ರಜನಿಕಾಂತ್. ಇಡೀ ಚಿತ್ರರಂಗದಲ್ಲಿ ಮರೆಯಲಾಗದ ಹೆಸರು. ಅವರು ಈಗ ಸೂಪರ್ ಸ್ಟಾರ್ ಆಗಿದ್ದರೂ ಹಳೆಯ ಗೆಳೆಯರನ್ನು ಎಂದೂ ಮರೆತಿಲ್ಲ. ರಜನಿ ಸ್ಟಾರ್ ಆಗುವ ಮುಂಚೆ ಒಬ್ಬ ವ್ಯಕ್ತಿಯನ್ನು ಡ್ಯಾಡಿ ಅಂತಾನೆ ಕರೀತಿದ್ರಂತೆ. ಆದ್ರೆ ಆ ವ್ಯಕ್ತಿ ಇಂದು ಬದುಕಿಲ್ಲ. ಅವರ ಸಾವಿನ ಸುದ್ದಿ ರಜನಿಗೆ ತಲುಪಿದೆಯೋ.. ಇಲ್ವೋ ಅನ್ನೋದು ಅವರ ಮನೆಯವರ ಕೊರಗು. ಯಾರು ಆ ಡ್ಯಾಡಿ? ರಜನಿಗೂ ಅವರಿಗೂ ಏನು ಸಂಬಂಧ? ಇಲ್ಲಿದೆ ನೋಡಿ ಇಂಟೆರೆಸ್ಟಿಂಗ್ ಸ್ಟೋರಿ.
ಉಡುಪಿ(ಮಾ. 16): ಜಿಲ್ಲೆಯ ಹೆರ್ಗದಲ್ಲಿ ನಾರಾಯಣರಾವ್ ಪಾಟೀಲ್ ಎಂಬ ವೃದ್ಧರೊಬ್ಬರು ಇಹಲೋಕ ತ್ಯಜಿಸಿದ್ದಾರೆ. ಇಷ್ಟೇ ಆಗಿದ್ದರೆ ಈ ಸುದ್ದಿ ಅವರ ಗ್ರಾಮದ ಸುತ್ತಮುತ್ತಲವರೆಗೆ ಮಾತ್ರ ಸೀಮಿತವಾಗಿರುತ್ತಿತ್ತು. ರಜಿನೀಕಾಂತ್ ಸೂಪರ್'ಸ್ಟಾರ್ ಆಗುವ ಮುಂಚೆ ಅವರಿಗೆ ಬೆನ್ನೆಲುಬಾಗಿ ನಿಂತವರಲ್ಲಿ ನಾರಾಯಣರಾವ್ ಕೂಡ ಒಬ್ಬರು. ಹೀಗಾಗಿ, ನಾರಾಯಣರಾವ್ ಸಾವಿನ ಸುದ್ದಿ ಗಡಿಯಾಚೆ ತಲುಪುವಂಥದ್ದಾಗಿದೆ.
