ ಅವರು, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಜತೆ ಅನಗತ್ಯವಾಗಿ ಭಿನ್ನಾಭಿಪ್ರಾಯ ಹೊಂದುವುದು ಸೂಕ್ತ ವಲ್ಲ. ಅದು ಕೂಡ ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವಾಗ ಹೈಕಮಾಂಡ್ ಸೂಕ್ಷ್ಮವಾಗಿ ಗಮನಿಸುತ್ತಿರುತ್ತದೆ. ಹೀಗಾಗಿ ಕೂಡಲೇ ಬಹಿರಂಗ ಹೇಳಿಕೆಗಳಿಗೆ ತಿಲಾಂಜಲಿ ಹಾಡಬೇಕು ಎಂದು ಸೂಚಿಸಿದರು.

ನಾನು ಯುರೋಪ್‌ನಿಂದ ವಾಪಸಾದ ಬಳಿಕ ಎರಡೂ ಕಡೆಯ ಅಭಿಪ್ರಾಯ ಪಡೆದು ಸಮಸ್ಯೆ ಬಗೆಹರಿಸುತ್ತೇನೆ. ಅಲ್ಲಿಯವರೆಗೂ ಯಾವುದೇ ಸಮಸ್ಯೆ ಮಾಡಿಕೊಳ್ಳಬಾರದು ಹಾಗೂ ಬಹಿರಂಗ ಹೇಳಿಕೆಗಳನ್ನು ನೀಡಬಾರದು ಎಂದು ಸೂಚಿಸಿದರು. ಮೊದಲು ಜಾರಕಿಹೊಳಿ ಅವರು ಸಿದ್ದರಾಮಯ್ಯ ಅವರ ಮಾತಿಗೆ ಒಪ್ಪದೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಸಿಟ್ಟು ತೋರಿಸಿದರು. ಬಳಿಕ ಬೆಳಗಾವಿ ವಿಚಾರದಲ್ಲಿ ಮೂರನೇ ವ್ಯಕ್ತಿಗಳು ತಲೆ ಹಾಕಿದಂತೆ ನೋಡಿಕೊಳ್ಳಬೇಕು. 

ನಮ್ಮ ಜಿಲ್ಲೆ ಸಮಸ್ಯೆ ನಾವೇ ಬಗೆಹರಿಸಿಕೊಳ್ಳುತ್ತೇವೆ. ಆದರೆ, ಮೂರನೇ ವ್ಯಕ್ತಿ ತಲೆ ಹಾಕಿದರೆ ಸರಿ ಇರುವುದಿಲ್ಲ ಎಂದು ಪರೋ ಕ್ಷವಾಗಿ ಡಿ.ಕೆ.ಶಿವಕುಮಾರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು ಎಂದು ತಿಳಿದುಬಂದಿದೆ. ಇಷ್ಟೇ ಅಲ್ಲದೆ, ಇದು ಹೀಗೆ ಮುಂದುವರಿದರೆ,
13 ಶಾಸಕರ ಜೊತೆ ಬಿಜೆಪಿಗೆ ಹೋಗುವುದಾಗಿ ಎಚ್ಚರಿಕೆ ನೀಡಿದರು ಎಂದು ತಿಳಿದು ಬಂದಿದೆ. ಆದರೆ, ಇದನ್ನು ಕಾಂಗ್ರೆಸ್ ಮೂಲಗಳು ನಿರಾಕರಿಸಿವೆ. 

ಜಾರಕಿಹೊಳಿ ಅವರ ಮಾತನ್ನು ಆಲಿಸಿದ ಸಿದ್ದರಾಮಯ್ಯ ಅವರು, ನಿಮ್ಮ ಜಿಲ್ಲಾ ನಾಯಕರ ನಡುವೆಯೇ ಚರ್ಚಿಸಿ ಬಗೆಹರಿಸುತ್ತೇವೆ. ಮುಂದೆ ಎಲ್ಲ ಸರಿಹೋಗುತ್ತದೆ. ಸದ್ಯಕ್ಕೆ ಯಾರೂ ಏನೂ ವಿವಾದ ಹುಟ್ಟುಹಾಕಲು ಹೋಗಬೇಡಿ, ಬಹಿರಂಗ ಹೇಳಿಕೆ ನೀಡಿ ಪಕ್ಷದ ವರ್ಚಸ್ಸಿಗೆ ಧಕ್ಕೆ ತರಬೇಡಿ. ಈ ಮಾತನ್ನು ಎರಡೂ ಕಡೆಯವರಿಗೆ ಹೇಳುತ್ತಿದ್ದೇನೆ ಎಂದು ಹೇಳಿ ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.