Asianet Suvarna News Asianet Suvarna News

ಕರ್ನಾಟಕದಲ್ಲಿ ಸುಹಾನಾ, ಅಸ್ಸಾಮ್'ನಲ್ಲಿ ನಹೀದ್; ಧರ್ಮಾಂಧರ ಕೆಂಗಣ್ಣಿಗೆ ಗುರಿಯಾದ ಪ್ರತಿಭೆಗಳು

ಕರ್ನಾಟಕದಲ್ಲಿ ಗಾಯಕಿ ಸುಹಾನಾ ಸಯ್ಯಾದ್ ಎದುರಿಸುತ್ತಿರುವ ಸಮಸ್ಯೆ ಹಾಗೂ ಕಿರುಕುಳವನ್ನು ಅಸ್ಸಾಂನಲ್ಲಿ ಉದಯನೋನ್ಮುಖ ಗಾಯಕಿಯೊಬ್ಬಳೂ ಎದುರಿಸುತ್ತಿದ್ದಾಳೆ.   ಸಾರ್ವಜನಿಕವಾಗಿ ಹಾಡದಂತೆ ಆಕೆಗೆ ಅಸ್ಸಾಮಿನ 42 ಮೌಲ್ವಿಗಳು ಫತ್ವಾ ಹೊರಡಿಸಿದ್ದಾರೆ. ಯಾಕಂತೀರಾ..? ಈ ಸ್ಟೋರಿ ನೋಡಿ...

nahid afrin faces fatwas by moulvis in assam

ಬೆಂಗಳೂರು: ಸುಹಾನಾ ಸಯ್ಯದ್... ಕನ್ನಡದ  ಖಾಸಗಿ ಚಾನೆಲ್ ವೊಂದರ ರಿಯಾಲಿಟಿ ಶೋ‌ನಲ್ಲಿ, ಹಿಂದೂ ದೇವರ ಹಾಡು ಹಾಡಿದ್ದಕ್ಕೆ ಈಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆ ಹಾಕಲಾಗಿತ್ತು. ಇದೀಗ  ರಾಜ್ಯದಲ್ಲಿ ಸುಹಾನಾ ಎದುರಿಸುತ್ತಿರುವ ಸಮಸ್ಯೆಯನ್ನೇ ಅಸ್ಸಾಂನ ಉದಯನ್ಮುಖ ಗಾಯಕಿ ನಹೀದ್ ಅಫ್ರಿನ್ ಎದುರಿಸುತ್ತಿದ್ದಾಳೆ.

ಸಾರ್ವಜನಿಕವಾಗಿ ಹಾಡದಂತೆ ಫತ್ವಾ
ಭಯೋತ್ಪಾದನಾ ಕೃತ್ಯಗಳ ವಿರುದ್ಧ ಜನಜಾಗೃತಿ ಮೂಡಿಸುವ ಹಾಡುಗಳನ್ನು ಹಾಡುತ್ತಿದ್ದ 16 ವರ್ಷದ ಉದಯೋನ್ಮುಖ ಗಾಯಕಿ ನಹೀದ್ ಅಫ್ರಿನ್ ವಿರುದ್ಧ ಅಸ್ಸಾಮಿನ 42 ಮೌಲ್ವಿಗಳು ಫತ್ವಾ ಹೊರಡಿಸಿದ್ದಾರೆ.  ಖಾಸಗಿ ಟಿವಿ ಚಾನೆಲ್'ವೊಂದು 2015ರಲ್ಲಿ ನಡೆಸಿದ್ದ ರಿಯಾಲಿಟಿ ಶೋನಲ್ಲಿ  ರನ್ನರ್ ಅಪ್ ಆಗಿದ್ದ ನಹೀದ್ ಅಫ್ರಿನ್, ಇತ್ತೀಚೆಗಷ್ಟೆ ಭಯೋತ್ಪಾದಕ ಸಂಘಟನೆಗಳು ನಡೆಸುತ್ತಿರುವ ಉಗ್ರವಾದದ ವಿರುದ್ಧದ ಗೀತೆಗಳನ್ನು ಹಾಡಿದ್ದರು.  ಇದರಿಂದ ಕೆಂಡಾಮಂಡಲವಾಗಿರುವ ಅಸ್ಸಾಮಿನ 46 ಮೌಲ್ವಿಗಳು, ಸಾರ್ವಜನಿಕವಾಗಿ ಸಂಗೀತ ಕಾರ್ಯಕ್ರಮ ನೀಡದಂತೆ ಫತ್ವಾ ಹೊರಡಿಸಿದ್ದಾರೆ.

ಅಸ್ಸಾಂನ ಉದಲಿ ಸೋನಾಯ್‌ ಬೀಬಿ ಕಾಲೇಜಿನಲ್ಲಿ ಮಾರ್ಚ್ 25ರಂದು ನಹೀದ್‌ ಗಾಯನ ಕಾರ್ಯಕ್ರಮ ನಿಗದಿಯಾಗಿದೆ. ಈ ಕಾರ್ಯಕ್ರಮ ಶರಿಯಾದ ಕಟ್ಟುಪಾಡುಗಳಿಗೆ ವಿರುದ್ಧವಾದುದು ಎಂಬ ಕಾರಣಕ್ಕೆ ಆ ಕಾರ್ಯಕ್ರಮದಲ್ಲಿ ಹಾಡದಂತೆ ಆಪ್ರೀನ್'ಗೆ  ಫತ್ವಾ ಹೊರಡಿಸಲಾಗಿದೆ.

ಆದ್ರೆ ಫತ್ವಾಕ್ಕೆ ಹೆದರದ ನಹೀದ್ ಅಫ್ರಿನ್, ತಾನು ಕೊನೆಯುಸಿರಿರುವವರೆಗೆ ಹಾಡು ಹಾಡಿಯೇ ತೀರುತ್ತೇನೆ ಎಂದು ಪಣತೊಟ್ಟಿದ್ದಾಳೆ. ಇನ್ನೊಂದೆಡೆ, ಬೆದರಿಕೆಗಳಿಂದ ಹಿಂಜರಿಯದೆ ಕಾರ್ಯಕ್ರಮಕ್ಕೆ ಹೋಗುವಂತೆ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ್ ಸೊನೊವಾಲ್ ಧೈರ್ಯ ಹೇಳಿದ್ದಾರೆ.

- ಶ್ರೀಕಂಠ ಎಚ್.ಡಿ.ಕೋಟೆ, ನ್ಯೂಸ್ ಬ್ಯುರೋ, ಸುವರ್ಣನ್ಯೂಸ್

Follow Us:
Download App:
  • android
  • ios