ಹೊಸ ಸರ್ಕಾರದ ಹೊಸ ಸಂಪುಟ ಎಂದರೆ ಪತ್ರಕರ್ತರಿಗೆ ಹಬ್ಬ. ಇವರು ಮಂತ್ರಿ ಯಾಕಾಗಬಹುದು, ಅವರು ಯಾಕೆ ಆಗೋಲ್ಲ.. ಹೀಗೆ ಚರ್ಚೆ-ವಿಶ್ಲೇಷಣೆಗಳು ತರಹೇವಾರಿ ರೀತಿಯಲ್ಲಿ ನಡೆಯುತ್ತಲೇ ಇರುತ್ತವೆ. ಆದರೆ ಮೋದಿ ಮತ್ತು ಶಾ ಅಂಥ ಯಾವುದೇ ಗುಟ್ಟು ಬಿಟ್ಟುಕೊಡುವವರಲ್ಲ. ಪ್ರಮಾಣವಚನಕ್ಕೆ ಎರಡು ದಿನಗಳಿವೆ.

ಆದರೆ ಇಲ್ಲಿಯವರೆಗೆ ಸಂಘ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯರ ಜೊತೆ ಔಪಚಾರಿಕ ಚರ್ಚೆ ನಡೆದಿಲ್ಲ. ಮೋದಿ ಆಪ್ತರು ಹೇಳುವ ಪ್ರಕಾರ, ಕ್ಯಾಬಿನೆಟ್‌ ದರ್ಜೆ ಸಚಿವರು ಯಾರಿರಬೇಕು ಎಂದು ನೇರವಾಗಿ ಮೋದಿ ನಿರ್ಣಯಿಸಿದರೆ, ರಾಜ್ಯ ಸಚಿವರು ಯಾರಾಗಬೇಕು ಎಂದು ಅಮಿತ್‌ ಶಾ ಪ್ರಾಂತವಾರು ಮತ್ತು ಜಾತಿವಾರು ಲೆಕ್ಕ ಹಾಕಿ ನಿರ್ಣಯ ಮಾಡುತ್ತಾರೆ.

ಆದರೆ ಸಂಘದ ನಾಯಕರು ಬಿಟ್ಟರೆ, ಯಾರೂ ಕೂಡ ಇವರನ್ನು ಮಂತ್ರಿ ಮಾಡಿ, ಇವರನ್ನು ಮಾಡಬೇಡಿ ಎಂದು ಬಿಜೆಪಿಯ ನಂಬರ್‌ 1 ಮೋದಿ, ನಂಬರ್‌ 2 ಅಮಿತ್‌ ಶಾ ಎದುರು ಹೋಗಿ ಹೇಳುವ ವ್ಯವಸ್ಥೆಯೇ ಇಲ್ಲ. ಹೊಸ ಸಂಸದರಿಗೆ ಸಿಹಿ ತಿನ್ನಿಸಲು ಮಾತ್ರ ಸಮಯ ಕೊಡುತ್ತಿರುವ ಶಾ, ಲಾಬಿ ಮಾತು ಕೇಳಿಸಿಕೊಳ್ಳೋದೂ ಇಲ್ಲವಂತೆ. ದಿಲ್ಲಿ ಬಿಜೆಪಿ ಮೂಲಗಳು ಹೇಳುವ ಪ್ರಕಾರ, ಪ್ರಮುಖ ಖಾತೆಗಳಿಗೆ ಯಾರು ಎನ್ನುವುದನ್ನು ಮೋದಿ ಮತ್ತು ಶಾ ಈಗಾಗಲೇ ಚರ್ಚೆ ಮಾಡಿರುತ್ತಾರೆ. ಆದರೆ 30ರ ಬೆಳಗಿನವರೆಗೂ ಗುಟ್ಟು ಬಿಟ್ಟು ಕೊಡುವುದಿಲ್ಲ.

ಯಾರಾದರೂ ಪತ್ರಕರ್ತರ ಬೆನ್ನು ಹತ್ತಿ ಇಲ್ಲದ ಹೆಸರು ಬರೆಸಿಕೊಂಡರೆ, ಮೋದಿ ಹಿಂದೆಮುಂದೆ ನೋಡದೆ ಅಂಥ ಹೆಸರನ್ನು ಅಳಿಸಿ ಹಾಕುತ್ತಾರೆ. ಈ ತರಹದ ಸಸ್ಪೆನ್ಸ್‌ ಕುತೂಹಲ ಮೋದಿ ಸಾಹೇಬರ ಕೆಲಸದ ವೈಖರಿಯೂ ಹೌದು.

