ಕೆಎಂಎಫ್ ಅಧಿಕೃತ ಪ್ರಕಟಣೆಯನ್ನು ಹೊರಡಿಸಿದ್ದು, ಹೆಚ್ಚಳವಾದ ಹಾಲಿನ ದರದಲ್ಲಿ 1.50 ಪೈಸೆ ರೈತರಿಗೆ ಹಾಗೂ 50 ಪೈಸೆ ಒಕ್ಕೂಟಗಳ ನಿರ್ವಹಣೆಗೆ ನೀಡಲು ಕೆಎಂಎಫ್ ನಿರ್ಧರಿಸಿದೆ.
ಬೆಂಗಳೂರು(ಮಾ.30): ಪ್ರತಿ ಲೀಟರ್ ನಂದಿನಿ ಹಾಲು ಮತ್ತು ಮೊಸರಿಗೆ 2 ರೂಪಾಯಿ ಹೆಚ್ಚಳ ಮಾಡಲು ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿರ್ಧರಿಸಿದೆ. ಇದೇ ಏಪ್ರಿಲ್ 1ರಿಂದ ಪರಿಷ್ಕರಣೆ ದರ ಏರಿಕೆ ಆಗಲಿದ್ದು, ಗ್ರಾಹಕರಿಗೆ ನಾಲಿಗೆ ಸುಡಲು ನಂದಿನಿ ಹಾಲು ಸಿದ್ದವಾಗಿದೆ.
ಈ ಬಗ್ಗೆ ಕೆಎಂಎಫ್ ಅಧಿಕೃತ ಪ್ರಕಟಣೆಯನ್ನು ಹೊರಡಿಸಿದ್ದು, ಹೆಚ್ಚಳವಾದ ಹಾಲಿನ ದರದಲ್ಲಿ 1.50 ಪೈಸೆ ರೈತರಿಗೆ ಹಾಗೂ 50 ಪೈಸೆ ಒಕ್ಕೂಟಗಳ ನಿರ್ವಹಣೆಗೆ ನೀಡಲು ಕೆಎಂಎಫ್ ನಿರ್ಧರಿಸಿದೆ.
ಹಾಲಿನ ಜತೆಗೆ ನಂದಿನಿ ಮೊಸರಿನ ದರವೂ ಪರಿಷ್ಕರಣೆ ಆಗಿದೆ.ಪ್ರತಿ ಲೀಟರ್ ಮೊಸರಿಗೆ 2 ರೂಪಾಯಿ ಹೆಚ್ಚಳವಾಗಿದ್ದು ಇನ್ಮುಂದೆ ಪ್ರತಿ ಲೀಟರ್ ಮೊಸರಿನ ದರ 40 ರೂಪಾಯಿಗಳಾಗಲಿದೆ.
ಹದಿನೈದು ದಿನಗಳ ಹಿಂದಷ್ಟೇ ಹಾಲಿನ ದರ 2 ರಿಂದ 3 ರೂ ಪರಿಷ್ಕರಣೆ ಮಾಡಬೇಕೆಂದು ರಾಜ್ಯ ಸರ್ಕಾರಕ್ಕೆ ಕೆಎಂಎಫ್ ಪ್ರಸ್ತಾವನೆ ಸಲ್ಲಿಸಿತ್ತು. ಈ ಬಗ್ಗೆ ಕಳೆದ ವಾರ ನಡೆದ ಆಡಳಿತ ಮಂಡಳಿಯ ಸಭೆಯಲ್ಲೂ ಕೂಡಾ ಚರ್ಚೆಗಳಾಗಿದ್ದವು. ಅಂತಿಮವಾಗಿ 2 ರೂ. ಹೆಚ್ಚಳಕ್ಕೆ ಸರ್ಕಾರ ಅನುಮೋದನೆ ನೀಡಿದ ಹಿನ್ನೆಲೆಯಲ್ಲಿ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ಇಂದು 2 ರೂ. ದರ ಪರಿಷ್ಕರಣೆ ಮಾಡಿ ಆದೇಶ ಮಾಡಿದೆ.
