ಪಾಟ್ನಾ[ಮಾ.28]: ಬಿಹಾರದ ನಕ್ಸಲ್ ಪೀಡಿತ ಪ್ರದೇಶ ಡೂಮರಿಯಾ ಠಾಣೆಯಲ್ಲಿ ಮಂಗಳವಾರ ರಾತ್ರಿ ನಕ್ಸಲರು ಸ್ಫೋಟಕವನ್ನೆಸೆದು ಮಾಜಿ ವಿಧಾನ ಪರಿಷತ್ ಸದಸ್ಯ ಅನುಜ್ ಕುಮಾರ್ ಸಿಂಗ್ ಮನೆಯನ್ನು ಧ್ವಂಸಗೊಳಿಸಿದ್ದಾರೆ. ನಕ್ಸಲರು ನಡೆಸಿದ ಈ ದಾಳಿಗೆ ಬಿಜೆಪಿ ನಾಯಕನ ಮನೆ ಸಂಪೂರ್ಣ ನಾಶವಾಗಿದೆ. ಮಧ್ಯರಾತ್ರಿ ನಡೆದ ಈ ಡೈನಮೇಟ್ ದಾಳಿಗೆ ಆಸುಪಾಸಿನ ಪ್ರದೇಶ ಕಂಪಿಸಿದೆ. 

ಲೋಕಸಭಾ ಚುನಾವಣೆ ಘೋಷಣೆಯಾದ ಬಳಿಕ ನಕ್ಸಲೀಯರು ಈ ದಾಳಿ ನಡೆಸಿ ಸರ್ಕಾರಕ್ಕೆ ಬಹಿರಂಗವಾಗಿ ಸವಾಲೊಡ್ಡಿದೆ. ಹೀಗಿರುವಾಗ ಶಾಂತಿಯುತ ಮತದಾನ ನಡೆಸುವುದು ಇಲ್ಲಿನ ಸರ್ಕಾರಕ್ಕೆ ಎದುರಾದ ಬಹುದೊಡ್ಡ ಸಮಸ್ಯೆಯಾಗಿದೆ. ನಕ್ಸಲರು ಕಳೆದ ಬಹಳಷ್ಟು ಸಮಯದಿಂದ ಮಾಜಿ MLC ಅನುಜ್ ಕುಮಾರ್ ಮೇಲೆ ಕಣ್ಣಿಟ್ಟಿದ್ದರು ಎನ್ನಲಾಗಿದೆ. ನಕ್ಸಲರು ನಡೆಸಿದ ಈ ದಾಳಿಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ.

ದಾಳಿಗೂ ಮುನ್ನ MLC ಅನುಜ್ ಕುಮಾರ್ ಮನೆಯಲ್ಲಿದ್ದ ಕುಟುಂಬ ಸದಸ್ಯರನ್ನು ಹೊರಗೆ ಎಳೆತಂದು ಭರ್ಜರಿಯಾಗಿ ಥಳಿಸಿದ್ದಾರೆ ಎನ್ನಲಾಗಿದೆ. ದಾಳಿ ಬಳಿಕ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಸುಮಾರು 50ಕ್ಕೂ ಅಧಿಕ ನಕ್ಸಲೀಯರು ಈ ದಾಳಿಯಲ್ಲಿ ಭಾಗಿಯಾಗಿದ್ದರೆನ್ನಲಾಗಿದೆ. ಪೊಲೀಸರಿಗೆ ಈ ದಾಳಿ ವಿಚಾರ ತಿಳಿಯುತ್ತಿದ್ದಂತೆಯೇ ನಾಯಕನ ಮನೆಗೆ ದೌಡಾಯಿಸಿ, ತನಿಖೆ ಆರಂಭಿಸಿದ್ದಾರೆ.