'ನಮ್ಮ ಬೆಂಗಳೂರು ಪ್ರಶಸ್ತಿ’ ನಾಮನಿರ್ದೇಶನಕ್ಕೆ ಪ್ರಕ್ರಿಯೆ ಆರಂಭ

news | Saturday, November 4th, 2017
Suvarna Web Desk
Highlights

ನವೆಂಬರ್ 30ರ ಒಳಗೆ ನಾಮನಿರ್ದೇಶನ ಮಾಡಬೇಕಾಗಿದ್ದು, ಮಾರ್ಚ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ನಮ್ಮ ಬೆಂಗಳೂರು ಪ್ರತಿಷ್ಠಾನ ಶುಕ್ರವಾರ ಘೋಷಿಸಿದೆ.

ಬೆಂಗಳೂರು(ನ.04): ನಮ್ಮ ಬೆಂಗಳೂರು ಪ್ರತಿಷ್ಠಾನದಿಂದ ಪ್ರತಿ ವರ್ಷ ನೀಡುವ ಪ್ರತಿಷ್ಠಿತ ‘ನಮ್ಮ ಬೆಂಗಳೂರು ಪ್ರಶಸ್ತಿ’ 9ನೇ ಆವೃತ್ತಿಯ ಪ್ರಶಸ್ತಿಗಳಿಗೆ ನಾಮ ನಿರ್ದೇಶನ ಪ್ರಕ್ರಿಯೆ ಆರಂಭಗೊಂಡಿದ್ದು, ಈ ತಿಂಗಳ ಅಂತ್ಯದವರೆಗೆ ನಗರದಲ್ಲಿರುವ ಅಸಾಧಾರಣ ವ್ಯಕ್ತಿಗಳನ್ನು ಪ್ರಶಸ್ತಿಗಳಿಗೆ ನಾಮ ನಿರ್ದೇಶನ ಮಾಡಲು ನಾಗರಿಕರಿಗೆ ಅವಕಾಶ ಮಾಡಿಕೊಡಲಾಗಿದೆ.

‘ವರ್ಷದ ಸರ್ಕಾರಿ ಅಧಿಕಾರಿ’, ‘ವರ್ಷದ ನಾಗರಿಕ’, ‘ವರ್ಷದ ಉದಯೋನ್ಮುಖ ತಾರೆ’, ‘ವರ್ಷದ ಸಾಮಾಜಿಕ ಉದ್ಯಮಿ’ ಹಾಗೂ ‘ವರ್ಷದ ಪತ್ರಕರ್ತ’ ಹಾಗೂ 2017ನೇ ಸಾಲಿನ ನಮ್ಮ ಬೆಂಗಳೂರಿಗ ಪ್ರಶಸ್ತಿಗಳಿಗೆ ಸೂಕ್ತ ವ್ಯಕ್ತಿಯನ್ನು ನಾಮನಿರ್ದೇಶನ ಮಾಡಲು ಅವಕಾಶ ನೀಡಲಾಗಿದೆ.

ನವೆಂಬರ್ 30ರ ಒಳಗೆ ನಾಮನಿರ್ದೇಶನ ಮಾಡಬೇಕಾಗಿದ್ದು, ಮಾರ್ಚ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ನಮ್ಮ ಬೆಂಗಳೂರು ಪ್ರತಿಷ್ಠಾನ ಶುಕ್ರವಾರ ಘೋಷಿಸಿದೆ. ಶುಕ್ರವಾರ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಟಿ ಶ್ರದ್ಧಾ ಶ್ರೀನಾಥ್ ಅವರು ಸಾಧಕರ ಹೆಸರನ್ನು ನಾಮ ನಿರ್ದೇಶನ ನಮೂನೆಯಲ್ಲಿ ಸೂಚಿಸಿ, ಪೆಟ್ಟಿಗೆಗೆ ಹಾಕುವ ಮೂಲಕ ನಾಮನಿರ್ದೇಶನ ಪ್ರಕ್ರಿಯೆಗೆ ಚಾಲನೆ ನೀಡಿದರು. ಈ ಬಗ್ಗೆ ಮಾಹಿತಿ ಹಂಚಿಕೊಂಡ ನಮ್ಮ ಬೆಂಗಳೂರು ಪ್ರತಿಷ್ಠಾನದ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಧರ್ ಪಬ್ಬಿಸೆಟ್ಟಿ, ನ.30ರವರೆಗೆ ನಾಮ ನಿರ್ದೇಶನ ಸ್ವೀಕರಿಸಲಿದ್ದು ನಾಮ ನಿರ್ದೇಶನಗಳನ್ನು ಡಿಸೆಂಬರ್ ನಲ್ಲಿ ಪರಿಶೀಲನೆ ನಡೆಸಲಾಗುವುದು. ವಿವಿಧ ಕ್ಷೇತ್ರಗಳ 23 ಮಂದಿ ಸಾಧಕರನ್ನು ಒಳಗೊಂಡ ಆಯ್ಕೆ ಸಮಿತಿಯು ಪ್ರಶಸ್ತಿಗೆ ಸೂಕ್ತ ಸಾಧಕರನ್ನು ಆಯ್ಕೆ ಮಾಡಲಿದೆ.

