ನವದೆಹಲಿ: ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಾಗಲೇ ಕೇಂದ್ರ ಸರ್ಕಾರ ಹಲವು ವಸ್ತುಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರಗಳನ್ನು ಕಡಿತಗೊಳಿಸಿದೆ. ಇದರಿಂದಾಗಿ 32 ಇಂಚಿನವರೆಗಿನ ಟೀವಿ, ಕಂಪ್ಯೂಟರ್‌ ಮಾನಿಟರ್‌, ಸಿನಿಮಾ ಟಿಕೆಟ್‌, ಡಿಜಿಟಲ್‌ ಕ್ಯಾಮೆರಾ, ಲೀಥಿಯಂ ಬ್ಯಾಟರಿ ಪವರ್‌ ಬ್ಯಾಂಕ್‌, ಹಿರಿಯರ ಊರುಗೋಲು, ಸರಕು ಸಾಗಣೆ ವಾಹನಗಳ ವಿಮಾ ಪ್ರೀಮಿಯಂ ಸೇರಿದಂತೆ ಸಾಮಾನ್ಯ ಬಳಕೆಯ 23 ವಸ್ತು, ಸೇವೆಗಳ ಬೆಲೆ ಹೊಸ ವರ್ಷದ ದಿನವಾದ ಜನವರಿ 1ರಿಂದ ಅಗ್ಗವಾಗಲಿವೆ.

ಜಿಎಸ್‌ಟಿಯಡಿ ಗರಿಷ್ಠ ತೆರಿಗೆ ದರ ಶೇ.28ರಷ್ಟಿದ್ದು, ಅದರಿಂದ ಶೇ.99ರಷ್ಟುವಸ್ತುಗಳನ್ನು ಹೊರಗಿಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರವಷ್ಟೇ ಭರವಸೆ ನೀಡಿದ್ದರು. ಶನಿವಾರ ಸಭೆ ಸೇರಿದ ಜಿಎಸ್‌ಟಿ ಮಂಡಳಿ ಶೇ.28 ತೆರಿಗೆ ವ್ಯಾಪ್ತಿಯಿಂದ ಏಳು ವಸ್ತುಗಳನ್ನು ಹೊರಗಿಡಲು ನಿರ್ಧರಿಸಿತು. ಅಲ್ಲದೆ ಹಲವು ವಸ್ತುಗಳ ತೆರಿಗೆ ದರಗಳನ್ನು ಪರಿಷ್ಕರಣೆ ಮಾಡಿತು. ಈ ನಿರ್ಧಾರದಿಂದಾಗಿ ಶೇ.28 ತೆರಿಗೆ ದರ ಹೊಂದಿರುವ ವಸ್ತುಗಳ ಸಂಖ್ಯೆ ಸದ್ಯ 28ಕ್ಕೆ ಇಳಿಕೆಯಾಗಿದೆ.

31ನೇ ಜಿಎಸ್‌ಟಿ ಮಂಡಳಿಯ ಈ ತೀರ್ಮಾನದಿಂದಾಗಿ ಕೇಂದ್ರ ಸರ್ಕಾರಕ್ಕೆ 5500 ಕೋಟಿ ರು. ಆದಾಯ ಕಡಿಮೆಯಾಗಲಿದೆ. ಪರಿಷ್ಕೃತ ದರಗಳು ಜ.1ರಿಂದ ಜಾರಿಗೆ ಬರಲಿವೆ. ಎಂದು ಹಣಕಾಸು ಸಚಿವ ಅರುಣ್‌ ಜೇಟ್ಲಿ ಶನಿವಾರ ಮಾಹಿತಿ ನೀಡಿದರು. ಐಷಾರಾಮಿ ಪದಾರ್ಥಗಳು, ಮದ್ಯ- ತಂಬಾಕಿನಂತಹ ಪಾಪದ ಸರಕುಗಳು, ಡಿಶ್‌ವಾಷರ್‌, ಹವಾನಿಯಂತ್ರಕ, ಆಟೋಮೊಬೈಲ್‌ ಬಿಡಿಭಾಗಗಳು ಹಾಗೂ ಸಿಮೆಂಟ್‌ನಂತಹ ವಸ್ತುಗಳು ಮಾತ್ರವೇ ಗರಿಷ್ಠ ತೆರಿಗೆ ದರದ ವ್ಯಾಪ್ತಿಯಲ್ಲಿವೆ. ಆದಾಯದ ದೃಷ್ಟಿಯಿಂದ ಸಿಮೆಂಟ್‌ ಹಾಗೂ ಆಟೋಮೊಬೈಲ್‌ ಬಿಡಿಭಾಗಗಳನ್ನು ಶೇ.28ರ ತೆರಿಗೆ ದರದಲ್ಲೇ ಮುಂದುವರಿಸಲಾಗಿದೆ. ಮುಂದಿನ ದಿನಗಳಲ್ಲಿ ಅವನ್ನೂ ಹೊರಗಿಡಲಾಗುವುದು ಎಂದು ವಿವರಿಸಿದರು. ಸಿಮೆಂಟ್‌ ತೆರಿಗೆ ಇಳಿಸಿದ್ದರೆ ವಾರ್ಷಿಕ 13000 ಕೋಟಿ ರು. ಮತ್ತು ಆಟೋಮೊಬೈಲ್‌ ಬಿಡಿಭಾಗದ ದರ ಇಳಿಸಿದ್ದರೆ ವಾರ್ಷಿಕ 20000 ಕೋಟಿ ರು. ಹೊರೆ ಬೀಳುತ್ತಿತ್ತು ಎಂದು ಜೇಟ್ಲಿ ಹೇಳಿದರು.

