ಬೆಂಗಳೂರು[ಸೆ. 25] ಉಪಚುನಾವಣೆ ಘೊಷಣೆಯಾಗುತ್ತಿದ್ದಂತೆ ಬಿಜೆಪಿಯಲ್ಲಿ ಟಿಕೆಟ್ ಗಾಗಿ ಫೈಟ್ ಜೋರಾಗಿಯೇ ನಡೆಯುತ್ತಿದೆ. ಒಂದೊಂದೆ ಕ್ಷೇತ್ರದಲ್ಲಿ ಅಸಾಮಾಧಾನ, ಭಿನ್ನಾಭಿಪ್ರಾಯಗಳು ಕಾಣಿಸಿಕೊಳ್ಳುತ್ತಿವೆ.

ಕೆಆರ್ ಪುರಂನಲ್ಲಿಯೂ ಅಪಸ್ವರ ಹೊಸದೇನೂ ಅಲ್ಲ. ಕಳೆದ ಚುನಾವಣೆಯಲ್ಲಿ ಸೋತ ಬಿಜೆಪಿ ಅಭ್ಯರ್ಥಿಗಳಿಂದ ಟಿಕೆಟ್ ಗಾಗಿ ಪೈಪೋಟಿ ಶುರುವಾಗಿದೆ. ಟಿಕೆಟ್ ಆಕಾಂಕ್ಷಿ ನಂದೀಶ್ ರೆಡ್ಡಿ ಬೆಂಬಲಿಗರು ಕಠಿಣ ನಿರ್ಧಾರ ತೆಗೆದುಕೊಳ್ಳುವ ಸೂಚನೆ ನೀಡಿದ್ದಾರೆ

ಕಾಂಗ್ರೆಸ್​ ಅನರ್ಹ ಶಾಸಕ ಭೈರತಿ ಬಸವರಾಜ್​ ಬಿಜೆಪಿಯಿಂದ ಸ್ಪರ್ಧೆ ಮಾಡುತ್ತಾರೆ ಎಂಬ ಮಾತು ಕೇಳಿಬಂದಿರುವುದರ ಪರಿಣಾಮ ಖಾಸಗಿ ಹೊಟೇಲ್ ನಲ್ಲಿ ಸಭೆ ಸೇರಿದ ನಂದೀಶ್ ರೆಡ್ಡಿ ಬೆಂಬಲಿಗರು ಕಠಿಣ ಕ್ರಮ ತೆಗೆದುಕೊಳ್ಳುವ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.

ಸಭೆಯಲ್ಲಿ ಕೆಆರ್​ ಪುರಂನ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದು , ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಇಲ್ಲಿನ ಟಿಕೆಟ್​ ಆಕಾಂಕ್ಷಿಯಾಗಿರುವ ನಂದೀಶ್​ ರೆಡ್ಡಿ ಕೂಡ ಸಭೆಯಲ್ಲಿ ಭಾಗಿಯಾಗಿದ್ದರು. ನಂದೀಶ್ ರೆಡ್ಡಿ ಅವರಿಗೆ ಟಿಕೆಟ್​ ನೀಡಬೇಕು ಎಂದು ಕಾರ್ಯಕರ್ತರು ಒತ್ತಡ ಹಾಕಿದರು.

ಮೂಲ ಬಿಜೆಪಿ VS ಅನರ್ಹರ ಫೈಟ್, ಹಿರೇಕೆರೂರಿನಲ್ಲಿ ಯಾರಿಗೆ ಟಿಕೆಟ್?

ಕಾರ್ಯಕರ್ತರ ಮನವಿಯನ್ನು ಮೀರಿ ಭೈರತಿ ಬಸವರಾಜ್ ಗೆ ಟಿಕೆಟ್ ಕೊಡಲು ಮುಂದಾದರೆ ನಂದೀಶ್ ರೆಡ್ಡಿ ಪಕ್ಷೇತರರಾಗಿಯೂ ಸ್ಪರ್ಧೆ ಮಾಡಬಹುದು ಎಂಬ ಮಾತುಗಳು ಕೇಳಿಬಂದವು. ಭೈರತಿಗೆ ಮತ ಹಾಕಲ್ಲ ಎಂದ ಮಾತ್ರಕ್ಕೆ ಕಾಂಗ್ರೆಸ್ ಪರವಾಗಿ ಮತ ಹಾಕುತ್ತೇವೆ ಎಂಬ ಅರ್ಥವೂ ಅಲ್ಲ ಎಂದು ತಿಳಿಸಿದರು.

ಬಸ ಅವರಿಗೆ ಟಿಕೆಟ್​ ಕೊಟ್ಟರೆ, ಭೈರತಿ ಪರ ಯಾವುದೇ ಕಾರಣಕ್ಕೂ ಮತ ಹಾಕುವುದಿಲ್ಲ. ಹಾಗಂತ ಕಾಂಗ್ರೆಸ್​ಗೂ ಮತ ಹಾಕುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಒಂದು ವೇಳೆ ಪಕ್ಷ ಟಿಕೆಟ್​ ನೀಡಲು ನಂದೀಶ್​ ರೆಡ್ಡಿಗೆ ನಿರಾಕರಿಸಿದರೆ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಬೇಕು ಎಂಬ ಕಾರ್ಯಕರ್ತರು ಅವರಿಗೆ ಸಭೆಯಲ್ಲಿ ತಿಳಿಸಿದರು. ಅವರು ಪಕ್ಷೇತರರಾಗಿ ಕಣಕ್ಕೆ ಇಳಿದರೆ ಅವರನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮದು ಎಂಬ ಭರವಸೆಯನ್ನು ಕಾರ್ಯಕರ್ತರು ನೀಡಿದರು.

ಹಿರಿಯ ನಾಯಕರ ಭೇಟಿ: ಸಿಎಂ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರನ್ನು ಭೇಟಿ ಮಾಡಲಿರುವ ನಂದೀಶ್ ರೆಡ್ಡಿ ಬೆಂಬಲಿಗರು ಪರಿಸ್ಥಿತಿಯ ಮನವರಿಕೆ ಮಾಡಿಕೊಡಲಿದ್ದಾರೆ. ಜತೆಗೆ ತಮ್ಮ ತೀರ್ಮಾನವನ್ನು ಹೇಳಲಿದ್ದಾರೆ.