ರಾಜ್ಯಪಾಲ ಪದ್ಮನಾಭ ಆಚಾರ್ಯ ಅವರು ಲೀಝಿಟ್ಸು ಅವರಿಗೆ ಸರ್ಕಾರ ರಚನೆಗೆ ಆಹ್ವಾನಿಸಿದ್ದರು.
ಕೊಹಿಮಾ(ಫೆ.20): ನಾಗಾಲ್ಯಾಂಡ್'ನಲ್ಲಿನ ಕೆಲ ದಿನಗಳ ರಾಜಕೀಯ ದೊಂಬರಾಟ ಕೊನೆಗೊಂಡಿದ್ದು, ನಾಗಾ ಪೀಪಲ್ಸ್ ಫ್ರಂಟ್ ಅಧ್ಯಕ್ಷ ಶುಹ್ರೋಝೆಲಿ ಲೀಝಿಟ್ಸು (81) ಅವರು ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಫೆ.22ರಂದು ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.
60 ಸದಸ್ಯಬಲದ ನಾಗಾಲ್ಯಾಂಡ್ ವಿಧಾನಸಭೆಯಲ್ಲಿ ಡೆಮಾಕ್ರೆಟಿಕ್ ಅಲಯನ್ಸ್ ಆಫ್ ನಾಗಾಲ್ಯಾಂಡ್ (ಡಿಎಎನ್) ರಂಗದ 59 ಶಾಸಕರು ಲೀಝಿಟ್ಸು ಅವರಿಗೆ ಬೆಂಬಲ ವ್ಯಕ್ತಪಡಿಸುವುದರೊಂದಿಗೆ ಅವರ ಸಿಎಂ ಹಾದಿ ಸುಗಮವಾಯಿತು. ಬಳಿಕ ರಾಜ್ಯಪಾಲ ಪದ್ಮನಾಭ ಆಚಾರ್ಯ ಅವರು ಲೀಝಿಟ್ಸು ಅವರಿಗೆ ಸರ್ಕಾರ ರಚನೆಗೆ ಆಹ್ವಾನಿಸಿದ್ದರು.
ಬಿಜೆಪಿ, ನಾಗಾ ಫ್ರಂಟ್, ಪಕ್ಷೇತರರು ಸೇರಿಕೊಂಡು ‘ಡಿಎಎನ್’ ರಚಿಸಿಕೊಂಡಿದ್ದಾರೆ. ಬಿಜೆಪಿಗೆ ಆಪ್ತನಾಗಿರುವ ಮಾಜಿ ಸಿಎಂ, ನಾಗಾ ಫ್ರಂಟ್ ಸಂಸದ ನೆಫ್ಯೂ ರಿಯೋ ಸಿಎಂ ಆಗಬಹುದು ಎನ್ನಲಾಗಿತ್ತಾದರೂ ಅಂತಿಮ ಕ್ಷಣದಲ್ಲಿ ಅವರು ಹಿಂದೆ ಸರಿದರು.
ರಾಜ್ಯದಲ್ಲಿ ಇತ್ತೀಚೆಗೆ ಸಂಭವಿಸಿದ ಹಿಂಸಾಚಾರದ ಕಾರಣ ಶಾಸಕರು ಬಂಡೆದ್ದಿದ್ದು, ಸಿಎಂ ಹುದ್ದೆಗೆ ಟಿ.ಆರ್. ಝೆಲಿಯಾಂಗ್ ಭಾನುವಾರವಷ್ಟೇ ರಾಜೀನಾಮೆ ನೀಡಿದ್ದರು.
