ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿ ನಾಗತಿಹಳ್ಳಿ ಚಂದ್ರಶೇಖರ್
- ಕರ್ನಾಟಕ ಚಲನಚಿತ್ರ ಅಕಾಡೆಮೆ ಅಧ್ಯಕ್ಷರಾಗಿ ನಾಗತಿಹಳ್ಳಿ ಚಂದ್ರಶೇಖರ್
- ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ರಾಜೇಂದ್ರ ಸಿಂಗ್ ಬಾಬು ಅಧ್ಯಕ್ಷರಾಗಿದ್ದರು
- 13 ಚಿತ್ರಗಳು, 6 ಧಾರಾವಾಹಿಗಳ ನಿರ್ದೇಶನ
- 10 ಕ್ಕೂ ಹೆಚ್ಚು ಕೃತಿಗಳ ರಚನೆ
ಬೆಂಗಳೂರು[ಜೂ.20]: ಲೇಖಕ, ಹಿರಿಯ ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರನ್ನು ಕರ್ನಾಟಕ ಚಲನಚಿತ್ರ ಅಕಾಡೆಮೆ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಲೇಖಕ, ಚಿತ್ರನಿರ್ದೇಶಕರಾಗಿರುವ ನಾಗತಿಹಳ್ಳಿ ಚಂದ್ರಶೇಖರ್ ಕನ್ನಡ ಪ್ರಾಧ್ಯಾಪಕರಾಗಿ ವೃತ್ತಿ ಆರಂಭಿಸಿ ಚಿತ್ರ ನಿರ್ದೇಶನದತ್ತ ತಮ್ಮ ಕಾಯಕವನ್ನು ಬದಲಿಸಿಕೊಂಡರು. ಉಂಡೂ ಹೋದ ಕೊಂಡೂ ಹೋದ, ಅಮೆರಿಕಾ ಅಮೆರಿಕಾ, ಬಾನಲ್ಲೆ ಮಧುಚಂದ್ರಕೆ, ಹೂಮಳೆ, ಸೂಪರ್ ಸ್ಟಾರ್, ಅಮೃತಧಾರೆ ಸೇರಿದಂತೆ 13 ಚಿತ್ರಗಳು ಹಾಗೂ ಕಿರುತೆರೆಯಲ್ಲಿ 6 ಧಾರಾವಾಹಿಗಳನ್ನು ನಿರ್ದೇಶಿಸಿದ್ದಾರೆ. ಇತ್ತೀಚಿಗೆ ಕೆಲವು ವರ್ಷಗಳಿಂದ ನಾಗತಿಹಳ್ಳಿ ಸಿನಿಮಾ ಶಾಲೆ ಮೂಲಕ ಸಿನಿಮಾ ರಂಗದಲ್ಲಿ ಆಸಕ್ತಿಯಿರುವ ವಿದ್ಯಾರ್ಥಿಗಳಿಗೆ ಚಿತ್ರರಂಗದ ಬಗ್ಗೆ ಪಾಠ ಹೇಳಿ ಕೊಡುತ್ತಿದ್ದಾರೆ.
10ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಇವರ 6 ಸಿನಿಮಾಗಳಿಗೆ ವಿವಿಧ ರಾಜ್ಯ ಪ್ರಶಸ್ತಿಗಳು ಸಂದಿವೆ. ಜೊತೆಗೆ 2005ರಲ್ಲಿ ಮೈಸೂರು ವಿವಿಯ ಗೌರವ ಡಾಕ್ಟರೇಟ್, 2015ರಲ್ಲಿ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಲಭಿಸಿದೆ. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ರಾಜೇಂದ್ರ ಸಿಂಗ್ ಬಾಬು ಅಧ್ಯಕ್ಷರಾಗಿದ್ದರು. ಬಾಬು ಅವರು ರಾಜೀನಾಮೆ ನೀಡಿದ್ದರಿಂದ ಸ್ಥಾನ ತೆರವಾಗಿತ್ತು.