Asianet Suvarna News Asianet Suvarna News

ಸರ್ವರಿಗೂ ಕಡ್ಡಾಯ ಆರೋಗ್ಯ ಸೇವೆ ಒದಗಿಸುವ ಯೋಜನೆಗೆ ಚಾಲನೆ

ರಾಜ್ಯದ ಪ್ರತಿಯೊಬ್ಬರಿಗೂ ಕಡ್ಡಾಯ ಆರೋಗ್ಯ ಸೇವೆ ಒದಗಿಸಲು ರೂಪಿಸಿರುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಆರೋಗ್ಯ ಕರ್ನಾಟಕ’ (ಯೂನಿವರ್ಸಲ್‌ ಹೆಲ್ತ್‌ ಕವರೇಜ್‌) ಯೋಜನೆಗೆ ಇಂದು ಚಾಲನೆ ದೊರೆಯಲಿದೆ.

New Health Sheame

ಬೆಂಗಳೂರು : ರಾಜ್ಯದ ಪ್ರತಿಯೊಬ್ಬರಿಗೂ ಕಡ್ಡಾಯ ಆರೋಗ್ಯ ಸೇವೆ ಒದಗಿಸಲು ರೂಪಿಸಿರುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಆರೋಗ್ಯ ಕರ್ನಾಟಕ’ (ಯೂನಿವರ್ಸಲ್‌ ಹೆಲ್ತ್‌ ಕವರೇಜ್‌) ಯೋಜನೆಗೆ ಇಂದು ಚಾಲನೆ ದೊರೆಯಲಿದೆ.

ಈ ಮೂಲಕ ಎಲ್ಲಾ ವರ್ಗಗಳಿಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಹಾಗೂ ಕಡ್ಡಾಯ ಚಿಕಿತ್ಸೆ, ಬಡ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಕುಟುಂಬಗಳಿಗೆ .1.5 ಲಕ್ಷ ಮೊತ್ತದವರೆಗೆ ಖಾಸಗಿ ಆಸ್ಪತ್ರೆಗಳಲ್ಲಿ ಕ್ಯಾಶ್‌ಲೆಸ್‌ ಚಿಕಿತ್ಸೆ ನೀಡುವ ಮಾದರಿ ಯೋಜನೆ ರಾಜ್ಯಾದ್ಯಂತ ಜಾರಿಯಾಗಲಿದೆ.

ಯೋಜನೆಯಡಿ 1.4 ಲಕ್ಷ ಕುಟುಂಬಗಳಿಗೆ ಸರ್ಕಾರದ ವೆಚ್ಚದಲ್ಲೇ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುವುದು. ಜತೆಗೆ ಕೆಪಿಎಂಇ ಕಾಯ್ದೆ ನಿಯಮಗಳ ಪ್ರಕಾರ ಹಣ ಪಾವತಿಸದಿದ್ದರೂ ಯಾವುದೇ ವ್ಯಕ್ತಿಗೆ ಚಿಕಿತ್ಸೆ ನಿರಾಕರಿಸಬಾರದು ಹಾಗೂ ಚಿಕಿತ್ಸಾ ಶುಲ್ಕ ಪಾವತಿಸಿಲ್ಲ ಎಂಬ ಕಾರಣಕ್ಕೆ ಶವ ಒತ್ತೆ ಇಟ್ಟುಕೊಳ್ಳಬಾರದು. ಯೂನಿವರ್ಸಲ್‌ ಹೆಲ್ತ್‌ ಯೋಜನೆ ಜಾರಿಗೊಂಡ ಬಳಿಕ ಎಲ್ಲಾ ಎಪಿಎಲ್‌ ಹಾಗೂ ಬಿಪಿಎಲ್‌ ಕಾರ್ಡ್‌ದಾರರಿಗೂ ಚಿಕಿತ್ಸೆಗೆ ರಾಜ್ಯ ಸರ್ಕಾರ ಧನಸಹಾಯ ಮಾಡುತ್ತದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಯೋಜನೆ ಅನುಷ್ಠಾನ ಹೀಗೆ:

ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಏಳು ಸರ್ಕಾರಿ ಆರೋಗ್ಯ ಕಾರ್ಯಕ್ರಮಗಳನ್ನು ‘ಆರೋಗ್ಯ ಕರ್ನಾಟಕ’ ಯೋಜನೆಯಡಿಗೆ ತರಲಾಗುವುದು. ಎಪಿಎಲ್‌ ಕುಟುಂಬಗಳ ರಾಜೀವ್‌ ಆರೋಗ್ಯ ಭಾಗ್ಯ, ಸರ್ಕಾರಿ ಉದ್ಯೋಗಿಗಳ ಜ್ಯೋತಿ ಸಂಜೀವಿನಿ, ರಸ್ತೆ ಅಪಘಾತಗಳ ಮುಖ್ಯಮಂತ್ರಿಗಳ ಸಾಂತ್ವನ ಯೋಜನೆ, ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ, ಆರ್‌ಬಿಎಸ್‌ಕೆ, ಅಂಗವಿಕಲರಿಗೆ ಸಾಧನ ವಿತರಿಸುವ ಯೋಜನೆ, ಇಂದಿರಾ ಸುರಕ್ಷಾ ಯೋಜನೆ (ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬ)ಗಳಲ್ಲಿ ನೋಂದಾಯಿಸಿಕೊಂಡಿರುವ ವ್ಯಕ್ತಿಗಳು ನೇರವಾಗಿ ‘ಆರೋಗ್ಯ ಕರ್ನಾಟಕ’ ಯೋಜನೆಗೆ ಫಲಾನುಭವಿಗಳಾಗುತ್ತಾರೆ. ಅವರಿಗೆ ಆಧಾರ್‌ ಕಾರ್ಡ್‌ಗೆ ಲಿಂಕ್‌ ಆಗಿರುವ ಸ್ಮಾರ್ಟ್‌ ಕಾರ್ಡ್‌ ವಿತರಣೆ ಮಾಡಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಫಲಾನುಭವಿಗಳ ಆಯ್ಕೆಗೆ ವರ್ಗ-ಎ ಮತ್ತು ವರ್ಗ-ಬಿ ಎಂದು ಎರಡು ವಿಭಾಗಗಳನ್ನು ಮಾಡಲಾಗುತ್ತಿದೆ. ಸರ್ಕಾರ ಭರಿಸುವ ವೆಚ್ಚದಲ್ಲಿ ‘ಎ’ ವರ್ಗದಲ್ಲಿ ಸೇರುವವರಿಗೆ ಸರ್ಕಾರದೊಂದಿಗೆ ಒಡಂಬಡಿಕೆ ಮಾಡಿಕೊಂಡ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ದೊರೆಯಲಿದೆ.

ವರ್ಗ- ಬಿ ವ್ಯಾಪ್ತಿಯಲ್ಲಿ ಬರುವವರಿಗೆ ಜಟಿಲ ಚಿಕಿತ್ಸೆಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಶೇ.30 ರಿಯಾಯಿತಿ ಸಿಗಲಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಲಭ್ಯವಿಲ್ಲದ ಚಿಕಿತ್ಸೆಯನ್ನು ಖಾಸಗಿ ಆಸ್ಪತ್ರೆಯಲ್ಲಿ ಪಡೆದರೆ ಮಾತ್ರ ಸರ್ಕಾರದಿಂದ ಚಿಕಿತ್ಸಾ ಹಣ ಪಾವತಿ ಆಗಲಿದೆ.

ದ್ವಿತೀಯ, ತೃತೀಯ ಹಂತದ ಚಿಕಿತ್ಸೆಗೆ ಒತ್ತು:

ಯೋಜನೆಯಡಿ ದ್ವಿತೀಯ ಹಂತದ ಆರೋಗ್ಯ ಸೇವೆಯ 1000 ಚಿಕಿತ್ಸಾ ವಿಧಾನಗಳಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗುವುದು. ದ್ವಿತೀಯ, ತೃತೀಯ ಹಂತದ ಜಟಿಲ ಕಾಯಿಲೆಗಳಿಗೆ ಖಾಸಗಿ ಆಸ್ಪತ್ರೆ ಮೂಲಕ ಉಚಿತ ಚಿಕಿತ್ಸೆ ಕೊಡಿಸಲಾಗುವುದು. ವರ್ಗ-ಬಿ ಅಡಿಯಲ್ಲಿ ನಿಗದಿಪಡಿಸಿದ ಪ್ಯಾಕೇಜ್‌ ದರದಲ್ಲಿ ಶೇ.30 ವೆಚ್ಚವನ್ನು ಸರ್ಕಾರ ಭರಿಸಲಿದೆ. ಆರೋಗ್ಯ ಕರ್ನಾಟಕದಡಿ ನೋಂದಣಿ ಮಾಡಿಕೊಳ್ಳಲು ವಾರ್ಷಿಕ ಪ್ರತಿ ವ್ಯಕ್ತಿಗೆ ಗ್ರಾಮಿಣ ಪ್ರದೇಶದವರಿಗೆ .300 ಹಾಗೂ ನಗರ ಪ್ರದೇಶದವರಿಗೆ .700 ರಂತೆ ನಿಗದಿಪಡಿಸಲಾಗುವುದು.

ಯೋಜನೆ ಲಾಭ ಪಡೆಯುವುದು ಹೇಗೆ?

