ಆರ್‌ಬಿಐ ಎಟಿಎಂ ಶುಲ್ಕ ನಿಯಮಗಳನ್ನು ಪರಿಷ್ಕರಿಸಿದೆ. ಮೇ 1 ರಿಂದ, ಮೆಟ್ರೋ ನಗರಗಳಲ್ಲಿ 3 ಮತ್ತು ಇತರೆಡೆ 5 ಉಚಿತ ವಹಿವಾಟುಗಳ ನಂತರ, ಪ್ರತಿ ಹೆಚ್ಚುವರಿ ವಹಿವಾಟಿಗೆ ₹23 ಶುಲ್ಕ ವಿಧಿಸಲಾಗುವುದು. ಕ್ಯಾಶ್ ರೀಸೈಕ್ಲರ್‌ನಲ್ಲಿ ಹಣ ಜಮಾ ಮಾಡುವುದು ಉಚಿತ. ಇದು ಎಟಿಎಂ ಸೇವೆಗಳ ಸುಸ್ಥಿರತೆ ಖಾತ್ರಿಪಡಿಸಲು ಹಾಗೂ ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸಲು ಉದ್ದೇಶಿಸಿದೆ.

ಎಟಿಎಂ ಶುಲ್ಕಗಳಿಗೆ ಸಂಬಂಧಿಸಿದ ನೀತಿ-ನಿಯಮವನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ನವೀಕರಿಸಿದೆ. 2025 ಮೇ 1, ಗುರುವಾರದಿಂದ ಈ ಹೊಸ ನಿಯಮ ಜಾರಿಗೆ ಬರಲಿದೆ. ದೇಶದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಈ ಬದಲಾವಣೆಗಳು ಉಚಿತ ವಹಿವಾಟು ಮಿತಿಗಳು, ಹೆಚ್ಚುವರಿ ವಹಿವಾಟುಗಳಿಗೆ ಶುಲ್ಕಗಳು, ಇಂಟರ್‌ಚೇಂಜ್ ಶುಲ್ಕಗಳ ಮೇಲೆ ಪರಿಣಾಮ ಬೀರಲಿವೆ.

ಹೊಸ ನಿಯಮ ಏನು ಹೇಳುತ್ತದೆ?
ಈ ಹೊಸ ನೀತಿ ನಿಯಮದ ಪ್ರಕಾರ, ಗ್ರಾಹಕರು ತಿಂಗಳಿಗೆ ನಿಗದಿತ ಸಂಖ್ಯೆಯ ವಹಿವಾಟುಗಳಿಗೆ ಎಟಿಎಂ ಬಳಸಬಹುದು, ನಂತರ ಶುಲ್ಕ ವಿಧಿಸಲಾಗುವುದು. ಮೆಟ್ರೋ ಪ್ರದೇಶಗಳಲ್ಲಿ 3 ಫ್ರೀ ವಹಿವಾಟುಗಳು ಹಾಗೂ ಮೆಟ್ರೋ ಅಲ್ಲದ ಪ್ರದೇಶಗಳಲ್ಲಿ 5 ಉಚಿತ ವಹಿವಾಟುಗಳಿರುತ್ತವೆ, ಇದರಲ್ಲಿ ಆರ್ಥಿಕ, ಆರ್ಥಿಕವಲ್ಲದ ವಹಿವಾಟುಗಳು ಒಳಗೊಂಡಿರುತ್ತವೆ.

ಎಷ್ಟು ಹಣ ನೀಡಬೇಕು? 
ವಹಿವಾಟು ಮಿತಿ ಮೀರಿದ ನಂತರ, ಗ್ರಾಹಕರು ಎಟಿಎಂ, ಕ್ಯಾಶ್ ರೀಸೈಕ್ಲರ್ ಮೆಷಿನ್‌ಗಳ (CRMs) ಮೂಲಕ ಮಾಡುವ ಪ್ರತಿ ಹೆಚ್ಚುವರಿ ವಹಿವಾಟಿಗೆ ₹23 ಶುಲ್ಕ ನೀಡಬೇಕಾಗುವುದು. ಆದರೆ, CRMಗಳ ಮೂಲಕ ಹಣವನ್ನು ಜಮಾ ಮಾಡುವುದಕ್ಕೆ ಈ ಶುಲ್ಕಗಳು ಮಾತ್ರ ಅನ್ವಯವಾಗುವುದಿಲ್ಲ.

