ಬೆಂಗಳೂರು :  ಹರಿದು ಹೋಗುತ್ತಿರುವ ನೀರು ಸಂಗ್ರಹಿಸಲು ಮಧ್ಯ ಭಾಗದಲ್ಲಿ ಜಲಾಶಯ ನಿರ್ಮಿಸುವ ಬಗ್ಗೆ ಅಲ್ಲಿನ ರೈತರ ಬಳಿ ಚರ್ಚಿಸಲು ಶೀಘ್ರವೇ ತಮಿಳುನಾಡಿಗೆ ಭೇಟಿ ನೀಡುತ್ತೇನೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ತಿಳಿಸಿದ್ದಾರೆ. ಕನ್ನಡ ಪ್ರಭ, ಸುವರ್ಣ ನ್ಯೂಸ್ ಏರ್ಪಡಿಸಿದ್ದ ‘ಹಲೋ ಸಿಎಂ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮಿಳುನಾಡು ರೈತರು ಹಾಗೂ ಸರ್ಕಾರ ಕರ್ನಾಟಕದ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಬೇಕು. 

ಕಾವೇರಿ ಕಣಿವೆ ಭಾಗದಲ್ಲಿ ಜಲಾಶಯ ನಿರ್ಮಿಸಿದರೆ 2 ರಾಜ್ಯಗಳ ರೈತರಿಗೆ ಅನುಕೂಲವಾಗಲಿದೆ ಎಂದರು. ನ್ಯಾಯಾಧೀಕರಣ,  ಸುಪ್ರೀಂ ಕೋರ್ಟ್ ಆದೇಶದಿಂದ ಅಂತಿಮ ನಿರ್ಧಾರ ಸಾಧ್ಯವಿಲ್ಲ. ಮಾನವೀಯ ನೆಲೆಗಟ್ಟಿನಲ್ಲಿ ಈ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು. ತಮಿಳುನಾಡಿಗೆ ನಾವು ಈ ವರ್ಷ ಬಿಡುಗಡೆ ಮಾಡಿರುವ ನೀರು ಅಲ್ಲಿನ ರೈತರಿಗೆ ತೃಪ್ತಿ ತರಿಸಿದೆ. ಎರಡೂ ರಾಜ್ಯದವರು ಸಹೋದರರು.

ನಮ್ಮಲ್ಲಿ ನೀರು ಇದ್ದಾಗ ನಾವು ಬಿಡುಗಡೆ ಮಾಡಲು ಯಾವುದೇ ಸಮಸ್ಯೆ ಇಲ್ಲ. ಇಲ್ಲದಿದ್ದಲ್ಲಿ ಹೇಗೆ ಬಿಡುಗಡೆ ಮಾಡಲಾಗುತ್ತದೆ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು. ಜಲಾಶಯ ನಿರ್ಮಾಣಕ್ಕೆ ಪ್ರಯತ್ನ ಕಾವೇರಿ ಜಲಾನಯನ ಪ್ರದೇಶದಲ್ಲಿ ಈ ಬಾರಿ ಉತ್ತಮ ಮಳೆಯಾಗುತ್ತಿದ್ದು, ತಮಿಳುನಾಡಿಗೆ ಈಗಾಗಲೇ ನಿಯಮಕ್ಕಿಂತ ಹೆಚ್ಚು ಅಂದರೆ ಸೆಪ್ಟೆಂಬರ್ ತಿಂಗಳು ಹರಿಸಬೇಕಿದ್ದ ನೀರನ್ನು ರಾಜ್ಯದಿಂದ ಬಿಡುಗಡೆ ಮಾಡಲಾಗಿದೆ.

ತಮಿಳುನಾಡಿನ ಮೆಟ್ಟೂರು ಜಲಾಶಯ ಭರ್ತಿಯಾದರೆ ನೀರನ್ನು ಸಮುದ್ರಕ್ಕೆ ಹರಿಸಲಾಗುತ್ತದೆ. ವ್ಯರ್ಥವಾಗುವ ನೀರನ್ನು ಸಂಗ್ರಹಿಸಲು ಮಧ್ಯದಲ್ಲಿ ಜಲಾಶಯವೊಂದನ್ನು ನಿರ್ಮಿಸಲು 20  ವರ್ಷಗಳಿಂದ ಮನವಿ ಮಾಡಲಾಗುತ್ತಿದೆ. ಇದಕ್ಕೆ ತಮಿಳುನಾಡು ಸರ್ಕಾರ ಹಾಗೂ ಅಲ್ಲಿನ ರೈತರು ತಕರಾರು ತೆಗೆಯಬಾರದು. ಈ ಬಗ್ಗೆ ಅಲ್ಲಿನ ರೈತರು ಮತ್ತು ರಾಜಕಾರಣಿಗಳ ಜತೆ ಚರ್ಚಿಸಲು ಶೀಘ್ರವೇ ತಮಿಳುನಾಡಿಗೆ ಭೇಟಿ ನೀಡಲಾಗುವುದು ಎಂದು ಹೇಳಿದರು. ಕಾವೇರಿ ನದಿಯ ವ್ಯಾಪ್ತಿಗೆ ಬರುವ ಎಲ್ಲಾ ಕೆರೆಕಟ್ಟೆಗಳ ತುಂಬಿಸುವ ಕೆಲಸ ಶುರುವಾಗಿದೆ. ಮೂರು ವರ್ಷದಿಂದ ಕಾವೇರಿ ಭಾಗದ ರೈತರು ಭತ್ತ ಬೆಳೆದಿರಲಿಲ್ಲ. ಇದೀಗ ಭತ್ತ ಬೆಳೆಯಲು ರೈತರಿಗೆ ಹೇಳಲಾಗಿದೆ ಎಂದರು.