ನಕ್ಸಲ್‌ ನಂಟಿನ ವ್ಯಕ್ತಿಗಳ ಪತ್ರದಲ್ಲಿ ಕಾಂಗ್ರೆಸ್ಸಿಗನ ಮೊಬೈಲ್‌ ಸಂಖ್ಯೆ ಚಾಜ್‌ರ್‍ಶೀಟ್‌ಗೆ ಪತ್ರ ಲಗತ್ತಿಸಿದ ಪುಣೆ ಪೊಲೀಸರು 4 ವರ್ಷದಿಂದ ಆ ನಂಬರ್‌ ಬಳಸುತ್ತಿಲ್ಲ, ಬೇಕಿದ್ದರೆ ಬಂಧಿಸಿ: ದಿಗ್ವಿ

ಪುಣೆ[ನ.20]: ಮಾವೋವಾದಿ ನಕ್ಸಲರ ಜತೆ ನಂಟು ಹೊಂದಿದ ಆರೋಪ ಸಂಬಂಧ ಎಡಪಂಥೀಯ ವಿಚಾರಧಾರೆಯ 10 ಮಂದಿಯನ್ನು ಬಂಧಿಸಿದ್ದನ್ನು ತೀವ್ರವಾಗಿ ಆಕ್ಷೇಪಿಸಿದ್ದ ಕಾಂಗ್ರೆಸ್ಸಿಗೆ ಭಾರಿ ಮುಖಭಂಗವಾಗಿದೆ. ‘ನಗರ ನಕ್ಸಲ್‌’ ಎಂದೇ ಬಿಂಬಿತರಾಗಿರುವ ಆ ವ್ಯಕ್ತಿಗಳು ವಿಚಾರ ವಿನಿಮಯಕ್ಕೆ ಬಳಸಿದ್ದ ಪತ್ರವೊಂದರಲ್ಲಿ ಮೊಬೈಲ್‌ ದೂರವಾಣಿ ಸಂಖ್ಯೆಯೊಂದು ಪತ್ತೆಯಾಗಿದ್ದು, ಅದು ಕಾಂಗ್ರೆಸ್‌ನ ಪ್ರಭಾವಿ ನಾಯಕ ದಿಗ್ವಿಜಯ್‌ ಸಿಂಗ್‌ ಅವರಿಗೆ ಸೇರಿದ್ದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

10 ಮಂದಿ ಪೈಕಿ ಸುರೇಂದ್ರ ಗಾದ್ಲಿಂಗ್‌, ಶೋಮಾ ಸೇನ್‌, ಮಹೇಶ್‌ ರಾವತ್‌, ರೋನಾ ವಿಲ್ಸನ್‌ ಹಾಗೂ ಸುಧೀರ್‌ ಧಾವಳೆ ಎಂಬ ಐವರ ವಿರುದ್ಧ ಇತ್ತೀಚೆಗೆ ಪುಣೆ ಪೊಲೀಸರು ನ್ಯಾಯಾಲಯಕ್ಕೆ ಆರೋಪ ಪಟ್ಟಿಸಲ್ಲಿಸಿದ್ದು, ಅದರಲ್ಲಿ ದಿಗ್ವಿಜಯ್‌ ಅವರಿಗೆ ಸೇರಿದ್ದೆನ್ನಲಾದ ಮೊಬೈಲ್‌ ಸಂಖ್ಯೆವುಳ್ಳ ಪತ್ರವನ್ನೂ ಲಗತ್ತಿಸಿರುವುದು ರಾಜಕೀಯ ವಲಯದಲ್ಲಿ ಭಾರಿ ಸಂಚಲನಕ್ಕೆ ಕಾರಣವಾಗಿದೆ. ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಆ ರಾಜ್ಯಕ್ಕೆ ಸೇರಿದ ಹಿರಿಯ ಕಾಂಗ್ರೆಸ್ಸಿಗನ ವಿರುದ್ಧ ಇಂತಹ ಗಂಭೀರ ಆರೋಪ ಕೇಳಿಬಂದಿರುವುದರಿಂದ ಬಿಜೆಪಿಗೆ ಪ್ರಬಲ ಅಸ್ತ್ರವೊಂದು ದೊರೆತಂತಾಗಿದೆ.

ಆದರೆ ‘ನಗರ ನಕ್ಸಲ್‌’ರ ಜತೆ ನಂಟು ಹೊಂದಿರುವುದನ್ನು ದಿಗ್ವಿಜಯ್‌ ಸಿಂಗ್‌ ಸ್ಪಷ್ಟವಾಗಿ ಅಲ್ಲಗಳೆದಿದ್ದಾರೆ. ಚಾಜ್‌ರ್‍ಶೀಟ್‌ನಲ್ಲಿ ಉಲ್ಲೇಖವಾಗಿರುವ ಮೊಬೈಲ್‌ ದೂರವಾಣಿ ಸಂಖ್ಯೆ ಬಳಸುವುದನ್ನು ನಾಲ್ಕು ವರ್ಷಗಳ ಹಿಂದೆಯೇ ನಿಲ್ಲಿಸಿದ್ದೇನೆ. ಆ ಸಂಖ್ಯೆ ರಾಜ್ಯಸಭೆ ವೆಬ್‌ಸೈಟ್‌ನಲ್ಲೂ ಇದೆ. ಪ್ರತಿಯೊಬ್ಬರಿಗೂ ಅದನ್ನು ಗಳಿಸಲು ಸಾಧ್ಯವಿದೆ ಎಂದು ವಾದಿಸಿದ್ದಾರೆ. ಅಲ್ಲದೆ, ನನ್ನ ವಿರುದ್ಧ ಸಾಕ್ಷ್ಯ ಇದ್ದರೆ ಪತ್ತೆ ಮಾಡಲಿ, ಕಾನೂನು ಕ್ರಮ ಜರುಗಿಸಲಿ. ಈ ಸಂಬಂಧ ಪ್ರಧಾನಿ ಮೋದಿ, ಗೃಹ ಸಚಿವ ರಾಜನಾಥ ಸಿಂಗ್‌, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಹಾಗೂ ಮಹಾರಾಷ್ಟ್ರ ಪೊಲೀಸರಿಗೆ ಸವಾಲು ಹಾಕುತ್ತೇನೆ. ಬಿಜೆಪಿಯವರು ನನ್ನನ್ನು ನಕ್ಸಲೈಟ್‌ ಎಂದು ಆರೋಪಿಸುತ್ತಾರೆ. ಸರ್ಕಾರ ಏಕೆ ನನ್ನನ್ನು ಬಂಧಿಸಬಾರದು ಎಂದು ಕೇಳಿದ್ದಾರೆ.

