ಐದು ವರ್ಷ ಬಂಡವಾಳ ಆಕರ್ಷಿಸಲು ಹೊಸ ನೀತಿಗೆ ಸಚಿವ ಸಂಪುಟ ಸಭೆ ಒಪ್ಪಿ

ಬೆಳಗಾವಿ: ರಾಜ್ಯದಲ್ಲಿ ಈಗಾಗಲೇ ಸಾಫ್ಟವೇರ್ ಉದ್ಯಮಕ್ಕೆ ಇರುವ ಅಪಾರ ಬಂಡವಾಳ ಆಕರ್ಷಣೆಯನ್ನು ಹಾರ್ಡ್‌ವೇರ್ ಉದ್ಯಮಕ್ಕೂ ವಿಸ್ತರಿಸುವ ಸಲುವಾಗಿ ಮುಂದಿನ ಐದು ವರ್ಷಗಳಿಗಾಗಿ ಕರ್ನಾಟಕ ಎಲೆಕ್ಟ್ರಾನಿಕ್ ಸಿಸ್ಟಮ್ ಡಿಸೈನ್ ಆಂಡ್ ಮಾನ್ಯುಫಾಕ್ಚರಿಂಗ್ ಪಾಲಿಸಿಯನ್ನು ರಾಜ್ಯ ಸಚಿವ ಸಂಪುಟ ಅನುಮೋದಿಸಿದೆ.

ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ನೂತನ ನೀತಿಗೆ ಅನುಮೋದನೆ ನೀಡಲಾಗಿದೆ. 2017ರಿಂದ 2022ರವರಗೆ ಹಾರ್ಡ್‌ವೇರ್ ಪಾರ್ಕ್‌ಗಳ ಸ್ಥಾಪನೆಗೆ ಸರಿಸುಮಾರು 200 ಬಿಲಿಯನ್ ಡಾಲರ್ ಬಂಡವಾಳ ಆಕರ್ಷಣೆಯ ಗುರಿಯನ್ನು ಈ ನೀತಿಯಡಿ ಹೊಂದಲಾಗಿದೆ.

ಹೈಟೆಕ್ ಟೆಕ್ನಾಲಜಿ, ಥ್ರೀಡಿ ಪ್ರಿಂಟಿಂಗ್, ರೊಬೊಟಿಕ್ಸ್, ನ್ಯಾನೊ ತಂತ್ರಜ್ಞಾನ ಮತ್ತಿತರ ಹಾರ್ಡ್‌ವೇರ್ ಸಂಬಂಧಿ ಉತ್ಪಾದನಾ ವಲಯಕ್ಕೆ ಉತ್ತೇಜನ ನೀಡಲು ಈ ನೀತಿಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ಈಗಾಗಲೇ ಜಾಗತಿಕ ಮಾರುಕಟ್ಟೆಯಲ್ಲಿ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದು, ಈ ವಾತಾವರಣಕ್ಕೆ ಪೂರಕವಾಗಿ ಹಾರ್ಡ್‌ವೇರ್ ಪಾರ್ಕ್‌ಗಳ ಸ್ಥಾಪನೆಗೆ ಪ್ರೋತ್ಸಾಹ ನೀಡಲು ಕೆಲ ತೆರಿಗೆ ವಿನಾಯಿತಿ, ಪ್ರೋತ್ಸಾಹಕರ ಜಮೀನು ಹಂಚಿಕೆ ನೀತಿ, ಮೂಲಸೌಕರ್ಯ ಸೃಷ್ಟಿ ಮತ್ತಿತರ ಸೌಲಭ್ಯ ಒದಗಿಸುವ ಅಂಶಗಳನ್ನು ನೀತಿ ಹೊಂದಿದೆ ಎನ್ನಲಾಗಿದೆ.