2 ದಿನಗಳ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸಭೆ ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ಭುವನೇಶ್ವರದಲ್ಲಿ ಪ್ರಾರಂಭವಾಗಿದೆ. 2019 ರ ಲೋಕಸಭಾ ಚುನಾವಣೆ ಎದುರಿಸಲು ಬಿಜೆಪಿ ಸಕಲ ಸಿದ್ಧತೆ ನಡೆಸುತ್ತಿದ್ದು ಅಜೆಂಡಾವನ್ನು ರೂಪಿಸುತ್ತಿದೆ.
ನವದೆಹಲಿ (ಏ.15): 2 ದಿನಗಳ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸಭೆ ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ಭುವನೇಶ್ವರದಲ್ಲಿ ಪ್ರಾರಂಭವಾಗಿದೆ. 2019 ರ ಲೋಕಸಭಾ ಚುನಾವಣೆ ಎದುರಿಸಲು ಬಿಜೆಪಿ ಸಕಲ ಸಿದ್ಧತೆ ನಡೆಸುತ್ತಿದ್ದು ಅಜೆಂಡಾವನ್ನು ರೂಪಿಸುತ್ತಿದೆ.
ಇಲ್ಲಿನ ಜನತಾ ಮೈದಾನದಲ್ಲಿರುವ ಸಂತ ಕವಿ ಭಿಮ್ ಬಾಯಿ ಸಭಾಗರ್ ನಲ್ಲಿ ಕಾರ್ಯಕಾರಿಣಿ ಸಭೆ ಪ್ರಾರಂಭವಾಗಿದೆ.
ಪಂಚರಾಜ್ಯ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಭಾರೀ ಗೆಲುವನ್ನು ಬಿಜೆಪಿ ಸಾಧಿಸಿರುವ ಹಿನ್ನೆಲೆಯಲ್ಲಿ ಮುಂಬರುವ ಲೋಕಸಸಭಾ ಚುನಾವಣೆಯಲ್ಲಿಯೂ ಸಹ ಇದೇ ರೀತಿ ಗೆಲುವು ಸಾಧಿಸಲು ಪೂರ್ವ ತಯಾರಿ ನಡೆಸಲು 2 ದಿನಗಳ ಕಾಲ ಕಾರ್ಯಕಾರಣಿ ಸಭೆ ಕರೆಯಲಾಗಿದೆ. ಸಭೆಯ ಅಧ್ಯಕ್ಷತೆ ವಹಿಸಿರುವ ಅಮಿತ್ ಶಾ, ಈ ಗೆಲುವು ಬಿಜೆಪಿಗೆ ಪ್ರಾರಂಭವಷ್ಟೇ, ಭವಿಷ್ಯದಲ್ಲಿಯೂ ಗೆಲುವಿಗಾಗಿ ಶ್ರಮಿಸಬೇಕು ಎಂದು ಪಕ್ಷದ ಮುಖಂಡರಿಗೆ ಹೇಳಿದ್ದಾರೆ.
ನಾವು 2014 ರ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದಾಗ ಬಿಜೆಪಿ ಗೆಲುವಿನ ಶಿಖರವನ್ನು ತಲುಪಿದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದರು. ನಾವು ವಿಧಾನಸಭೆ ಚುನಾವಣೆ ಗೆದ್ದಾಗಲು ಜನರು ಹಾಗೆ ಹೇಳುತ್ತಿದ್ದರು. ಆದರೆ ನಾವಿನ್ನೂ ಗುರಿಯನ್ನು ತಲುಪಿಲ್ಲ. ಪಂಚಾಯತ್'ನಿಂದ ಪಾರ್ಲಿಮೆಂಟ್'ವರೆಗೆ ಬಿಜೆಪಿ ಅಧಿಪತ್ಯ ಸಾಧಿಸಬೇಕು ಎಂದು ಶಾ ಹೇಳಿದ್ದಾರೆ. ಪಕ್ಷದ ಪದಾಧಿಕಾರಿಗಳು, ರಾಜ್ಯ ಬಿಜೆಪಿ ಘಟಕದ ಮುಖ್ಯಸ್ಥರು ಮುಂಬರುವ ಚುನಾವಣಾ ತಂತ್ರಗಾರಿಕೆ ಬಗ್ಗೆ ಚರ್ಚೆ ನಡೆಸಿದರು.
ಇವಿಎಂ ದೋಷದ ಬಗ್ಗೆ ಪ್ರತಿಪಕ್ಷಗಳು ಮಾಡಿರುವ ಆರೋಪವನ್ನು ತಳ್ಳಿ ಹಾಕಿದ ಅಮಿತ್ ಶಾ, ಉತ್ತರ ಪ್ರದೇಶದಲ್ಲಿ ಎಸ್ಪಿ, ಬಿಎಸ್ಪಿ ಹಾಗೂ ದೆಹಲಿಯಲ್ಲಿ ಆಪ್ ಅಧಿಕಾರಕ್ಕೆ ಬಂದಾಗ ಇದನ್ನು ವಿರೋಧಿಸಿರಲಿಲ್ಲ. ಎಟುಕದ ದ್ರಾಕ್ಷಿ ಹುಳಿ ಎನ್ನುವಂತೆ ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆದ್ದ ಬಳಿಕ ಈಗ ವಿರೋಧಿಸುತ್ತಿವೆ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ 13 ಮಂದಿ ಬಿಜೆಪಿ ಮುಖ್ಯಮಂತ್ರಿಗಳು, 45 ಮಂದಿ ಕೇಂದ್ರ ಸಚಿವರು ಸಭೆಯಲ್ಲಿ ಪಾಲ್ಗೊಂಡಿದ್ದಾರೆ.
ಅತ್ತ ಬಿಜೆಪಿ ಕಾರ್ಯಕಾರಣಿ ಸಭೆ ನಡೆಯುತ್ತಿದ್ದು ಮುಂದಿನ ಚುನಾವಣೆ ಗೆಲ್ಲಲು ಬಿಜೆಪಿ ನಾಯಕರು ರಣತಂತ್ರ ಹೆಣೆಯುತ್ತಿದ್ದರೆ ಇತ್ತ ಒಡಿಸ್ಸಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಇದರಿಂದ ನಾನೇನೂ ತಲೆಕೆಡಿಸಿಕೊಂಡಿಲ್ಲವೆಂದು ಹೇಳಿದ್ದಾರೆ. ಇದು ಒಡಿಸ್ಸಾ ಜನತೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ.