ಈಗಾಗಲೇ ಸರ್ಕಾರದ ಯಾವುದೇ ಆರೋಗ್ಯ ಯೋಜನೆಯೊಂದಿಗೆ ನೋಂದಣಿಯಾಗಿದ್ದರೂ, ವ್ಯಕ್ತಿಯು ನೇರವಾಗಿ ಆರೋಗ್ಯ ಕರ್ನಾಟಕ ಯೋಜನೆಯ ಫಲಾನುಭವಿಯಾಗುತ್ತಾರೆ. ಉಳಿದವರಲ್ಲಿ ಗ್ರಾಮೀಣ ಪ್ರದೇಶದವರು 300 ರು. ಹಾಗೂ ನಗರ ಪ್ರದೇಶದವರು 700 ರು. ವಾರ್ಷಿಕ ಶುಲ್ಕ ಪಾವತಿಸಿ ಫಲಾನುಭವಿಯಾಗಬಹುದು. ಫಲಾನುಭವಿಗೆ ಸ್ಮಾರ್ಟ್‌ ಕಾರ್ಡ್‌ ವಿತರಿಸಲಿದ್ದು, ಕಾರ್ಡ್‌ ತೋರಿಸಿ ಚಿಕಿತ್ಸೆ ಪಡೆಯಬಹುದು.

ಉಚಿತ ಚಿಕಿತ್ಸೆ ಸಿಗಬೇಕೆಂದರೆ ಮೊದಲು ಸರ್ಕಾರಿ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯಬೇಕು. ಸರ್ಕಾರಿ ಆಸ್ಪತ್ರೆಯಲ್ಲಿ ಪಡೆಯುವ ಚಿಕಿತ್ಸೆ ಉಚಿತವಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಲಭ್ಯವಿರದ ಜಟಿಲ ಚಿಕಿತ್ಸೆಗಳನ್ನು ಪಡೆಯಲು ವೈದ್ಯರಿಂದ ದೃಢೀಕರಣ ಪಡೆದು ಖಾಸಗಿ ಆಸ್ಪತ್ರೆಗೆ ದಾಖಲಾಗಬೇಕು. ಅಂತಹವರಿಗೆ ದ್ವಿತೀಯ ಹಾಗೂ ತೃತೀಯ ಹಂತದ ಜಟಿಲ ಚಿಕಿತ್ಸೆಗಾಗಿ ಪ್ರತಿ ಕುಟುಂಬಕ್ಕೆ ವಾರ್ಷಿಕ 1.5 ಲಕ್ಷ ರು.ಗಳವರೆಗೆ ಸರ್ಕಾರವೇ ವೆಚ್ಚ ಭರಿಸುತ್ತದೆ. ಎಪಿಎಲ್‌ ಕುಟುಂಬಗಳಿಗೆ ಶೇ.30ರಷ್ಟುಸರ್ಕಾರ ಭರಿಸಲಿದೆ. ನೋಂದಣಿ ಪ್ರಕ್ರಿಯೆ ಹಾಗೂ ಶುಲ್ಕ ವಿವರ ಮಾ.2ರಂದು ಅಧಿಕೃತವಾಗಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಪಿಎಲ್‌ ಕಾರ್ಡುದಾರರು, ರೈತರು, ಅನುದಾನಿತ ಶಾಲಾ ಶಿಕ್ಷಕರು, ಅಂಗನವಾಡಿ, ಬಿಸಿಯೂಟ, ಆಶಾ ಕಾರ‍್ಯಕರ್ತೆಯರು, ಆರ್ಥಿಕವಾಗಿ ಹಿಂದುಳಿದ ಎಸ್ಸಿ-ಎಸ್ಟಿಜನರು, ಸಹಕಾರಿ ಸಂಘ ಸದಸ್ಯರು, ಪತ್ರಕರ್ತರು ಸೇರಿ ಸರ್ಕಾರ ‘ಎ ವರ್ಗ’ ಎಂದು ನಿಗದಿಪಡಿಸಿದವರು. ಇವರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ 1000 ರೀತಿಯ ಚಿಕಿತ್ಸೆ ಉಚಿತ. ಖಾಸಗಿ ಆಸ್ಪತ್ರೆಗಳಲ್ಲಿ ವಾರ್ಷಿಕ 1.5 ಲಕ್ಷ ರು.ವರೆಗೆ ಚಿಕಿತ್ಸಾ ವೆಚ್ಚ ಸರ್ಕಾರದಿಂದ ಪಾವತಿ. ಉಳಿದ ವರ್ಗದವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸಾ ವೆಚ್ಚದ ಶೇ.30 ಮಾತ್ರ ಸರ್ಕಾರದಿಂದ ಪಾವತಿ.

ಪಡೆಯೋದು ಹೇಗೆ?

- ಈಗಾಗಲೇ ಸರ್ಕಾರಿ ಆರೋಗ್ಯ ವಿಮಾ ಸೌಲಭ್ಯಕ್ಕೆ ನೋಂದಣಿಯಾಗಿರುವವರು ತನ್ನಿಂತಾನೇ ಹೊಸ ಯೋಜನೆ ವ್ಯಾಪ್ತಿಗೆ

- ಇನ್ನೂ ನೋಂದಣಿ ಆಗದ ಗ್ರಾಮೀಣರು ತಲಾ 300 ರು., ನಗರಗಳಲ್ಲಿ 700 ರು. ನೀಡಿ ನೋಂದಾಯಿಸಿಕೊಳ್ಳಬೇಕು

Follow Us:
Download App:
  • android
  • ios