ಚಂಢೀಗಡ(ಜೂ.08): ಲೋಕಸಭೆ ಚುನಾವಣೆ ವೇಳೆ ಬಿಜೆಪಿ ಮತ್ತು ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದು, ನವಜೋತ್ ಸಿಂಗ್ ಸಿಧು ತಮ್ಮನ್ನು ನೈಜ ಕಾಂಗ್ರೆಸ್ಸಿಗ ಎಂದು ಬಿಂಬಿಸಿಕೊಳ್ಳಲು ಯತ್ನಿಸಿದ್ದರು.

ಆದರೆ ಚುನಾವಣೆ ಮುಗಿದು ಕಾಂಗ್ರೆಸ್ ಹಣೆಬರಹ ಗೊತ್ತಾದ ಮೇಲೆ, ಸಿಧು ಮೆಲ್ಲಗೆ ಅಸಮಾಧಾನದ ಹೊಸ ನಾಟಕ ಶುರು ಮಾಡಿದಂತಿದೆ. 

ಪಂಜಾಬ್ ಸಿಎಂ ಕ್ಯಾ. ಅಮರೀಂದರ್ ಸಿಂಗ್ ಹಾಗೂ ಸಿಧು ನಡುವಿನ ಮುಸುಕಿನ ಗುದ್ದಾಟ ಇದೀಗ ನವದೆಹಲಿ ತಲುಪಿದೆ. ತಮ್ಮ ಖಾತೆ ಕಿತ್ತುಕೊಂಡು ಮತ್ತೊಂದು ಖಾತೆ ನೀಡಿರುವ ಸಿಎಂ ನಡೆಯನ್ನು ಸಿಧು ಖಂಡಿಸಿದ್ದಾರೆ.

ಇತ್ತೀಚಿಗೆ ನಡೆದ ಸಂಟುಪ ಪುನರ್ ರಚನೆ ಸಂದರ್ಭದಲ್ಲಿ ಸಿಧು ಅವರಿಗೆ ಸ್ಥಳೀಯ ಸರ್ಕಾರ ಇಲಾಖೆ ಖಾತೆ ಬದಲಿಗೆ ಇಂಧನ ಖಾತೆ ನೀಡಲಾಗಿದೆ. ಆದರೆ ಈ  ಹೊಸ ಖಾತೆಯ ಹೊಣೆ ವಹಿಸಿಕೊಳ್ಳಲು ಅವರು ನಿರಾಕರಿಸಿದ್ದಾರೆ. 

ಅಲ್ಲದೇ ಸಿಎಂ ಅಮರೀಂದರ್ ಸಿಂಗ್ ನಡುವಿನ ಮುಸುಕಿನ ಗುದ್ದಾಟದ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿ ಮಾಡಲು  ಸಿಧು ದೆಹಲಿಗೆ ದೌಡಾಯಿಸಿದ್ದಾರೆ.

ಒಂದು ವೇಳೆ ಮರಳಿ ಅಧಿಕಾರವನ್ನು ಕೊಡಿಸುವಲ್ಲಿ ಪಕ್ಷದ ನಾಯಕರು ವಿಫಲರಾದರೆ ಸಂಪುಟದಿಂದ ಹೊರಗೆ ಉಳಿಯಲು ಸಿಧು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

ತಮ್ಮನ್ನು ಹಗುರವಾಗಿ ಪರಿಗಣಿಸದಂತೆ ಎಚ್ಚರಿಕೆ ನೀಡಿರುವ ಸಿಧು, ಅವಶ್ಯಕತೆ ಬಿದ್ದರೆ ಸರ್ಕಾರದಿಂದ ಹೊರನಡೆಯುವುದಾಗಿ ಸ್ಪಷ್ಟಪಡಿಸಿದ್ದಾರೆ.