ರಜನಿಕಾಂತ್ ಸೂಪರ್ಸ್ಟಾರ್ ಆಗೋ ಮುಂಚಿನ ಜೀವನದ ಬಗ್ಗೆ ಸಾಕಷ್ಟು ಕೇಳಿದ್ದೇವೆ. ನೋಡಿದ್ದೇವೆ. ಕಷ್ಟ ಕಾಲದಲ್ಲಿ ಜೊತೆಯಾದವರನ್ನು ಎಂದೂ ಮರೆತಿಲ್ಲ ರಜನಿ. 50 ವರ್ಷಗಳ ಹಿಂದೆ ಹೋಟೆಲ್ ಕೆಲಸಕ್ಕೆ ಅಂತ ನಾರಾಯಣ್ ರಾವ್ ಮದ್ರಾಸ್'ನ ವುಡ್'ಲ್ಯಾಂಡ್ಸ್ ಹೋಟೆಲ್'ನಲ್ಲಿ ಸಪ್ಲೇಯರ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ರಂತೆ. ರಜನೀಕಾಂತ್ ಮಡ್ರಾಸ್ ಫಿಲ್ಮ್ ಇನ್ಸ್'ಟಿಟ್ಯೂಟ್'ನಲ್ಲಿ ತರಬೇತಿಗಾಗಿ ಸೇರಿದಾಗ ರಜನೀಕಾಂತ್'ಗೆ ಸಹಾಯ ಮಾಡಿದ್ದರಂತೆ. ಬಡತನದ ಅಂದಿನ ಸ್ಥಿತಿಯಲ್ಲಿ ರಜನೀಕಾಂತ್'ಗೆ ಉಳಿಯುವ ಹಾಗೂ ಆಹಾರ ವ್ಯವಸ್ಥೆ ಮಾಡಿದ್ದರಂತೆ. ಆಗಿಂದಲೂ ರಜನಿ ಗೆಳೆಯರ ತಂಡ ನಾರಾಯಣ್ ರಾವ್ ಅವರನ್ನು ಡ್ಯಾಡಿ ಅಂತಾನೆ ಕರೀತಿದ್ರಂತೆ.
ನಾರಾಯಣ್ ಪಾಟೀಲ್ ಅವರಿಗೆ ತುಂಬಾ ಗೌರವ ಕೊಡುತ್ತಿದ್ದ ರಜನಿ, ಒಮ್ಮೆ ಅವರನ್ನು ಭೇಟಿಯಾದಾಗ ನೆನಪಿಗಾಗಿ ತನ್ನ ಇಷ್ಟ ದೇವರಾದ ಗುರು ರಾಘವೇಂದ್ರಸ್ವಾಮಿಗಳ ಫೋಟೋವನ್ನು ನೀಡಿದ್ದರಂತೆ. ಕಷ್ಟಕಾಲದಲ್ಲಿ ನೆರವಾದದ್ದನ್ನು ಸ್ಮರಿಸಿ ಅವರ ಹೆಸರಿನ ಬ್ಯಾಂಕ್ ಖಾತೆಯಲ್ಲಿ ಆಗಿನ ಕಾಲದಲ್ಲೇ ಒಂದೂವರೆ ಲಕ್ಷ ರೂಪಾಯಿ ಠೇವಣಿ ಇರಿಸಿದ್ರಂತೆ. ಆದ್ರೆ ಚೆನೈನಿಂದ ವಾಪಾಸ್ ಬಂದ ನಾರಾಯಣ ರಾವ್, 1997 ರಲ್ಲಿ ತವರೂರು ಉಡುಪಿಯ ಹೆರ್ಗದಲ್ಲಿ ಬಂದು ನೆಲೆಸುತ್ತಾರೆ.
ಕಳೆದ ವರ್ಷದ ಮೇ ತಿಂಗಳಂದು ನಾರಾಯಣ್ ರಾವ್ ಇಹಲೋಕ ತ್ಯಜಿಸಿದ್ದಾರೆ. ಈ ವಿಷಯ ರಜನೀಕಾಂತ್'ಗೆ ತಿಳಿದಿಲ್ಲ. ಅವರಿಗೆ ಈ ಸುದ್ದಿ ಮುಟ್ಟಿಸಬೇಕು ಎಂಬುದು ಅವರ ಕುಟುಂಬವರ್ಗದವರ ಅಭಿಲಾಷೆ. ಆದಷ್ಟು ಬೇಗ ಈ ವಿಷಯ ಸೂಪರ್'ಸ್ಟಾರ್ ಕಿವಿಗೆ ಬಿದ್ದು ಆ ಕುಟುಂಬವನ್ನು ಒಮ್ಮೆ ಭೇಟಿಯಾಗಲಿ ಎಂಬುದೇ ಎಲ್ಲರ ಆಶಯ.
- ಶಶಿಧರ್ ಮಾಸ್ತಿಬೈಲು, ಸುವರ್ಣ ನ್ಯೂಸ್, ಉಡುಪಿ