ಈಗ ಎಷ್ಟು ATM ಇವೆ? 
ಗ್ರಾಹಕರು ತಮ್ಮ ಬ್ಯಾಂಕ್‌ ಖಾತೆಯ ATM ಬಳಸಿದಾಗ ಕೇವಲ ಆರ್ಥಿಕ ವಹಿವಾಟುಗಳನ್ನು ಮಾತ್ರ ಲೆಕ್ಕಕ್ಕೆ ತಗೊಳ್ಳುತ್ತಾರೆ, ಆದರೆ ಇತರ ಬ್ಯಾಂಕ್‌ಗಳ ಎಟಿಎಂ ಬಳಸಿದಾಗ ಆರ್ಥಿಕ, ಆರ್ಥಿಕವಲ್ಲದ ಎರಡೂ ವಹಿವಾಟುಗಳನ್ನು ಲೆಕ್ಕ ಮಾಡಲಾಗುತ್ತದೆ. ದೇಶದಲ್ಲಿ ಎಟಿಎಂ ಕಾರ್ಯಾಚರಣೆಗಳ ಆರ್ಥಿಕ ಸಾಮರ್ಥ್ಯವನ್ನು ಖಾತ್ರಿಪಡಿಸುವ ಅಗತ್ಯದಿಂದಾಗಿ ಆರ್‌ಬಿಐ ಈ ನಿರ್ಧಾರ ಕೈಗೊಂಡಿದೆ. ಲೈವ್‌ಮಿಂಟ್ ವರದಿ ಹೇಳುವಂತೆ ಜನವರಿ 2025ರಲ್ಲಿ ನಮ್ಮ ಭಾರತದಲ್ಲಿ 2,16,706 ಎಟಿಎಂಗಳಿದ್ದವು, ಇದರಲ್ಲಿ 1,30,902 ಆನ್‌ಸೈಟ್, 85,804 ಆಫ್‌ಸೈಟ್ ಘಟಕಗಳು ಸೇರಿವೆ.

ಪರಿಣಾಮಗಳು?
ಈ ಎಟಿಎಂ ಕಾರ್ಯಾಚರಣೆಗಳು, ATM ಹ್ಯಾಂಡಲ್‌ ಮಾಡೋದು, ಕ್ಯಾಶ್‌ ಎಣಿಕೆ, ತಂತ್ರಜ್ಞಾನ ಅಪ್‌ಡೇಟ್‌ ಮಾಡುವುದು ಮುಂತಾದವುಗಳ ಮೇಲೆ ಪರಿಣಾಮ ಬೀರುತ್ತದೆ. ಎಟಿಎಂ ಸೌಲಭ್ಯವನ್ನು ಮುಂದುವರೆಸಲು ಶುಲ್ಕ ಹಾಕುವುದು ಅಗತ್ಯವಾಗಿದೆ, ಇದು ಸಣ್ಣ ಬ್ಯಾಂಕ್‌ಗಳಿಗೆ, ವೈಟ್ ಲೇಬಲ್ ಆಪರೇಟರ್‌ಗಳಿಗೆ ರಿಲೀಫ್ ನೀಡುತ್ತದೆ. ಸದ್ಯ ಎಟಿಎಂ ವಹಿವಾಟು ಶುಲ್ಕ ಹೆಚ್ಚಾಗುತ್ತದೆ, ಗ್ರಾಹಕರಿಗೂ ಸೌಲಭ್ಯ ಸಿಗಬೇಕು. ಇದನ್ನು ಆರ್‌ಬಿಐ ಪರಿಷ್ಕರಣೆ ಮಾಡುತ್ತದೆ. ಡಿಜಿಟಲ್ ವಹಿವಾಟುಗಳು ( Paytm, Phonepay, Googlepay, Neft ) ಹೆಚ್ಚು ಜನಪ್ರಿಯವಾಗುತ್ತಿರೋದು ಕಾಣಿಸುತ್ತಿದೆ. 