Click here

ಪ್ರಶಸ್ತಿ ಆಯ್ಕೆ ಮಾನದಂಡಗಳಿಗೆ ಅನುಗುಣವಾಗಿ ತೀರ್ಪುಗಾರರ ಸಮಿತಿಯು ಚರ್ಚೆ ಮಾಡಿ ಪ್ರತಿ ವಿಭಾಗದಲ್ಲಿ 5-6 ಮಂದಿಯನ್ನು ಅಂತಿಮಗೊಳಿಸು ತ್ತದೆ. ಈ ಹಂತದಲ್ಲಿ ಆಯ್ಕೆಯಾದವರನ್ನು ತೀರ್ಪುಗಾರರ ಸಮಿತಿಯ ಸದಸ್ಯರೊಡನೆ ವೈಯಕ್ತಿಕವಾಗಿ ಚರ್ಚೆ ನಡೆಸಲು ಆಹ್ವಾನಿಸಲಾಗುವುದು. ಇದರ ನಂತರ ಅಂತಿಮ ಪ್ರಶಸ್ತಿ ವಿಜೇತರನ್ನು ಆಯ್ಕೆ ಮಾಡಲಾಗುವುದು. 2018ರ ಮಾರ್ಚ್ 24ರಂದು ವಿಜೇತರ ಹೆಸರನ್ನು ಪ್ರಕಟಿಸಿ ವರ್ಣರಂಜಿತ ಕಾರ್ಯ ಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು' ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಕವಿ ಪ್ರೊ.ಜಿ.ಎಸ್. ಸಿದ್ದಲಿಂಗಯ್ಯ, ಕ್ಯಾನ್ಸರ್ ತಜ್ಞ ಡಾ. ವಿಶಾಲ್ ರಾವ್, ಲೇಖಕರಾದ ಉಷಾ ರಾಜಗೋಪಾಲನ್, ಸಿಟಿಜನ್ ಆ್ಯಕ್ಷನ್ ಫೋರಂ ಸಂಸ್ಥಾಪಕ ಅಧ್ಯಕ್ಷ ಎನ್.ಎಸ್. ಮುಕುಂದ ಮತ್ತಿತರರು ಹಾಜರಿದ್ದರು.

ನಾಮ ನಿರ್ದೇಶನ ಮಾಡಬಯಸುವವರು ಪ್ರತಿಷ್ಠಾನದ ವೆಬ್‌ಸೈಟ್ www.namma-bengaluru.org/ ಮೂಲಕ ಆನ್‌ಲೈನ್‌ನಲ್ಲಿ ನಾಮ ನಿರ್ದೇಶನ ಮಾಡಬಹುದು. ಅಥವಾ nbf@namma-bengaluru.org ಇಲ್ಲಿಗೆ ಇ-ಮೇಲ್ ಕೂಡ ಮಾಡಬಹುದು. ಬೆಂಗಳೂರು ಒನ್ ಕೇಂದ್ರದಲ್ಲೂ ಈ ಅರ್ಜಿಗಳು ದೊರೆಯಲಿವೆ. ಒಬ್ಬರು ಪ್ರತ್ಯೇಕ ಅರ್ಜಿಗಳಲ್ಲಿ ಬೇರೆ ಬೇರೆ ಸಾಧಕರ ಹೆಸರುಗಳನ್ನೂ ಪ್ರಶಸ್ತಿಗಳಿಗೆ ನಾಮನಿರ್ದೇಶನ ಮಾಡಲು ಅವಕಾಶ ಇದೆ. ಮಾಹಿತಿಗೆ ದೂ: 080- 48528057ಗೆ ಸಂಪರ್ಕಿಸಬಹುದು ಎಂದು ಪ್ರತಿಷ್ಠಾನ ತಿಳಿಸಿದೆ.

Comments 0
Add Comment

  Related Posts

  Shreeramulu and Tippeswamy supporters clash

  video | Friday, April 13th, 2018

  Election Encounter With Eshwarappa

  video | Thursday, April 12th, 2018

  Election Encounter With Eshwarappa

  video | Thursday, April 12th, 2018

  Karnataka Elections India Today Pre Poll Survey Part-3

  video | Friday, April 13th, 2018
  Suvarna Web Desk