Asianet Suvarna News Asianet Suvarna News

ಆ 125 ಸೀಟಿನ ಮೇಲೆ ಮೋದಿ ಕಣ್ಣು!

ಪ್ರಧಾನಿ ಮೋದಿ ದೇಶಾದ್ಯಂತ ನೂರಕ್ಕೂ ಹೆಚ್ಚು ಸಮಾವೇಶಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಇವುಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಪಶ್ಚಿಮ ಬಂಗಾಳ, ಕೇರಳ, ತೆಲಂಗಾಣ, ಆಂಧ್ರಪ್ರದೇಶ, ಒಡಿಶಾ ಮತ್ತು ಈಶಾನ್ಯ ರಾಜ್ಯಗಳಿಗೇ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಕಾರಣ ಏನು?

Narendra Modi is trying to win those 125 seats where BJP lost earlier
Author
New Delhi, First Published Jan 25, 2019, 12:07 PM IST

ದಿನ ದಿನಕ್ಕೂ ಕುತೂಹಲ ಮೂಡಿಸುತ್ತಿರುವ ಲೋಕಸಭಾ ಚುನಾವಣೆ ಇನ್ನೇನು ಸಮೀಪದಲ್ಲಿದೆ. ಈ ಚುನಾವಣೆ ಬೇರೆಲ್ಲಾ ಚುನಾವಣೆಗಿಂತ ವಿಭಿನ್ನವಾಗಿಯೂ 2014ರ ಚುನಾವಣೆಗಿಂತ ಬಿರುಸಾಗಿಯೂ ಇರಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯ ಎಲ್ಲಾ ನಾಯಕರು, ಅಮಿತ್‌ ಶಾ ಕೂಡ ಈ ಗುಟ್ಟನ್ನು ಅರ್ಥಮಾಡಿಕೊಂಡಿದ್ದಾರೆ. ಅದೇ ಕಾರಣಕ್ಕೆ ತಂತ್ರ ಪ್ರತಿತಂತ್ರಗಳನ್ನು ಹೆಣೆಯುತ್ತಿದ್ದಾರೆ.

ಮೋದಿ ಸಮಾವೇಶ ಹಿಂದಿನ ಗುಟ್ಟು!

ಸದ್ಯದ ತಂತ್ರದಂತೆ ಪ್ರಧಾನಿ ನರೇಂದ್ರ ಮೋದಿ ದೇಶಾದ್ಯಂತ ನೂರಕ್ಕೂ ಹೆಚ್ಚು ಸಮಾವೇಶಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸಮಾವೇಶಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಪಶ್ಚಿಮ ಬಂಗಾಳ, ಕೇರಳ, ತೆಲಂಗಾಣ, ಆಂಧ್ರಪ್ರದೇಶ, ಒಡಿಶಾ ಮತ್ತು ಈಶಾನ್ಯ ರಾಜ್ಯಗಳಿಗೇ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಕಾರಣ ಏನು? ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಉತ್ತರ ಮತ್ತು ಪಶ್ಚಿಮದ ಬಹುತೇಕ ರಾಜ್ಯಗಳಲ್ಲಿ ಜಯಭೇರಿ ಬಾರಿಸಿತ್ತು. ದಕ್ಷಿಣದಲ್ಲಿ ಕರ್ನಾಟಕ, ಆಂಧ್ರಪ್ರದೇಶದಲ್ಲಿ ತೆಲುಗು ದೇಶಂನೊಂದಿಗೆ ಮೈತ್ರಿ ಸಾಧಿಸಿ ಕ್ರಮವಾಗಿ 17 ಮತ್ತು 19 ಸೀಟು ಪಡೆದಿತ್ತು. ತಮಿಳುನಾಡಿನಲ್ಲಿ ಬಿಜೆಪಿ ಒಂದೇ ಒಂದು ಸೀಟು ಪಡೆದಿದ್ದರೆ, ಕೇರಳದಲ್ಲಿ ಒಂದೂ ಪಡೆದಿರಲಿಲ್ಲ. ಆ ಸಮಯದಲ್ಲಿ ಬಿಜೆಪಿಯು ತಮಿಳುನಾಡಲ್ಲಿ ಎಐಎಡಿಎಂಕೆಗೆ ಬೆಂಬಲ ಸೂಚಿಸಿತು. ಸೂಪರ್‌ಸ್ಟಾರ್‌ ರಜನಿಕಾಂತ ಕಾಂತ್‌ ಕೂಡ ಬೆಂಬಲ ಸೂಚಿಸುವ ಸಂಕೇತ ನೀಡಿದ್ದರು.

