ಬೆಂಗಳೂರು :  ಉದ್ಯಮಿಯೊಬ್ಬರ ಪುತ್ರನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪದಲ್ಲಿ ಜಾಮೀನು ಪಡೆದಿರುವ ಕಾಂಗ್ರೆಸ್‌ ಶಾಸಕ ಎನ್‌.ಎ. ಹ್ಯಾರಿಸ್‌ ಅವರ ಪುತ್ರ ಮೊಹಮ್ಮದ್‌ ನಲಪಾಡ್‌, ಮೆಕ್ಕಾ ಯಾತ್ರೆಗೆ ತೆರಳಲು ಅನುಮತಿ ಕೋರಿ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.

ಈ ಸಂಬಂಧ ನಲಪಾಡ್‌ ಸಲ್ಲಿಸಿದ್ದ ಮಧ್ಯಂತರ ಅರ್ಜಿ ನ್ಯಾಯಮೂರ್ತಿ ಕೆ.ಎಸ್‌. ಮುದಗಲ್‌ ಅವರಿದ್ದ ರಜಾ ಕಾಲದ ಏಕಸದಸ್ಯ ನ್ಯಾಯಪೀಠದ ಮುಂದೆ ಶುಕ್ರವಾರ ವಿಚಾರಣೆಗೆ ಬಂದಿತ್ತು. ದಿನದ ಕಲಾಪ ಅವಧಿ ಮುಗಿದ ಕಾರಣ ನ್ಯಾಯಪೀಠ ವಿಚಾರಣೆಯನ್ನು ಮೇ 8ಕ್ಕೆ ಮುಂದೂಡಿತು.

ಇದಕ್ಕೂ ಮುನ್ನ ನಲಪಾಡ್‌ ಪರ ಹಿರಿಯ ವಕೀಲ ಸಿ.ವಿ. ನಾಗೇಶ್‌ ಹಾಜರಾಗಿ, ಪ್ರಕರಣ ಸಂಬಂಧ ಅರ್ಜಿದಾರರಿಗೆ ಹೈಕೋರ್ಟ್‌ ಈ ಹಿಂದೆ ಜಾಮೀನು ಮಂಜೂರು ಮಾಡಿದೆ. ಆ ವೇಳೆ ವಿಚಾರಣಾ ನ್ಯಾಯಾಲಯದ ಪೂರ್ವಾನುಮತಿ ಪಡೆಯದೇ ಆ ನ್ಯಾಯಾಲಯದ ವ್ಯಾಪ್ತಿ ಬಿಟ್ಟು ಹೊರ ಹೋಗುವಂತಿಲ್ಲ ಎಂದು ಷರತ್ತು ವಿಧಿಸಲಾಗಿದೆ. ಸದ್ಯ ಅರ್ಜಿದಾರರು ಮೆಕ್ಕಾ ಯಾತ್ರೆಗೆ ತೆರಳಲು ಬಯಸಿದ್ದಾರೆ. ಅದಕ್ಕೆ ಅನುಮತಿ ನೀಡಿ ಜಾಮೀನು ಷರತ್ತು ಸಡಿಲಗೊಳಿಸಬೇಕು ಎಂದು ಕೋರಿದರು.

ಈ ವೇಳೆ ಕೋರ್ಟ್‌ನಲ್ಲಿದ್ದ ಎಸ್‌ಪಿಪಿ ಶ್ಯಾಮ್‌ಸುಂದರ್‌, ಪವಿತ್ರ ಮೆಕ್ಕಾ ಯಾತ್ರೆಗೆ ತೆರಳುತ್ತಿರುವ ಕಾರಣ ಜಾಮೀನು ಷರತ್ತು ಸಡಿಲಿಸುವುದಕ್ಕೆ ತಮ್ಮಿಂದ ಯಾವುದೇ ಆಕ್ಷೇಪಣೆ ಇಲ್ಲ. ಆದರೆ, ಜಾಮೀನು ಷರತ್ತು ಸಡಿಲಿಸುವ ವಿಚಾರವನ್ನು ನ್ಯಾಯಾಲಯದ ವಿವೇಚನೆಗೆ ಬಿಡಲಾಗುವುದು ಎಂದು ತಿಳಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಅರ್ಜಿದಾರರು ಯಾವಾಗ ಮೆಕ್ಕಾ ಯಾತ್ರೆಗೆ ತೆರಳಬೇಕಿದೆ ಎಂದು ಸಿ.ವಿ.ನಾಗೇಶ್‌ ಅವರನ್ನು ಕೇಳಿತು. ಮೇ 4ಕ್ಕೆ ಎಂದು ಅವರು ಉತ್ತರಿಸಿದರು. ಆಗ ನ್ಯಾಯಪೀಠ ಅರ್ಜಿಯನ್ನು ಪರಿಶೀಲಿಸಿದಾಗ, ಮೇ 2ರಂದು ತೆರಳುತ್ತಿರುವುದಾಗಿ ನಮೂದಿಸಲಾಗಿತ್ತು. ಅದಕ್ಕೆ ಸ್ವಲ್ಪ ಬೇಸರಗೊಂಡ ನ್ಯಾಯಪೀಠ, ನೀವು ಇಲ್ಲಿ ಮೇ 4 ಎಂದು ಹೇಳುತ್ತಿದ್ದೀರಿ. ಆದರೆ, ಅರ್ಜಿಯಲ್ಲಿ ಮೇ 2ರಂದು ಹೋಗಲಾಗುತ್ತಿದೆ ಎಂಬುದಾಗಿ ತಿಳಿಸಲಾಗಿದೆ ಎಂದು ನಾಗೇಶ್‌ ಅವರನ್ನು ಕೇಳಿತು. ಬಳಿಕ ದಿನದ ಕಲಾಪ ಅವಧಿ ಮುಗಿದಿದ್ದು, ಮುಂದಿನ ವಿಚಾರಣೆಯಲ್ಲಿ ಅರ್ಜಿಯನ್ನು ಪರಿಶೀಲಿಸುವುದಾಗಿ ತಿಳಿಸಿದ ನ್ಯಾಯಪೀಠ, ವಿಚಾರಣೆಯನ್ನು ಮೇ 8ಕ್ಕೆ ಮುಂದೂಡಿತು.