ಚಂಡೀಗಢ[ಡಿ.07]: ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್‌ ಪಕ್ಷದ ಪರವಾಗಿ 17 ದಿನ 70 ಸಾರ್ವಜನಿಕ ಸಭೆಗಳಲ್ಲಿ ಭರ್ಜರಿ ಭಾಷಣ ಮಾಡಿದ್ದ ‘ಸಿಕ್ಸರ್‌’ ಸಿಧು ಖ್ಯಾತಿಯ ಮಾಜಿ ಕ್ರಿಕೆಟಿಗ ಹಾಗೂ ಪಂಜಾಬ್‌ನ ಹಾಲಿ ಸಚಿವ ನವಜೋತ್‌ ಸಿಂಗ್‌ ಸಿಧು ಅವರ ಧ್ವನಿಪೆಟ್ಟಿಗೆಗೆ ಗಾಯವಾಗಿದೆ. ಸಿಧು ಅವರು ಮಾತು ಕಳೆದುಕೊಳ್ಳುವ ಅಪಾಯ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ವೈದ್ಯರು 3 ರಿಂದ 5 ದಿನಗಳ ಕಾಲ ವಿಶ್ರಾಂತಿಗೆ ಸೂಚಿಸಿದ್ದಾರೆ. ಇದರ ಬೆನ್ನಲ್ಲೇ ಸಿಧು ಅವರು ಸಂಪೂರ್ಣ ಆರೋಗ್ಯ ಪರೀಕ್ಷೆ ಮಾಡಿಸಿಕೊಂಡು ಚೇತರಿಸಿಕೊಳ್ಳಲು ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ.

ರಾಜಸ್ಥಾನ, ಛತ್ತೀಸ್‌ಗಢ, ಮಧ್ಯಪ್ರದೇಶ ಹಾಗೂ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಸಿಧು ಸ್ಟಾರ್‌ ಪ್ರಚಾರಕರಾಗಿದ್ದರು. ಮಾತುಗಾರಿಕೆಯಿಂದಲೂ ಪ್ರಸಿದ್ಧರಾಗಿರುವ ಸಿಧು ಅವರನ್ನು ಕಾಂಗ್ರೆಸ್‌ ಈ ವಿಧಾನಸಭೆ ಚುನಾವಣೆಗಳಲ್ಲಿ ಪರಿಪೂರ್ಣವಾಗಿ ಬಳಸಿಕೊಂಡಿತ್ತು. ಆದರೆ 17 ದಿನ ಪ್ರಚಾರ ಮುಗಿಯುವಷ್ಟರಲ್ಲಿ ಸಿಧು ಅವರ ಧ್ವನಿ ಪೆಟ್ಟಿಗೆಗೆ ಗಾಯವಾಗಿದೆ. ಹೀಗಾಗಿ 55 ವರ್ಷದ ಸಿಧು ಅವರು ಚಿಕಿತ್ಸೆಗೆ ತೆರಳಿದ್ದಾರೆ ಎಂದು ಪಂಜಾಬ್‌ ಸರ್ಕಾರದ ಪ್ರಕಟಣೆ ತಿಳಿಸಿದೆ.

ಪೌರಾಡಳಿತ, ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ವ್ಯವಹಾರಗಳ ಸಚಿವರಾಗಿರುವ ಸಿಧು ಅವರು ಇತ್ತೀಚೆಗೆ ಪಾಕಿಸ್ತಾನಕ್ಕೆ ಭೇಟಿ ನೀಡುವ ಮೂಲಕ ವಿವಾದಕ್ಕೀಡಾಗಿದ್ದರು.