ಪಂಜಾಬ್‌ನಲ್ಲಿ ಗರಿಗೆದರಿದ ರಾಜಕೀಯ ಬೆಳವಣಿಗೆಗಳು| ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಿಧು| ರಾಜೀನಾಮೆ ವಿಚಾರವನ್ನು ಟ್ವೀಟ್ ಮಾಡಿ ಬಹಿರಂಗಪಡಿಸಿದ ಸಚಿವ ಸಿಧು

ಚಂಡೀಗಢ[ಜು.14]: ರಾಜ್ಯ ರಾಜಕೀಯದಲ್ಲಿ ಶಾಸಕರ ರಾಜೀನಾಮೆಯಿಂದ ಕಳೆದೆರಡು ವಾರದಿಂದ ಹೈಡ್ರಾಮಾವೇ ನಡೆಯುತ್ತಿದೆ. ಒಂದೆಡೆ ಅತೃಪ್ತ ಶಾಸಕರು ಮುಂಬೈ ಹೋಟೆಲ್‌ನಲ್ಲಿ ಬೀಡು ಬಿಟ್ಟಿದ್ದು, ಯಾರ ಮಾತನ್ನೂ ಕಿವಿಗೆ ಹಾಕಿಕೊಳ್ಳುತ್ತಿಲ್ಲ. ದೋಸ್ತಿ ಸರ್ಕಾರ ಪತನವಾಗುವ ಲಕ್ಷಣಗಳು ಎದ್ದು ಕಾಣುತ್ತಿವೆ. ಇದು ರಾಜ್ಯ ಮಾತ್ರವಲ್ಲದೇ ಕೈ ಪಾಳಯದ ರಾಷ್ಟ್ರೀಯ ನಾಯಕರಿಗೂ ಬಹುದೊಡ್ಡ ತಲೆನೋವಾಗಿ ಪರಿಣಮಿಸಿದೆ. ಹೀಗಿರುವಾಗ ಪಂಜಾಬ್‌ನಲ್ಲೂ ನವಜ್ಯೋತ್ ಸಿಂಗ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ತಮ್ಮ ಅಸಮಾಧಾನವನ್ನು ಬಹಿರಂಗಪಡಿಸಿದ್ದಾರೆ. 

ತಾವು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ವಿಚಾರವನ್ನು ಟ್ವೀಟ್ ಮಾಡುವ ಮೂಲಕ ನವಜ್ಯೋತ್ ಸಿಂಗ್ ಸಿಧು ಬಹಿರಂಗಪಡಿಸಿದ್ದಾರೆ. ಜೂನ್ 10ರಂದು ರಾಹುಲ್ ಗಾಂಧಿ ತಾವು ಸಲ್ಲಿಸಿರುವ ಪತ್ರವನ್ನು ಶೇರ್ ಮಾಡಿಕೊಂಡಿದ್ದಾರೆ. 

Scroll to load tweet…

ವಾಸ್ತವವಾಗಿ ನವಜ್ಯೋತ್ ಸಿಂಗ್ ಸಿಧು ಪಂಜಾಬ್ ಸರ್ಕಾರಕ್ಕೂ ಬಹುದೊಡ್ಡ ತಲೆನೋವಾಗಿ ಪರಿಣಮಿಸಿದ್ದರು. ಪಂಜಾಬ್‌ನ ಬಿಜೆಪಿ ನಾಯಕ ತರುಣ್ ಚುಗ್ ರಾಜ್ಯಪಾಲರಿಗೆ ಪತ್ರವೊಂದನ್ನು ಬರೆದು 'ಸಿಧು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಆದರೆ ಈವರೆಗೂ ಅವರು ತಮ್ಮ ಕೆಲಸ ಆರಂಭಿಸಿಲ್ಲ. ಸಚಿವರಾಗಿ ವೇತನ ಹಾಗೂ ಭತ್ಯೆ ಸ್ವೀಕರಿಸಿ ಮಜಾ ಮಾಡುತ್ತಿದ್ದಾರೆ. ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಹಾಗೂ ಸಿಧು ನಡುವಿನ ವಾಗ್ವಾದ ಸಮಸ್ಯೆಗಳನ್ನು ತಂದೊಡ್ಡಿವೆ' ಎಂದು ದೂರಿದ್ದರು. ಈ ಮೂಲಕ ಪಂಜಾಬ್ ಹಿತಾಸಕ್ತಿ ಕಾಪಾಡುವ ನಿರ್ಧಾರ ಕೈಗೊಳ್ಳುವಂತೆ ಮನವಿ ಮಾಡಿದ್ದರು. 

ಇತ್ತೀಚೆಗಷ್ಟೇ ಪಂಜಾಬ್ ಸಚಿವ ನವಜ್ಯೋತ್ ಸಿಂಗ್ ಸಿಧುಗೆ ವಹಿಸಲಾಗಿದ್ದ ನಗರಾಭಿವೃದ್ಧಿ ಇಲಾಖೆ, ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಇಲಾಖೆಯನ್ನು ಮರಳಿ ಪಡೆಯಲಾಗಿತ್ತು ಹಾಗೂ ನವೀಕರಿಸಬಹುದಾದ ಇಂಧನ ಮೂಲಗಳ ಸಚಿವಾಲಯವನ್ನು ವಹಿಸಲಾಗಿತ್ತು. ಇದಾದ ಬಳಿಕ ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಹಾಗೂ ನವಜ್ಯೋತ್ ಸಿಂಗ್ ನಡುವೆ ಕಂದಕವೇರ್ಪಟ್ಟಿತ್ತು.