ಇನ್ನು ಕೇರಳದೆಡೆಗೆ ನೋಡುವುದಾದರೆ, ಅಲ್ಲಿ ಸಿಪಿಎಂ ಮತ್ತು ಆರ್‌ಎಸ್‌ಎಸ್‌ ಕಾರ್ಯಕರ್ತರು ಅಕ್ಷರಶಃ ಬೀದಿಯಲ್ಲೇ ಕಚ್ಚಾಡುತ್ತಾರೆ. ಆದಾಗ್ಯೂ ಬಿಜೆಪಿ ತನ್ನ ಅಧಿಪತ್ಯ ಸಾಧಿಸುವಲ್ಲಿ ವಿಫಲವಾಗಿದೆ. ಆದರೆ ನರೇಂದ್ರ ಮೋದಿ ಕೇರಳದಲ್ಲಿ ಸಾಂಸ್ಕೃತಿಕ ಸಮಾವೇಶ ನಡೆಸುವ ಯೋಚನೆಯಲ್ಲಿದ್ದಾರೆ. ಈ ಮೂಲಕ ಕೇಸರಿ ಪಡೆ ದೇವರನಾಡು ಕೇರಳದಲ್ಲಿ ಬಲವಾಗಿ ಬೇರೂರುವ ಮೊದಲ ಪ್ರಯತ್ನದಲ್ಲಿದೆ ಎಂಬುದು ಸ್ಪಷ್ಟ. ಇಲ್ಲಿಯವರೆಗೆ ಕಾಂಗ್ರೆಸ್‌ ಮತ್ತು ಸಿಪಿಎಂ ಕೇರಳದಲ್ಲಿ ಗದ್ದುಗೆ ಏರಿ ಕುಳಿತಿದ್ದವು. ಈ ಎರಡು ಸಾಂಪ್ರದಾಯಿಕ ಸ್ಪರ್ಧಿಗಳನ್ನು ಸೋಲಿಸಲು ಬಿಜೆಪಿ ರಣತಂತ್ರ ಹಣೆಯುತ್ತದೆ.

ಮೂವರ ಜಗಳದಲ್ಲಿ ಬಿಜೆಪಿಗೆ ಲಾಭ?

ಇನ್ನು ಪಶ್ಚಿಮ ಬಂಗಾಳದಲ್ಲೂ ಬಹುತೇಕ ಇದೇ ಪರಿಸ್ಥಿತಿ ಇದೆ. ಅಲ್ಲಿ ಮಮತಾ ಬ್ಯಾನರ್ಜಿ ಹಾಗೂ ಎಡರಂಗದ ಸರ್ಕಾರಗಳೇ 30ಕ್ಕೂ ಹೆಚ್ಚು ವರ್ಷಗಳಿಂದ ಅಧಿಕಾರದಲ್ಲಿವೆ. ಮತ್ತೊಮ್ಮೆ ಅಧಿಕಾರಕ್ಕೆ ಬರುವ ಪ್ರಯತ್ನದಲ್ಲೂ ಅವರೇ ಇದ್ದಾರೆ. ಆದರೆ ಸರ್ಕಾರದ ಕಾರ್ಯರೂಪವನ್ನು ಅವರು ಎಂದೂ ಬದಲಿಸಿಲ್ಲ. ಅಲ್ಲಿ ಕಾಂಗ್ರೆಸ್‌, ಎಡ ಮತ್ತು ತೃಣಮೂಲ ಕಾಂಗ್ರೆಸ್‌ ನಡುವೆಯೇ ತ್ರಿಕೋಣ ಕಲಹವಿದೆ. ಆ ಜಗಳದಲ್ಲಿ ಬಿಜೆಪಿ ತಾನು ಮತದಾರರ ಮನವೊಲಿಸಬಹುದು ಎಂಬ ಉತ್ಸಾಹದಲ್ಲಿದೆ. ಅಮಿತ್‌ ಶಾ ಸತತವಾಗಿ ಈ ಕಾರ್ಯ ಮಾಡುತ್ತಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ರಥಯಾತ್ರೆ ನಡೆಸುವ ಉದ್ದೇಶಕ್ಕೆ ಕೋರ್ಟ್‌ ಅವಕಾಶ ನೀಡುತ್ತಿಲ್ಲ.