ಪತ್ರದಲ್ಲಿ ಏನಿದೆ?:

ಭೀಮಾ- ಕೋರೆಗಾಂವ್‌ ಹಿಂಸಾಚಾರದ ಬಳಿಕ ವಿವಿಧೆಡೆ ದಾಳಿ ನಡೆಸಿದ್ದ ಪುಣೆಯ ಪೊಲೀಸರು ಆ ಸಂದರ್ಭದಲ್ಲಿ ಕೆಲವೊಂದು ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡಿದ್ದರು. ನಂತರ ನಕ್ಸಲರ ಜತೆ ನಂಟು ಹೊಂದಿದ ಆರೋಪದ ಮೇರೆಗೆ 10 ಮಂದಿಯನ್ನು ಬಂಧಿಸಿದ್ದರು. ವಶಕ್ಕೆ ಪಡೆದುಕೊಂಡಿದ್ದ ದಾಖಲೆಗಳಲ್ಲಿ ಒಂದು ಪತ್ರವೂ ಇತ್ತು. 2017ರ ಸೆ.25ರಂದು ಬರೆಯಲಾಗಿದ್ದ ಪತ್ರ ಇದಾಗಿದ್ದು, ಸುರೇಂದ್ರ (‘ಸುರೇಂದ್ರ ಗಾದ್ಲಿಂಗ್‌’ ಎಂದು ಪೊಲೀಸರು ಹೇಳುತ್ತಿದ್ದಾರೆ) ಅವರಿಗೆ ಕಾಮ್ರೇಡ್‌ ಪ್ರಕಾಶ್‌ ಎಂಬುವರು ಬರೆದಿದ್ದರು. ಅದರ ಒಂದು ಭಾಗದಲ್ಲಿ ಹೀಗೆ ಬರೆಯಲಾಗಿತ್ತು:

‘ವಿದ್ಯಾರ್ಥಿಗಳನ್ನು ಬಳಸಿಕೊಂಡು ನಾವು ರಾಷ್ಟ್ರವ್ಯಾಪಿ ಪ್ರತಿಭಟನೆಗಳನ್ನು ತೀವ್ರಗೊಳಿಸಬೇಕು. ವಿದ್ಯಾರ್ಥಿಗಳ ಬಗ್ಗೆ ರಾಜ್ಯ ಪೊಲೀಸರಿಗೆ ಮೃದು ಭಾವನೆ ಇರುತ್ತದೆ. ಅದು ಭವಿಷ್ಯದಲ್ಲಿ ನಮ್ಮ ವಿರುದ್ಧ ಪೊಲೀಸರ ಕೈ ಕಟ್ಟಿಹಾಕಿದಂತಾಗುತ್ತದೆ. ಕಾಂಗ್ರೆಸ್‌ ನಾಯಕರು ಈ ಕೆಲಸದಲ್ಲಿ ನೆರವಾಗಲು ಅತೀವ ಆಸಕ್ತಿ ವ್ಯಕ್ತಪಡಿಸಿದ್ದಾರೆ. ಮತ್ತಷ್ಟುಹೋರಾಟಗಳಿಗೆ ಹಣಕಾಸು ನೆರವು ನೀಡಲೂ ಒಪ್ಪಿದ್ದಾರೆ. ಈ ಸಂಬಂಧ ನಮ್ಮ ಸ್ನೇಹಿತರನ್ನು ಸಂಪರ್ಕಿಸಬಹುದು’ ಎಂದು ಮೊಬೈಲ್‌ ಸಂಖ್ಯೆ ನೀಡಲಾಗಿತ್ತು. ಪತ್ರದಲ್ಲಿ ಉಲ್ಲೇಖಗೊಂಡಿರುವ ಮೊಬೈಲ್‌ ದೂರವಾಣಿ ಸಂಖ್ಯೆ ಕಾಂಗ್ರೆಸ್ಸಿಗ ದಿಗ್ವಿಜಯ ಸಿಂಗ್‌ ಅವರದ್ದು ಎಂಬುದು ಪೊಲೀಸರ ವಾದ. ಅಲ್ಲದೆ ಇದೇ ಸಂಖ್ಯೆ ಕಾಂಗ್ರೆಸ್‌ ಪಕ್ಷದ ವೆಬ್‌ಸೈಟ್‌ನಲ್ಲೂ ಲಭ್ಯವಿದೆ ಎಂದು ಹೇಳಿದ್ದಾರೆ.