ಜೇಟ್ಲಿ, ಸುಷ್ಮಾ ಇಲ್ಲ ಮತ್ತಾರು?

ಕ್ಯಾನ್ಸರ್‌ನಿಂದ ಬಳಲುತ್ತಿರುವ ಅರುಣ್‌ ಜೇಟ್ಲಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದು, ಬಹುತೇಕ ಅವರ ಕುಟುಂಬದ ಮೂಲಗಳು ಹೇಳುವ ಪ್ರಕಾರ, ‘ನಾನು ಸಂಪುಟದಲ್ಲಿ ಸೇರಲು ಸಾಧ್ಯವಿಲ್ಲ’ ಎಂದು ಈಗಾಗಲೇ ಮೋದಿ ಸಾಹೇಬರಿಗೆ ಹೇಳಿಬಿಟ್ಟಿದ್ದಾರೆ. ಮಧುಮೇಹದ ತೀವ್ರತೆಯಿಂದ ಬಳಲುತ್ತಿರುವ ಸುಷ್ಮಾ ಸ್ವರಾಜ್‌ ಕೂಡ ಕ್ಯಾಬಿನೆಟ್‌ನಲ್ಲಿ ಇರುವ ಸಾಧ್ಯತೆ ಕಡಿಮೆ.

ಇನ್ನು ರಾಜನಾಥ್‌ ಸಿಂಗ್‌ ಮತ್ತು ನಿತಿನ್‌ ಗಡ್ಕರಿ ಇಬ್ಬರೂ ಸಂಪುಟದಲ್ಲಿ ಇರಬೇಕೆಂದು ಸಂಘ ಹೇಳಿದ್ದು, ಗಡ್ಕರಿ ಅವರನ್ನು ಸ್ಪೀಕರ್‌ ಮಾಡುವ ಕೆಲವರ ಪ್ರಯತ್ನ ಪಂಕ್ಚರ್‌ ಆಗಿದೆ. ಜೇಟ್ಲಿ ಹೊರಗೆ ಉಳಿದರೆ ಪಿಯೂಷ್‌ ಗೋಯಲ್ ಹಣಕಾಸು ಮಂತ್ರಿ ಆಗ್ತಾರಾ ಅಥವಾ ಯಾರಾದರೂ ಆರ್ಥಿಕ ತಜ್ಞರನ್ನು ತಂದು ಫೈನಾನ್ಸ್‌ ಖಾತೆ ಕೊಡುತ್ತಾರಾ ಎಂಬ ವಿಕಲ್ಪ ಸೌತ್‌ ಬ್ಲಾಕ್‌ನಿಂದ ಕೇಳುತ್ತಿದೆ.

ಇನ್ನು ನಿರ್ಮಲಾ ಸೀತರಾಮನ್‌, ಧರ್ಮೇಂದ್ರ ಪ್ರಧಾನ್‌, ಸ್ಮೃತಿ ಇರಾನಿ, ಪ್ರಕಾಶ್‌ ಜಾವಡೇಕರ್‌, ಭೂಪೇಂದ್ರ ಯಾದವ್‌ ಕ್ಯಾಬಿನೆಟ್‌ಗೆ ಮರಳಬಹುದು. ಆದರೆ ಸುರೇಶ್‌ ಪ್ರಭು ಬಗ್ಗೆ ಗ್ಯಾರಂಟಿ ಇದ್ದಂತಿಲ್ಲ.

ಅಮಿತ್‌ ಶಾಗೆ ಯಾವ ಖಾತೆ?

2019ರಲ್ಲಿ ಆಗಿರುವ ಒಂದು ದೊಡ್ಡ ಬದಲಾವಣೆ ಎಂದರೆ ಮೋದಿ ಎಲ್ಲೇ ಹೋದರೂ ಅಮಿತ್‌ ಶಾ ಅವರನ್ನು ಕರೆದುಕೊಂಡು ಹೋಗಿ ನನ್ನ ಉತ್ತರಾಧಿಕಾರಿ ಎಂದು ಸೂಚ್ಯವಾಗಿ ಹೇಳಲು ಪ್ರಯತ್ನ ಮಾಡುತ್ತಿರುವುದು. ಬಿಜೆಪಿ ಇನ್‌ಸೈಡರ್‌ಗಳು ಹೇಳುತ್ತಿರುವ ಪ್ರಕಾರ ಜುಲೈನಲ್ಲಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಯಲಿರುವ ಶಾ ಅವರನ್ನು ಮೋದಿ ಸಂಪುಟಕ್ಕೆ ತೆಗೆದುಕೊಂಡು ಗೃಹ ಅಥವಾ ರಕ್ಷಣಾ ಇಲಾಖೆಯನ್ನು ಕೊಡಲಿದ್ದಾರೆ.