ಇತ್ತ ಒಡಿಶಾ ಮೇಲೂ ಮೋದಿ ಮತ್ತು ಶಾ ಕಣ್ಣಿಟ್ಟಿದ್ದಾರೆ. ನವೀನ್‌ ಪಟ್ನಾಯಕ್‌ ಅಲ್ಲಿನ ಜನಪ್ರಿಯ ನಾಯಕ ಮತ್ತು ಕಳೆದ 15 ವರ್ಷದಿಂದ ಅಧಿಕಾರದಲ್ಲಿದ್ದಾರೆ. ಪಕ್ಕದ ರಾಜ್ಯಗಳಾಗಿರುವ ಮಧ್ಯಪ್ರದೇಶದಲ್ಲಿ ಶಿವರಾಜ್‌ ಸಿಂಗ್‌ ಚೌಹಾಣ್‌ ಮತ್ತು ಛತ್ತೀಸ್‌ಗಢದಲ್ಲಿ ರಮಣ್‌ ಸಿಂಗ್‌ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಪರಾಭವಗೊಂಡಿದ್ದಾರೆ. ಅದರಾಚೆಗೂ ಅವರು ರಾಜ್ಯದ ಜನಪ್ರಿಯ ನಾಯಕರು. ಹಾಗಾಗಿ ಸಹಜವಾಗಿಯೇ ಒಡಿಶಾದಲ್ಲಿ ಬಿಜೆಪಿಯ ನಿರೀಕ್ಷೆ ಹೆಚ್ಚಿದೆ. ಆ ರಾಜ್ಯದಲ್ಲಿ ಕಾಂಗ್ರೆಸ್‌ ಪ್ರಮುಖ ವಿರೋಧ ಪಕ್ಷ. ಆದರೆ 24 ದಿನಗಳಲ್ಲಿ 4 ಬಾರಿ ಭೇಟಿ ನೀಡಿರುವ ಮೋದಿ ಸಾಧ್ಯವಾದಷ್ಟುಶ್ರಮಪಟ್ಟರೆ ಇತಿಹಾಸ ಸೃಷ್ಟಿಸಲು ಸಾಧ್ಯವಿದೆ ಎಂದು ಮನಗಂಡಿದ್ದಾರೆ. ಇದುವರೆಗೂ ಬಿಜೆಪಿ ಗೆಲ್ಲಲು ಸಾಧ್ಯವಾಗದ ರಾಜ್ಯಗಳಲ್ಲಿನ 125 ಸೀಟು ಗಳಿಸಲು ಬಿಜೆಪಿ ಹರಸಾಹಸಪಡುತ್ತಿದೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬರಬೇಕೆಂದರೆ ಈ ಪ್ರಯತ್ನ ಮಾಡಲೇಬೇಕಾದ ಅನಿವಾರ್ಯತೆಯೂ ಇದೆ.

ಮೋದಿ ಭಾಷಣ ಮೋಡಿ ಮಾಡುತ್ತಾ?

ಈವರೆಗೂ ಚರ್ಚಿಸಿದ್ದು ಸಾರ್ವಜನಿಕರ ಕಣ್ಣಿಗೆ ಕಾಣದ ರಣತಂತ್ರದ ಬಗ್ಗೆ. ಇನ್ನು ಪ್ರಧಾನಿಯ ಭಾಷಣಗಳನ್ನು ನೋಡುವುದಾದರೆ, ಮೋದಿ ಎಲ್ಲೆಲ್ಲಿ ಹೋಗಿದ್ದಾರೋ ಅಲ್ಲೆಲ್ಲಾ ತಮ್ಮ ಸರ್ಕಾರದ ಸಾಧನೆಗಳನ್ನು ಹೇಳಿ ಪಕ್ಷಕ್ಕೆ ಬಲ ತುಂಬಲು ಯತ್ನಿಸಿದ್ದಾರೆ. ಉದಾಹರಣೆಗೆ ಪಂಜಾಬ್‌ನಲ್ಲಿ ಕೇವಲ ಕರ್ತಾರ್‌ಪುರ ಕಾರಿಡಾರ್‌ ಬಗ್ಗೆ ಮಾತ್ರ ಮಾತನಾಡದೆ, ಕೇಂದ್ರ ಸರ್ಕಾರವು ರಾಜ್ಯದ ಮಹಿಳೆಯರ ಸುರಕ್ಷತೆಗೆ ಕೈಗೊಂಡ ಕಾರ್ಯಗಳ ಬಗ್ಗೆ, ನಿರುದ್ಯೋಗ ಮತ್ತು ಹಿರಿಯ ನಾಗರಿಕರಿಗಾಗಿ ಕೈಗೊಂಡ ಕಾರ್ಯಗಳ ಬಗ್ಗೆಯೂ ವಿವರಿಸಿದ್ದಾರೆ. ಅದಾದ ಒಂದು ವಾರದ ಬಳಿಕ ಕೇರಳದ ರಾರ‍ಯಲಿಯಲ್ಲಿ ಕೇವಲ ಧಾರ್ಮಿಕ ವಿಷಯಗಳ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದ್ದು ಮಾತ್ರವಲ್ಲದೆ, ಕೇಂದ್ರ ಕೈಗೊಂಡ ಅಭಿವೃದ್ಧಿ ಯೋಜನೆಗಳೇನೇನು ಎಂದೂ ವಿವರಿಸಿದ್ದರು. ವಿಕಾಸ ಪುರುಷ ಎಂದು ಬಿಂಬಿಸಿಕೊಳ್ಳುವ ಎಲ್ಲಾ ಪ್ರಯತ್ನವನ್ನೂ ಮಾಡುತ್ತಿದ್ದಾರೆ. ರಾಜಕಾರಣವನ್ನು ಧನಾತ್ಮಕ ದಿಕ್ಕಿನಲ್ಲಿ ತೆಗೆದುಕೊಂಡು ಹೋಗುವ ಪ್ರಯತ್ನವೇ ಇದು?

