ಬೆಂಗಳೂರು, (ಮಾ.08): ನಟ ಪ್ರಕಾಶ್​ ರಾಜ್​ ಅವರ ವಿರುದ್ಧ ಅವಹೇಳನಕಾರಿ ಟ್ವೀಟ್​ ಮಾಡಿದ್ದ ಪ್ರಕರಣದಲ್ಲಿ ಮೈಸೂರು-ಕೊಡಗು ಸಂಸದ ಪ್ರತಾಪ್​ ಸಿಂಹ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಅವಹೇಳನಕಾರಿ ಟ್ವೀಟ್​ಗೆ ಸಂಬಂಧಿಸಿದಂತೆ ನಟ ಪ್ರಕಾಶ್​ ರಾಜ್​ ಅವರು ಮೈಸೂರಿನ ನ್ಯಾಯಾಲಯದಲ್ಲಿ 1 ರೂ.ಗೆ ಮಾನನಷ್ಟ ಕೇಸು ದಾಖಲಿಸಿದ್ದರು. 

ಈ ಪ್ರಕರಣ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿತ್ತು. ಆದರೆ, ಸತತವಾಗಿ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಖುದ್ದು ನ್ಯಾಯಾಲಯಕ್ಕೆ ಹಾಜರಾಗಬೇಕೆಂದು ಫೆ.23ರಂದು ಜಾಮೀನು ರಹಿತ ವಾರಂಟ್​ ಜಾರಿ ಮಾಡಿತ್ತು. 

ಇಂದು (ಶುಕ್ರವಾರ) ಕೋರ್ಟ್ ಗೆ ಹಾಜರಾಗಿದ್ದ ಪ್ರತಾಪ್ ಸಿಂಹ  ಅವರನ್ನು ಕಸ್ಟಡಿಗೆ ಪಡೆದಿದೆ. ಪ್ರಕರಣವನ್ನು ಮತ್ತೊಮ್ಮೆ ವಿಚಾರಣೆಗೆ ಕೈಗೆತ್ತಿಕೊಳ್ಳುವರೆಗೆ ಅವರನ್ನು ಸುಪರ್ದಿಯಲ್ಲಿಟ್ಟುಕೊಳ್ಳುವಂತೆ ಕೋರ್ಟ್, ಪೊಲೀಸರಿಗೆ ಸೂಚಿಸಿದೆ. 

ಸಂಸದ ಪ್ರತಾಪ್ ಸಿಂಹ ಬಂಧನಕ್ಕೆ ವಾರೆಂಟ್​ ಜಾರಿ

ಪರ್ತಕರ್ತೆ ಗೌರಿ ಹತ್ಯೆ ಸಂಬಂಧ ರಾಜ್​ ಮತ್ತು ಪ್ರತಾಪ್​ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ವಾಗ್ವಾದ ನಡೆಯುತ್ತಿತ್ತು. ಈ ನಡುವೆ ಗೌರಿ ಹತ್ಯೆ ವಿಚಾರವಾಗಿ ಪ್ರಕಾಶ್​ ರಾಜ್​ ಪ್ರಧಾನಿಯನ್ನು ಟೀಕಿಸಿದ್ದರು. 

ಇದಕ್ಕೆ ಟ್ವಿಟರ್​ ಮೂಲಕ ತಿರುಗೇಟು ನೀಡಲು ಹೋಗಿದ್ದ ಸಂಸದ ಪ್ರತಾಪ್​ ಸಿಂಹ, ” ಮಗ ಮೃತಪಟ್ಟಿದ್ದರೂ ಡ್ಯಾನ್ಸರ್ ಹಿಂದೆ ಓಡಾಡಿದವರಿಗೆ ಪ್ರಧಾನಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ,” ಎಂದು ಟ್ವೀಟಿಸಿದ್ದರು. 

ಮಗನ ಸಾವನ್ನು ಅಣಕಿಸುವಂತೆ ಟೀಕಿಸಿರುವ ಪ್ರತಾಪ್​ಸಿಂಹ ಅವರಿಗೆ ವಿವರಣೆ ಕೇಳಿ ರಾಜ್​ ಲೀಗಲ್ ನೋಟಿಸ್ ನೀಡಿದ್ದರು. 

ಆದರೆ,ಅದಕ್ಕೆ ಸರಿಯಾಗಿ ಉತ್ತರಿಸದಿದ್ದರಿಂದ ರೈ ಅವರು ಕಳೆದ ವರ್ಷ ಫೆ.27ರಂದು ಮೈಸೂರಿನ ನಾಲ್ಕನೇ ಜೆಎಂಎಫ್ ನ್ಯಾಯಾಲಯದಲ್ಲಿ ಕೇವಲ ಒಂದು ರೂ. ಪರಿಹಾರ ನೀಡುವಂತೆ ಕೋರಿ ಪ್ರತಾಪ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.