2001ರಲ್ಲಿ ಮೋದಿ ಗುಜರಾತ್‌ ಮುಖ್ಯಮಂತ್ರಿಯಾಗಿ ಹೋದಾಗ ಅಮಿತ್‌ ಶಾರನ್ನು ಗೃಹ ಸಚಿವರನ್ನಾಗಿ ಮಾಡಿ ಬರೋಬ್ಬರಿ 17 ಖಾತೆ ಕೊಟ್ಟಿದ್ದರು. ಶಾ ಸಂಪುಟಕ್ಕೆ ಬಂದರೆ ರಾಜನಾಥ್‌ ಸಿಂಗ್‌ ಮತ್ತು ಗಡ್ಕರಿ ಅವರ ಎತ್ತರ ಕುಸಿಯೋದು ಪಕ್ಕಾ.

ಕರ್ನಾಟಕದಿಂದ ಯಾರು ಮಿನಿಸ್ಟರ್?

ದಿಲ್ಲಿಯಲ್ಲಿ ಉಳಿದು ಲಾಬಿ ಮಾಡಿದರೆ ಇಲ್ಲದ ರಿಸ್ಕ್‌ ಎಂದು ರಾಜ್ಯದ ಎಲ್ಲ ಬಿಜೆಪಿ ಸಂಸದರು ವಾಪಸ್‌ ಕರ್ನಾಟಕಕ್ಕೆ ಹೋಗಿದ್ದಾರೆ. ಯಾರಿಗೂ ಮಂತ್ರಿ ಆಗುವ ಬಗ್ಗೆ ಸಣ್ಣ ಸುಳಿವೂ ಇಲ್ಲ. ಅನಂತ್‌ ಕುಮಾರ್‌ ಹೆಗಡೆ ಇಲ್ಲವೇ ಪ್ರಹ್ಲಾದ್‌ ಜೋಷಿ, ಡಿ.ವಿ ಸದಾನಂದ ಗೌಡ, ಶೋಭಾ ಮತ್ತು ಪ್ರತಾಪ್‌ ಸಿಂಹ, ರಮೇಶ ಜಿಗಜಿಣಗಿ ಇಲ್ಲವೇ ಉಮೇಶ್‌ ಜಾದವ್‌, ಉದಾಸಿ ಇಲ್ಲವೇ ಸುರೇಶ ಅಂಗಡಿ ಎಂದು ರಾಜ್ಯ ನಾಯಕರು ಜಾತಿ ಹಿಡಿದು ಲೆಕ್ಕ ಹಾಕುತ್ತಿದ್ದಾರೆ.

ಆದರೆ ಮೋದಿ, ಶಾ, ರಾಮ್‌ಲಾಲ್ ಯಾರೊಂದಿಗೂ ಚರ್ಚೆ ಮಾಡಿಲ್ಲ. ಎಲ್ಲ ಸಂಸದರಿಗೆ 29ರ ರಾತ್ರಿ ದಿಲ್ಲಿಗೆ ಬರುವಂತೆ ಹೇಳಲಾಗಿದ್ದು, ವಾಡಿಕೆಯಂತೆ ಸಂಪುಟ ದರ್ಜೆ ಸಚಿವರಾಗುವವರಿಗೆ ನೇರವಾಗಿ ಮೋದಿಯವರೇ ಕರೆ ಮಾಡಿ ಹೇಳಿದರೆ, ರಾಜ್ಯ ಸಚಿವರಾಗುವವರಿಗೆ ಅಮಿತ್‌ ಶಾ ಕಾಲ್ ಮಾಡಿ ಹೇಳುತ್ತಾರೆ. ದಿಲ್ಲಿಯಲ್ಲಿ ಯಾರಾರ‍ಯರದ್ದೋ ಮಾತು ಕೇಳಿ ಸೂಟ್‌ ಹೊಲಿಸಿಕೊಂಡರೆ ಗೋವಿಂದ ನಾಮ ಅಷ್ಟೇ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ‘ಇಂಡಿಯಾ ಗೇಟ್’ ಕ್ಲಿಕ್ ಮಾಡಿ