ನಾನು ಗೌರಿ ಎಂದು ಹೇಳುವ ಸಾವಿರಾರು ಮಂದಿ, ಮೆಜೆಸ್ಟಿಕ್ ರೈಲು ನಿಲ್ದಾಣದಿಂದ ಮೆರವಣಿಗೆ ಹೊರಟು, ಫ್ರೀಡಂ ಪಾರ್ಕ್ ಹಿಂಭಾಗದ ಕಾಳಿದಾಸ ರಸ್ತೆಯ ಸೆಂಟ್ರಲ್ ಕಾಲೇಜು ಮೈದಾನದಲ್ಲಿ ಸಮಾವೇಶಗೊಳ್ಳಲಿದ್ದಾರೆ.

ಬೆಂಗಳೂರು(ಸೆ.12): ಪ್ರಗತಿ ಪರ ಚಿಂತಕಿ, ವಿಚಾರವಾದಿ ಗೌರಿ ಲಂಕೇಶ್ ಹತ್ಯೆಗೆ ದೇಶ, ವಿದೇಶಗಳಿಂದಲೂ ಖಂಡನೆ ವ್ಯಕ್ತವಾಗುತ್ತಿದೆ. ಹಂತಕರ ವಿರುದ್ಧ ಬೃಹತ್ ಜನಾಂದೋಲನಕ್ಕೆ ಇಂದು ಪ್ರಗತಿಪರರು ಸಜ್ಜಾಗಿದ್ದಾರೆ.

ನಾನು ಗೌರಿ ಎಂದು ಹೇಳುವ ಮೂಲಕ ‘ಅದೆಷ್ಟು ಮಂದಿಯನ್ನ ನೀವು ಕೊಲ್ಲಲು ಸಾಧ್ಯ’ ಎಂಬ ಪ್ರಶ್ನೆಯನ್ನ ಹಂತಕರ ಮುಂದಿಡಲಿದ್ದಾರೆ. ಈ ಮೂಲಕ ಗೌರಿ ಲಂಕೇಶ್ ಅವರ ವ್ಯಕ್ತಿತ್ವ, ವಿಚಾರ ಧಾರೆಯ ಪರಂಪರೆಯನ್ನ ನಾಶ ಮಾಡಲು ಸಾಧ್ಯವೇ ಇಲ್ಲಾ ಎಂಬ ಸಂದೇಶ ರವಾನಿಸಲಿದ್ದಾರೆ. ಗೌರಿ ಲಂಕೇಶ್ ಹತ್ಯೆ ವಿರೋಧಿ ಹೋರಾಟ ವೇದಿಕೆ ಇವತ್ತು ಬೆಂಗಳೂರಿನಲ್ಲಿ ಪ್ರತಿರೋಧ ಸಮಾವೇಶ ಹಮ್ಮಿಕೊಂಡಿದೆ.

ನಾನು ಗೌರಿ ಎಂದು ಹೇಳುವ ಸಾವಿರಾರು ಮಂದಿ, ಮೆಜೆಸ್ಟಿಕ್ ರೈಲು ನಿಲ್ದಾಣದಿಂದ ಮೆರವಣಿಗೆ ಹೊರಟು, ಫ್ರೀಡಂ ಪಾರ್ಕ್ ಹಿಂಭಾಗದ ಕಾಳಿದಾಸ ರಸ್ತೆಯ ಸೆಂಟ್ರಲ್ ಕಾಲೇಜು ಮೈದಾನದಲ್ಲಿ ಸಮಾವೇಶಗೊಳ್ಳಲಿದ್ದಾರೆ. ಸಾಹಿತಿಗಳು, ಬರಹಗಾರರು, ಪತ್ರಕರ್ತರು, ಪ್ರಗತಿಪರ ಚಿಂತಕರು, ವಿಚಾರವಾದಿಗಳು, ಸಮಾನ ಮನಸ್ಕರು, ಒಡನಾಡಿಗಳು, ಚಲನಚಿತ್ರ ನಟ-ನಿರ್ದೇಶಕರು, ಹೋರಾಟಗಾರರು ಭಾಗಿಯಾಗಲಿದ್ದಾರೆ.

‘ನಾನೂ ಗೌರಿ, ನಾವೆಲ್ಲಾ ಗೌರಿ’ ಎಂದು ಹೇಳುವ ಮೂಲಕ ವಿಚಾರವಾದಿಗಳ ಹತ್ಯಾ ಸರಣಿಯ ವಿರುದ್ಧ ಧ್ವನಿ ಎತ್ತಲಿದ್ದು, ಕೊಲೆಗಡುಕ ಸಂಸ್ಕೃತಿಯನ್ನ ಒಕ್ಕೊರಲಿನಿಂದ ವಿರೋಧಿಸಲಿದ್ದಾರೆ. ವ್ಯಕ್ತಿ ಹತ್ಯೆಯೊಂದಿಗೆ ಅವರ ವಿಚಾರಗಳನ್ನ ಕೊಲ್ಲಲು ಸಾಧ್ಯವಿಲ್ಲ. ಬದಲಿಗೆ ಅವರ ಸೈದ್ಧಾಂತಿಕ ವಿಚಾರಗಳನ್ನ ಮುಂದುವರೆಸಿಕೊಂಡು ಹೋಗುವ ದೊಡ್ಡ ಪರಂಪರೆ ಮತ್ತಷ್ಟು ಗಟ್ಟಿಗೊಳ್ಳಲಿದೆ ಎಂಬ ಸಂದೇಶ ನೀಡಲಿದ್ದಾರೆ.