ಮೈಂಡ್‌ ಡೈವರ್ಟ್‌ ರಣತಂತ್ರ

ಪವಾಡಗಳು ಜಾಸ್ತಿ ದಿನ ನಡೆಯಲ್ಲ ಎಂಬುದು ಮೋದಿ ಶಾ ಇಬ್ಬರಿಗೂ ತಿಳಿದಿದೆ. ದೇಶದ ಮತದಾರರ ಬೆಂಬಲವನ್ನು ಪಡೆಯಲು ವಿನೂತನವಾದದ್ದನ್ನು ಮಾಡುವ ಅನಿವಾರ್ಯತೆ ಇದೆ. ಇದೇ ಕಾರಣದಿಂದಾಗಿ ಉಜ್ವಲ ಯೋಜನೆ ಯಶಸ್ವಿಯಾದ ಬಳಿಕ ಆರೋಗ್ಯ ವಿಮೆಯಂತಹ ಕಲ್ಯಾಣ ಯೋಜನೆಗಳನ್ನು ಜಾರಿ ಮಾಡಿದ್ದಾರೆ. ಅದರ ಮುಂದಿನ ಹೆಜ್ಜೆಯೇ ಆರ್ಥಿಕವಾಗಿ ದುರ್ಬಲರಾಗಿರುವ ಮೇಲ್ವರ್ಗಕ್ಕೂ ಮೀಸಲಾತಿ ನೀಡುವ ಐತಿಹಾಸಿಕ ನಿರ್ಧಾರ. ಇದು ಇಲ್ಲಿಗೇ ನಿಂತಿಲ್ಲ. ಬಹುಶಃ ಚುನಾವಣೆ ಬರುವುದರೊಳಗೆ ಇಂತಹ ಹಲವು ಘೋಷಣೆಗಳಾಗಬಹುದು. ರಾಜಕಾರಣದಲ್ಲಿ ತಂತ್ರಗಾರಿಕೆ ಬಹುಮುಖ್ಯ. ಹಾಗಾಗಿ ಪ್ರತಿಸ್ಪರ್ಧಿಗಳ ಗಮನವನ್ನು ಬೇರೆಡೆ ಸೆಳೆಯುವ ಕಾರ್ಯವೂ ಪ್ರಗತಿಯಲ್ಲಿದೆ. ನೀವಿದನ್ನು ನಂಬದಿದ್ದರೆ ಕರ್ನಾಟಕದಲ್ಲಿ ಏನಾಗುತ್ತಿದೆ ಎಂದು ಒಮ್ಮೆ ಕಣ್ಣುಹಾಯಿಸಿ. ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮೈತ್ರಿ ಸರ್ಕಾರದಲ್ಲಿ ಅನಿರೀಕ್ಷಿತ ಬೆಳವಣಿಗೆಗಳು ನಡೆಯುತ್ತಿದ್ದು, ಸಮ್ಮಿಶ್ರ ಸರ್ಕಾರ ಅದರ ಬಗ್ಗೆ ತಲೆಕೆಡಿಸಿಕೊಂಡಿದೆ. ಮಧ್ಯಪ್ರದೇಶದಲ್ಲೂ ಅಂಥದ್ದೇ ವಾತಾವರಣ ನಿರ್ಮಾಣವಾದರೆ ಅಚ್ಚರಿಪಡಬೇಕಿಲ್ಲ.

ಮೋದಿ ಮತ್ತು ಶಾ ರಾಜಕೀಯ ಚದುರಂಗದಾಟದಲ್ಲಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ಆದರೆ ಮತದಾರರ ಒಲುವು ಯಾರೆಡೆಗಿದೆ ಎಂದು ತಿಳಿದುಕೊಳ್ಳಲು ಕೆಲ ತಿಂಗಳು ಕಾಯಲೇಬೇಕು.

-ಶಶಿ ಶೇಖರ್‌, ಹಿರಿಯ ಪತ್ರಕರ್ತ

Follow Us:
Download App:
  • android
  • ios