ಈ ಕ್ಷೇತ್ರದಲ್ಲಿ ಶ್ರೀನಿವಾಸಪ್ರಸಾದ್ ಅವರಿಗೆ ಪರಿಚಯವಿರುವ, ಒಲವಿರುವ ಯಾವೊಬ್ಬ ಅಧಿಕಾರಿಯೂ ಚುನಾವಣೆ ಸಂದರ್ಭದಲ್ಲಿ ಇರದಂತೆ ನೋಡಿಕೊಳ್ಳುವುದೇ ಈ ಹುನ್ನಾರದ ಉದ್ದೇಶವಾಗಿದೆ.

ಬೆಂಗಳೂರು(ನ.03): ಮಾಜಿ ಸಚಿವ ವಿ. ಶ್ರೀನಿವಾಸಪ್ರಸಾದ್ ಕಾಂಗ್ರೆಸ್ ಪಕ್ಷ ತೊರೆದ ನಂತರ ಯಾವುದೇ ಸಂದರ್ಭದಲ್ಲಿ ಎದುರಾಗಲಿರುವ ನಂಜನಗೂಡು ಕ್ಷೇತ್ರದ ಉಪ ಚುನಾವಣೆಯಲ್ಲಿ ಶತಾಯ ಗತಾಯ ಕಾಂಗ್ರೆಸ್ ಪಕ್ಷದ ಮುಖ ಮೌಲ್ಯ ಉಳಿಸಿಕೊಳ್ಳಲು ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಎಲ್ಲಾ ರೀತಿಯ ಪ್ರಯತ್ನಕ್ಕೆ ಕೈಹಾಕಿದೆ.

ಅತ್ತ ಸಚಿವ ಮಹದೇವಪ್ಪ ಪುತ್ರ ಸುನಿಲ್ ಬೋಸ್ ಪಕ್ಷದ ಟಿಕೆಟ್ ಗಿಟ್ಟಿಸಲು ಗಂಭೀರ ಪ್ರಯತ್ನ ಮಾಡಿ, ಈಗಿನಿಂದಲೇ ಕ್ಷೇತ್ರದ ಮುಖಂಡರಿಗೆ ಬಾಡೂಟ ಆಯೋಜಿಸಿ ಆಮಿಷ ಒಡ್ಡುತ್ತಿದರೆ, ಅತ್ತ ಸರ್ಕಾರ ನಂಜನಗೂಡು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ ನೂರಕ್ಕೂ ಹೆಚ್ಚು ಅಧಿಕಾರಿಗಳು, ಸಿಬ್ಬಂದಿ ವರ್ಗವನ್ನು ಎತ್ತಂಗಡಿ ಮಾಡಲು ಹುನ್ನಾರ ನಡೆಸಿದೆ.

ಈ ಕ್ಷೇತ್ರದಲ್ಲಿ ಶ್ರೀನಿವಾಸಪ್ರಸಾದ್ ಅವರಿಗೆ ಪರಿಚಯವಿರುವ, ಒಲವಿರುವ ಯಾವೊಬ್ಬ ಅಧಿಕಾರಿಯೂ ಚುನಾವಣೆ ಸಂದರ್ಭದಲ್ಲಿ ಇರದಂತೆ ನೋಡಿಕೊಳ್ಳುವುದೇ ಈ ಹುನ್ನಾರದ ಉದ್ದೇಶವಾಗಿದೆ, ಚುನಾವಣೆ ಘೋಷಣೆಯಾದ ಬಳಿಕ ಕ್ಷೇತ್ರದಲ್ಲಿ ಚುನಾವಣಾ ಆಯೋಗದ ಸಮ್ಮತಿಯಿಲ್ಲದೆ ಯಾವುದೇ ವರ್ಗಾವಣೆ ಮಾಡುವಂತಿಲ್ಲ, ಅದೇ ಕಾರಣಕ್ಕೆ ಚುನಾವಣೆ ಘೋಷಣೆಯಾಗುವ ಮುನ್ನವೇ ವರ್ಗಾವಣೆ ಮಾಡಲು ತಯಾರಿ ನಡೆಸಿದೆ, ಬುಧವಾರ ಅಥವಾ ಗುರುವಾರದ ಒಳಗಾಗಿ ವರ್ಗಾವಣೆಗಾಗಿ ಪಟ್ಟಿ ತಯಾರಿಸಲಾಗಿದೆ.

ಉಸ್ತುವಾರಿ ಸಚಿವ ಮಹದೇವಪ್ಪ ಅಣತಿ ಮೇಲೆಯೇ ಈ ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಈ ಕ್ಷೇತ್ರದಲ್ಲಿ ತಹಸೀಲ್ದಾರರಿಂದ ಆರಂಭವಾಗಿ ರೆವಿನ್ಯೂ ಇನ್ಸ್‌ಪೆಕ್ಟರ್, ಗ್ರಾಮ ಲೆಕ್ಕಿಗರ ಸಹಿತವಾಗಿ ವಿವಿಧ ಹಂತದ ಅಧಿಕಾರಿ, ಸಿಬ್ಬಂದಿಯನ್ನು ವರ್ಗ ಮಾಡಿ ಆ ಜಾಗಕ್ಕೆ ಸರ್ಕಾರದ ಪರ ಒಲವಿರುವ ಅಧಿಕಾರಿಗಳು, ಸಿಬ್ಬಂದಿ ತರಬೇಕೆಂಬ ತಂತ್ರಗಾರಿಕೆ ಈ ವರ್ಗಾವಣೆ ಪ್ರ ಕ್ರಿಯೆಯಲ್ಲಿದೆ ಎನ್ನಲಾಗಿದೆ.