ಓಲಾ, ಊಬರ್'ಗೆ ಸಡ್ಡು ಹೊಡೆಯಲು ನಾಳೆಯಿಂದ ಹೆಚ್.ಡಿ.ಕೆ. ಕ್ಯಾಬ್ ರಸ್ತೆಗೆ ಇಳಿಯಲಿದೆ. 'ನಮ್ಮ ಟೈಗರ್' ಹೆಸರಿನ ಕ್ಯಾಬ್'ಗಳು ನಗರದಲ್ಲಿ ನಾಳೆಯಿಂದ ಸಾರ್ವಜನಿಕರಿಗೆ ಮುಕ್ತವಾಗಿ ಸಿಗಲಿದೆ.
ಬೆಂಗಳೂರು (ನ.29): ಓಲಾ, ಊಬರ್'ಗೆ ಸಡ್ಡು ಹೊಡೆಯಲು ನಾಳೆಯಿಂದ ಹೆಚ್.ಡಿ.ಕೆ. ಕ್ಯಾಬ್ ರಸ್ತೆಗೆ ಇಳಿಯಲಿದೆ. 'ನಮ್ಮ ಟೈಗರ್' ಹೆಸರಿನ ಕ್ಯಾಬ್'ಗಳು ನಗರದಲ್ಲಿ ನಾಳೆಯಿಂದ ಸಾರ್ವಜನಿಕರಿಗೆ ಮುಕ್ತವಾಗಿ ಸಿಗಲಿದೆ.
ಟೌನ್ ಹಾಲ್ ಸಭಾಂಗಣದಲ್ಲಿ ಅಧಿಕೃತವಾಗಿ 'ನಮ್ಮ ಟೈಗರ್' ಕ್ಯಾಬ್ ಸೇವೆಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಇವತ್ತು ಅಧಿಕೃತವಾಗಿ ಚಾಲನೆ ನೀಡಿದರು. ಸುಮಾರು 10 ಸಾವಿರ ಕ್ಯಾಬ್'ಗಳು ನೊಂದಾಯಿಸಿಕೊಂಡಿದ್ದು, ಬೇರೆ ಟ್ಯಾಕ್ಸಿ ಸೇವೆಗಳಿಗಿಂತ ನಮ್ಮ ಟೈಗರ್ ಕ್ಯಾಬ್ ಸೇವೆ ಕಡಿಮೆ ದರದಲ್ಲಿ ಸಿಗಲಿದೆ. ಇದೇ ವೇಳೆ ಮಾತನಾಡಿದ ಮಾಜಿ ಹೆಚ್.ಡಿ.ದೇವೇಗೌಡ,ನಾನು ಮುಖ್ಯಮಂತ್ರಿ ಹಾಗೂ ಪ್ರಧಾನಿ ಮಂತ್ರಿಯಾಗಿದ್ದಾಗ ಚಾಲಕರಿಗೆ ಸಾಕಷ್ಟು ಯೋಜನೆಗಳನ್ನ ಜಾರಿಗೊಳಿಸಿದ್ದೆ. ಆದರೆ ಇದೀಗ ಕುಮಾರಣ್ಣ ನೇತೃತ್ವದಲ್ಲಿ ಹೆಚ್.ಡಿ.ಕೆ.ಕ್ಯಾಬ್ ಸೇವೆ ಆರಂಭವಾಗಿರೋದು ನಿಜಕ್ಕೂ ಖುಷಿಯಾಗಿದೆ. ಜೊತೆಗೆ ಹೆಚ್.ಡಿ.ಕೆ.ಯುವಕರ ರಕ್ತದಾನ ಸಂಘ ಕೂಡ ಮಾಡಿರೋದು ಒಳ್ಳೆಯ ಕೆಲಸ ಅಂತ ದೇವೇಗೌಡರು ಪ್ರಶಂಸೆ ವ್ಯಕ್ತಪಡಿಸಿದರು. ಈ ವೇಳೆ ನೂರಾರು ಕ್ಯಾಬ್ ಚಾಲಕರು ಕಾರ್ಯಕ್ರಮದಲ್ಲಿ ಭಾಗಿಯಾದರು.
ದಿನದ 24 ಗಂಟೆಯೂ ನಮ್ಮ ಟೈಗರ್ ಕ್ಯಾಬ್ ಸೇವೆ ಲಭ್ಯವಿರಲಿದೆ. ಯಾವುದೇ ಸರ್ವೀಸ್ ಚಾರ್ಜ್ ಇಲ್ಲ, ವಾರದ ಎಲ್ಲಾ ದಿನಗಳಲ್ಲೂ ಸೇವೆ ಇರುತ್ತದೆ. ಚಾಲಕರಿಗೆ ಉಚಿತ ಆರೋಗ್ಯ ಸೇವೆ, ಅಪಘಾತ ಮತ್ತು ಜೀವ ವಿಮಾ ಸೌಲಭ್ಯವಿರುತ್ತದೆ. ಸಿಲಿಕಾನ್ ಸಿಟಿಯಲ್ಲಿ ಸುಮಾರು 10 ಸಾವಿರ ನಮ್ಮ ಟೈಗರ್ ಕ್ಯಾಬ್ ಸಂಚಾರ ಮಾಡಲಿದೆ.
ಮಿನಿ ಕ್ಯಾಬ್ಗೆ ಮೊದಲ 4 ಕಿ.ಮೀ.ಗೆ 69 ರೂ. ನಂತರ ಪ್ರತಿ ಕಿ.ಮೀ.ಗೆ 12.50 ಪೈಸೆ ಇರುತ್ತದೆ. ಮದ್ಯಮ ಹಂತದ ಕ್ಯಾಬ್'ಗೆ ಮೊದಲ 4 ಕಿ.ಮೀ. 79 ರೂ. ನಂತರ ಪ್ರತಿ ಕಿ.ಮೀ.ಗೆ 14.50 ಪೈಸೆ ಇರುತ್ತದೆ. ಎಸ್'ಯೂವಿ ಕ್ಯಾಬ್'ಗೆ ಪ್ರತಿ ಕಿ.ಮೀ. 18 ರೂ ಇರುತ್ತದೆ. ಮುಂಬೈನ ಕಂಪನಿಯೊಂದು ನಮ್ಮ ಟೈಗರ್ ಕ್ಯಾಬ್ ಆ್ಯಪ್ ನಿರ್ವಹಣೆ ಮಾಡಲಿದೆ.
