ವಿಶ್ವ ಪರಿಸರ ದಿನವಾದ ಜೂ.5ರಂದು ತ್ಯಾಜ್ಯ ನಿರ್ವಹಣೆಗೆ ಸಂಬಂಧಿ​ಸಿದ ಬೃಹತ್‌ ಅಭಿಯಾನಕ್ಕೆ ಚಾಲನೆ ನೀಡಲಾಗುವುದು ಎಂದು ಮೋದಿ ಘೋಷಿಸಿದ್ದಾರೆ. ಈ ಯೋಜನೆಯಡಿ ದೇಶದ 4 ಸಾವಿರ ನಗರಗಳಲ್ಲಿ ಘನ ಹಾಗೂ ದ್ರವ ತ್ಯಾಜ್ಯ ಸಂಗ್ರಹಣ ವಿಧಾನಗಳನ್ನು ಆರಂಭಿಸಲಾಗುತ್ತದೆ

ನವದೆಹಲಿ: ಕೇಂದ್ರ ಸರ್ಕಾರ ಯಶಸ್ವಿಯಾಗಿ ಮೂರು ವರ್ಷಗಳನ್ನು ಪೂರ್ಣಗೊಳಿಸಿದ ಬೆನ್ನಲ್ಲೇ ಮತ್ತೊಂದು ಸ್ವಚ್ಛತಾ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಜ್ಜಾಗುತ್ತಿದ್ದಾರೆ. ರಾಜ್ಯ ಸರ್ಕಾರಗಳು ಹಾಗೂ ಜನಪ್ರತಿನಿಧಿಗಳ ನೆರವಿನೊಂದಿಗೆ ವಿಶ್ವ ಪರಿಸರ ದಿನವಾದ ಜೂ.5ರಂದು ತ್ಯಾಜ್ಯ ನಿರ್ವಹಣೆಗೆ ಸಂಬಂಧಿ​ಸಿದ ಬೃಹತ್‌ ಅಭಿಯಾನಕ್ಕೆ ಚಾಲನೆ ನೀಡಲಾಗುವುದು ಎಂದು ಘೋಷಿಸಿದ್ದಾರೆ.

ಈ ಯೋಜನೆಯಡಿ ದೇಶದ 4 ಸಾವಿರ ನಗರಗಳಲ್ಲಿ ಘನ ಹಾಗೂ ದ್ರವ ತ್ಯಾಜ್ಯ ಸಂಗ್ರಹಣ ವಿಧಾನಗಳನ್ನು ಆರಂಭಿಸಲಾಗುತ್ತದೆ ಎಂದು ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್‌ ಕೀ ಬಾತ್‌'ನಲ್ಲಿ ಭಾನುವಾರ ಅವರು ತಿಳಿಸಿದರು.
ಭಾನುವಾರ ವೀರ ಸಾವರ್ಕರ್‌ ಅವರ ಜನ್ಮದಿನವೂ ಆಗಿದ್ದ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ಸೇನಾನಿಯನ್ನು ಪ್ರಧಾನಿ ಮೋದಿಯವರು ಇದೇ ಸಂದರ್ಭದಲ್ಲಿ ಸ್ಮರಿಸಿದರು.