ನವದೆಹಲಿ(ಡಿ.25): ಹೊಸ ವರ್ಷಕ್ಕೆ ದೇಶದ ಜನತೆಗೆ ಭರ್ಜರಿ ಗಿಫ್ಟ್ ಕೊಡಲು ಮುಂದಾಗಿರುವ ರೈಲ್ವೇ ಇಲಾಖೆ, ರಾಮಸೇತುವಿನಿಂದ ಧನುಸ್ ಕೋಡಿಗೆ ರೈಲು ಸಂಪರ್ಕ ಕಲ್ಪಿಸುವ ನಿರ್ಧಾರ ಕೈಗೊಂಡಿದೆ.

ರಾಮೇಶ್ವರಂ-ಧನುಸ್ ಕೋಡಿ ನಡುವಿನ 17 ಕಿ.ಮೀ. ಉದ್ದದ ಹೊಸ ಬ್ರಾಡ್‌ಗೇಜ್ ರೈಲು ಹಳಿ ನಿರ್ಮಾಣ ಕಾರ್ಯಕ್ಕೆ ರೈಲ್ವೇ ಇಲಾಖೆ ಒಪ್ಪಿಗೆ ನೀಡಿದೆ. ಒಟ್ಟು 208 ಕೋಟಿ ರೂ. ವೆಚ್ಚದಲ್ಲಿ ಈ ಹಳಿ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.

1964ರಲ್ಲಿ ರಾಮೇಶ್ವರಂನಲ್ಲಿ ಸಂಭವಿಸಿದ್ದ ಭೀಕರ ಚಂಡಮಾರುತದಲ್ಲಿ ಧನುಸ್ ಕೋಡಿ ರೈಲು ನಿಲ್ದಾಣ ನಾಶವಾಗಿತ್ತು. ಆದರೆ ಈ ರೈಲು ನಿಲ್ದಾಣದ ದುರಸ್ತಿ ಕಾರ್ಯ ಮಾಡಿಯೇ ಇರಲಿಲ್ಲ.

ಇದೀಗ ಮತ್ತೆ ಈ ರೈಲು ನಿಲ್ದಾಣವನ್ನು ನಿರ್ಮಿಸಿ ರಾಮಸೇತುವಿಗೆ ರೈಲು ಸಂಪರ್ಕ ಕಲ್ಪಿಸಲು ಇಲಾಖೆ ಮುಂದಾಗಿದೆ.