ಸುರಂಗದಲ್ಲಿ ವೇಗ ಹೆಚ್ಚಿಸಲು ಬಿಎಂಆರ್‌ಸಿಎಲ್‌ ನಿರ್ಧಾರ | ಹಾಲಿ ಪ್ರಯಾಣ ಸಮಯಕ್ಕೆ ಹೋಲಿಸಿದರೆ 5ರಿಂದ 8 ನಿಮಿಷ ಕಡಿಮೆ
ಬೆಂಗಳೂರು: ಬೈಯ್ಯಪ್ಪನಹಳ್ಳಿ-ನಾಯಂಡಹಳ್ಳಿ ನಡುವಿನ ಮೆಟ್ರೋ ರೈಲು ನೇರಳೆ ಮಾರ್ಗದಲ್ಲಿ ಪ್ರಯಾಣದ ಸಮಯ ಇನ್ನು ಮುಂದೆ 33 ನಿಮಿಷಕ್ಕೆ ಇಳಿಕೆಯಾಗಲಿದೆ. 18.1 ಕಿ.ಮೀ. ಉದ್ದದ ಮಾರ್ಗವನ್ನು ನಮ್ಮ ಮೆಟ್ರೊರೈಲು ಕೇವಲ 33 ನಿಮಿಷದಲ್ಲಿ ಕ್ರಮಿಸಲಿದ್ದು, ಹಾಲಿ ಪ್ರಯಾಣ ಸಮಯಕ್ಕೆ ಹೋಲಿಸಿದರೆ 5ರಿಂದ 8 ನಿಮಿಷ ಕಡಿಮೆಯಾಗಲಿದೆ.
ಎಲಿವೇಟೆಡ್ ಹಾಗೂ ಸುರಂಗ ಮಾರ್ಗದಲ್ಲಿ ರೈಲಿನ ವೇಗ ಹೆಚ್ಚಿಸಲು ಬೆಂಗಳೂರು ಮೆಟ್ರೊ ರೈಲು ನಿಗಮ ನಿರ್ಧರಿಸಿದೆ. ಪ್ರಸ್ತುತ ಮೆಟ್ರೊ ಮಾರ್ಗದಲ್ಲಿ ಗಂಟೆಗೆ 80 ಕಿ.ಮೀ ವೇಗದಲ್ಲಿ ಸಂಚರಿಸಬಹುದು. ಇದೇ ಮಾದರಿಯನ್ನು ಎಲ್ಲ ಹಂತದಲ್ಲೂ ವಿನ್ಯಾಸಗೊಳಿಸಲಾಗಿದೆ. ಆದರೆ, ರಿಸರ್ಚ್ ಡಿಸೈನ್ ಮತ್ತು ಸ್ಟ್ಯಾಂಡರ್ಡ್ಸ್ ಆರ್ಗನೈಸೇಷನ್(ಆರ್ಡಿಎಸ್ಒ) ನಿಯಮದಂತೆ ನೇರ ಮಾರ್ಗದಲ್ಲಿ ಗಂಟೆಗೆ ಗರಿಷ್ಠ 67.5 ಕಿ.ಮೀ, ತಿರುವು ಪ್ರದೇಶದಲ್ಲಿ ಗಂಟೆಗೆ 35 ಕಿ.ಮೀ ಹಾಗೂ ನಿಲ್ದಾಣದ ಪ್ರದೇಶದಲ್ಲಿ ಗಂಟೆಗೆ 45 ಕಿ.ಮೀ ವೇಗದಲ್ಲಿ ಸಂಚರಿಸಲು ಸೂಚಿಸಿದೆ.