ಆಟೋಮೇಟೆಡ್ ಟೆಲ್ಲರ್ ಮೆಷಿನ್ (ಎಟಿಎಂ) ಒಂದು ಕಂಪ್ಯೂಟರೀಕೃತ ಟರ್ಮಿನಲ್ ಆಗಿದ್ದು, ಗ್ರಾಹಕರು ತಮ್ಮ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ಹಣ ತೆಗೆಯುವಿಕೆ, ಠೇವಣಿ ಮಾಡುವಿಕೆ ಮತ್ತು ಖಾತೆಯ ಬ್ಯಾಲೆನ್ಸ್ ಪರಿಶೀಲನೆಯಂತಹ ಆರ್ಥಿಕ ವಹಿವಾಟುಗಳನ್ನು ನಡೆಸಬಹುದು.

ATM ಹೇಗೆ ಕೆಲಸ ಮಾಡುತ್ತದೆ?
ಎಟಿಎಂಗಳು ಒಂದು ನೆಟ್‌ವರ್ಕ್‌ಗೆ ಸಂಪರ್ಕಿತವಾಗಿವೆ, ಇದು ವಹಿವಾಟುಗಳನ್ನು ಪರಿಶೀಲಿಸಿ ಖಾತೆಯ ಬ್ಯಾಲೆನ್ಸ್‌ನ್ನು ರಿಯಲ್-ಟೈಮ್‌ನಲ್ಲಿ ನವೀಕರಿಸುತ್ತದೆ. ಗ್ರಾಹಕರು ತಮ್ಮ ಕಾರ್ಡ್ ಮತ್ತು ಪಿನ್ ಬಳಸಿಕೊಂಡು ತಮ್ಮ ಖಾತೆಗಳನ್ನು ಪ್ರವೇಶಿಸಬಹುದು.

ATM ವಿಧಗಳು
ಆನ್-ಸೈಟ್ ಎಟಿಎಂಗಳು
ಬ್ಯಾಂಕ್ ಶಾಖೆಗಳು ಅಥವಾ ಇತರ ಸ್ಥಳಗಳೊಳಗೆ ಇರುವ ಎಟಿಎಂಗಳು.
ಆಫ್-ಸೈಟ್ ಎಟಿಎಂಗಳು
ಶಾಪಿಂಗ್ ಮಾಲ್‌ಗಳು, ವಿಮಾನ ನಿಲ್ದಾಣಗಳು ಅಥವಾ ಸ್ವತಂತ್ರ ಕಿಯೋಸ್ಕ್‌ಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಇರುವ ಎಟಿಎಂಗಳು.

ATM ಸೇವೆಗಳು
ಹಣ ತೆಗೆಯುವಿಕೆ
ಬ್ಯಾಲೆನ್ಸ್ ವಿಚಾರಣೆ
ಹಣ ವರ್ಗಾವಣೆ
ಠೇವಣಿ ಸೇವೆಗಳು (ನಗದು ಅಥವಾ ಚೆಕ್)
ಬಿಲ್ ಪಾವತಿಗಳು

ಎಟಿಎಂ ಬಳಕೆಗೆ ಸಲಹೆಗಳು
ಪಿನ್ ನಮೂದಿಸುವಾಗ ಯಾವಾಗಲೂ ಕೀಪ್ಯಾಡ್ ಅನ್ನು ಮುಚ್ಚಿಡಿ.
ಎಟಿಎಂ ಬಳಸುವಾಗ ನಿಮ್ಮ ಸುತ್ತಮುತ್ತಲಿನ ಬಗ್ಗೆ ಎಚ್ಚರಿಕೆಯಿಂದಿರಿ.
ಯಾವುದೇ ಸಂದೇಹಾಸ್ಪದ ಚಟುವಟಿಕೆಗಾಗಿ ನಿಮ್ಮ ಖಾತೆಯ ಹೇಳಿಕೆಗಳನ್ನು ನಿಯಮಿತವಾಗಿ ಪರಿಶೀಲಿಸಿ.