2017ರ ಜು.1ರಂದು ಜಿಎಸ್‌ಟಿ ಜಾರಿಯಾದಾಗ ಶೇ.28ರ ತೆರಿಗೆ ವ್ಯಾಪ್ತಿಯಲ್ಲಿ 226 ಸರಕುಗಳು ಇದ್ದವು.


ತೆರಿಗೆ ದರ ಪರಿಷ್ಕರಣೆ:

ಯಾವ ವಸ್ತು ಅಗ್ಗ?

ಶೇ.28ರಿಂದ ಶೇ.18ಕ್ಕೆ:

- 32 ಇಂಚುವರೆಗಿನ ಕಂಪ್ಯೂಟರ್‌ ಮಾನಿಟರ್‌, ಟೀವಿಗಳು.

- ಲೀಥಿಯಂ ಅಯಾನ್‌ ಬ್ಯಾಟರಿಗಳ ಪವರ್‌ ಬ್ಯಾಂಕ್‌

- ಡಿಜಿಟಲ್‌ ಕ್ಯಾಮೆರಾ, ವಿಡಿಯೋ ರೆಕಾರ್ಡರ್‌

- ವಿಡಿಯೋ ಗೇಮ್‌ ಕನ್ಸೋಲ್‌

- ಪುಲ್ಲಿಗಳು, ಟ್ರಾನ್ಸ್‌ಮಿಷನ್‌ ಶಾಫ್ಟ್‌$್ಸ, ಕ್ರಾಂಕ್ಸ್‌ ಹಾಗೂ ಗೇರ್‌ ಬಾಕ್ಸ್‌

- ರೀ ಟ್ರೆಡೆಡ್‌ ಅಥವಾ ಬಳಕೆಯಾಗಿರುವ ನ್ಯುಮಾಟಿಕ್‌ ರಬ್ಬರ್‌ ಟೈರ್‌

ಶೇ.28ರಿಂದ ಶೇ.5ಕ್ಕೆ:

- ನ್ಯೂನತೆ ಹೊಂದಿರುವ (ಡಿಸೇಬಲ್ಡ್‌) ವ್ಯಕ್ತಿಗಳ ಸಾಗಣೆಗೆ ಬಳಸುವ ಬಿಡಿಭಾಗಗಳು.

ಶೇ.18ರಿಂದ ಶೇ.12ಕ್ಕೆ:

- ನೈಸರ್ಗಿಕ ಬಿರಡೆ (ಕಾರ್ಕ್) ಪದಾರ್ಥ

- ಆಗ್ಲೋಮೆರೆಟೆಡ್‌ ಕಾರ್ಕ್

ಶೇ.18ರಿಂದ ಶೇ.5

- ಮಾರ್ಬಲ್‌ ರಬಲ್‌

ಶೇ.12ರಿಂದ ಶೇ.5

- ನೈಸರ್ಗಿಕ ಕಾರ್ಕ್

- ವಾಕಿಂಗ್‌ ಸ್ಟಿಕ್‌

- ಹಾರುಬೂದಿ ಇಟ್ಟಿಗೆ

ಶೇ.12ರಿಂದ ತೆರಿಗೆ ಮುಕ್ತ

- ಸಂಗೀತ ಪುಸ್ತಕ

ಶೇ.5ರಿಂದ ತೆರಿಗೆ ಮುಕ್ತ

- ತರಕಾರಿ (ಬೇಯಿಸದ ಅಥವಾ ಕುದಿಯುವ ನೀರು ಅಥವಾ ಹಬೆಯಲ್ಲಿ ಬೇಯಿಸಿದ)

- ಹಾಳಾಗದಂತೆ ಇಟ್ಟಿರುವ ತರಕಾರಿ

ಇತರೆ

- 100 ರು. ಮೇಲ್ಪಟ್ಟಸಿನಿಮಾ ಟಿಕೆಟ್‌ಗಳ ಮೇಲಿನ ಜಿಎಸ್‌ಟಿ ಶೇ.28ರಿಂದ ಶೇ.18ಕ್ಕೆ ಇಳಿಕೆ. 100 ರು. ಒಳಗಿನ ಟಿಕೆಟ್‌ ದರಕ್ಕೆ ಶೇ.18ರ ಬದಲು ಶೇ.12 ಜಿಎಸ್‌ಟಿ.

- ಸರಕು ಸಾಗಣೆ ವಾಹನಗಳ ಮೇಲಿನ ಥರ್ಡ್‌ ಪಾರ್ಟಿ ಇನ್ಶೂರೆನ್ಸ್‌ ಪ್ರೀಮಿಯಂ ಮೇಲಿನ ಜಿಎಸ್‌ಟಿ ಶೇ.18ರಿಂದ ಶೇ.12ಕ್ಕೆ

- ಪ್ರಧಾನಮಂತ್ರಿ ಜನಧನ ಯೋಜನೆಯಡಿ ಕನಿಷ್ಠ ಉಳಿತಾಯ ಖಾತೆದಾರರಿಗೆ ಬ್ಯಾಂಕುಗಳು ಒದಗಿಸುವ ಸೇವೆಗೆ ತೆರಿಗೆ ವಿನಾಯಿತಿ