ಸದ್ಯ ಎಲಿವೇಟೆಡ್ ಮಾರ್ಗದಲ್ಲಿ ಗಂಟೆಗೆ ಸರಾಸರಿ 45 ಕಿ.ಮೀ. ವೇಗದಲ್ಲಿ ಹಾಗೂ ಸುರಂಗ ಮಾರ್ಗದಲ್ಲಿ ಗಂಟೆಗೆ 55ರಿಂದ 60 ಕಿ.ಮೀ. ವೇಗದಲ್ಲಿ ಮೆಟ್ರೊ ರೈಲು ಸಂಚರಿಸಲಿದೆ. ಎಲಿವೇಟೆಡ್ ಮಾರ್ಗದಲ್ಲಿ ಹೆಚ್ಚು ತಿರುವುಗಳಿರುವುದರಿಂದ ಗರಿಷ್ಠ 67.5 ಕಿ.ಮೀ. ವೇಗ ಮಿತಿಯಲ್ಲಿ ಸಂಚರಿಸಲು ಅವಕಾಶವಿದ್ದರೂ 45 ಕಿ.ಮೀ. ವೇಗದಲ್ಲಿ ರೈಲು ಸಂಚರಿಸುತ್ತಿದೆ. ಒಟ್ಟಾರೆ ಕೆಲವೆಡೆ ಗಂಟೆಗೆ ಸರಾಸರಿ 10 ಕಿ.ಮೀ. ವೇಗ ಹೆಚ್ಚಾಗಲಿರುವುದರಿಂದ ಶೀಘ್ರದಲ್ಲೇ ಬೈಯ್ಯಪ್ಪನಹಳ್ಳಿ-ನಾಯಂಡಹಳ್ಳಿ ನಡುವೆ ರೈಲಿನ ಪ್ರಯಾಣ ಅವಧಿ ಒಟ್ಟಾರೆ ಇಳಿಕೆಯಾಗಲಿದೆ.
ಪೂರ್ವ-ಪಶ್ಚಿಮ ಮೆಟ್ರೊ ಮಾರ್ಗದಲ್ಲಿ ಅಂದಾಜು 4.80 ಕಿ.ಮೀ. ಸುರಂಗ ಮಾರ್ಗವಿದೆ. ಮೆಟ್ರೊ ಸುರಂಗ ಮಾರ್ಗಗಳು ನೇರವಾಗಿದ್ದು, ಹೆಚ್ಚು ತಿರುವುಗಳಿರುವುದಿಲ್ಲ. ಈ ಕಾರಣದಿಂದಾಗಿ ಸುರಂಗ ಮಾರ್ಗದಲ್ಲಿ ಮೆಟ್ರೊ ರೈಲು ಸಂಚರಿಸುತ್ತದೆ. ಸುರಂಗಕ್ಕೆ ಪ್ರವೇಶಿಸುವಾಗ ಮಾತ್ರ ವೇಗ ತಗ್ಗಿಸಲಾಗುತ್ತದೆ. ಸದ್ಯ ಸುರಂಗದಲ್ಲಿ ಗಂಟೆಗೆ 55ರಿಂದ 60 ಕಿ.ಮೀ ವೇಗದಲ್ಲಿ ಮೆಟ್ರೊ ಸಂಚರಿಸುತ್ತಿದೆ. ನಮ್ಮ ಮೆಟ್ರೊ ಮಾರ್ಗದಲ್ಲಿ ಕಿ.ಮೀ.ಗೆ ಒಂದರಂತೆ ನಿಲ್ದಾಣಗಳಿರುವ ಕಾರಣ ಇದಕ್ಕಿಂತ ವೇಗ ಹೆಚ್ಚಳ ಮಾಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೆಟ್ರೋ ಮಾರ್ಗದಲ್ಲಿ ಗರಿಷ್ಠ 80 ಕಿ.ಮೀ ವೇಗದಲ್ಲಿ ಸಂಚರಿಸಬಹುದು. ನಾಯಂಡಹಳ್ಳಿ-ಬೈಯ್ಯಪ್ಪನಹಳ್ಳಿ ಮಾರ್ಗದ ಕೆಲ ಪ್ರದೇಶದಲ್ಲಿ ರೈಲಿನ ವೇಗವನ್ನು ಹೆಚ್ಚಿಸಲಾಗುತ್ತದೆ. 45 ಕಿ.ಮೀ ವೇಗದಲ್ಲಿ ಸಂಚರಿಸುತ್ತಿದ್ದ ಮೆಟ್ರೊ ಇನ್ನು ಮುಂದೆ 55 ಕಿ.ಮೀ ವೇಗದಲ್ಲಿ ಸಂಚರಿಸಲಿದೆ.
- ಪ್ರದೀಪ್ ಸಿಂಗ್ ಖರೋಲ ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ
(epaper.kannadaprabha.in)
